ADVERTISEMENT

ಕುಟುಂಬದಲ್ಲಿ ಲಿಂಗತ್ವ: ಯೋಚನಾಕ್ರಮ ಬದಲಾಗಲಿ

ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್ ಶಂಕರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 8:26 IST
Last Updated 14 ಫೆಬ್ರುವರಿ 2017, 8:26 IST
ಕಲಬುರ್ಗಿಯ ಎಂ.ಎಸ್.ಇರಾನಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಪ್ರೊ.ಸಿ.ಎ.ಸೋಮಶೇಖರಪ್ಪ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು
ಕಲಬುರ್ಗಿಯ ಎಂ.ಎಸ್.ಇರಾನಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಪ್ರೊ.ಸಿ.ಎ.ಸೋಮಶೇಖರಪ್ಪ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು   
ಕಲಬುರ್ಗಿ:  ಕೌಟುಂಬಿಕ ವ್ಯವಸ್ಥೆಯಲ್ಲಿ ಲಿಂಗತ್ವ ಕುರಿತು ವೈಯಕ್ತಿಕವಾಗಿ ಮತ್ತು ಮಾನಸಿಕವಾಗಿ ಬದಲಾವಣೆ ಆಗುತ್ತಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜೋಗನ್ ಶಂಕರ್‌ ಅಭಿಪ್ರಾಯಪಟ್ಟರು.
 
ನಗರದ ಎಂ.ಎಸ್. ಇರಾನಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಖಾಸಗಿ ಕಾಲೇಜುಗಳ ಶಿಕ್ಷಕರ ಸಂಘದ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘ಆಧುನಿಕ ಭಾರತೀಯ ಕುಟುಂಬಗಳಲ್ಲಿ ಬದಲಾಗುತ್ತಿರುವ ಲಿಂಗಾಧಾರಿತ ಪಾತ್ರಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
 
5 ಸಾವಿರ ವರ್ಷಗಳಿಂದ ಮಹಿಳೆಗೆ ಹಲವು ನಿಯಂತ್ರಣಗಳನ್ನು ಹೇರಲಾಗಿದೆ. ಇತ್ತೀಚಿನ ದಿನಗಳಲ್ಲಿ ಅದು ಬದಲಾವಣೆ ಆಗುತ್ತಿದೆಯಾದರೂ, ಅದು ಸಂಪೂರ್ಣವಾಗಿ ಬದಲಾವಣೆಯಾಗಲು ಸಮಯ ಬೇಕಾಗುತ್ತದೆ ಎಂದು ಹೇಳಿದರು.
 
ಕುಟುಂಬದಲ್ಲಿ ಲಿಂಗತ್ವದ ಪಾತ್ರಗಳ ಕುರಿತು ನಮ್ಮ ಯೋಚನಾಕ್ರಮ ಬದಲಾಗಬೇಕು. ಇದರಲ್ಲಿ ಬಾಹ್ಯವಾಗಿ ಬದಲಾವಣೆಯಾದರೂ ಆಂತರಿಕವಾಗಿ ಬದಲಾಗದಿದ್ದರೆ ಯಾವುದೇ ಪ್ರಯೋಜನ ಇಲ್ಲ ಎಂದರು.
 
ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಕುಟುಂಬಕ್ಕೆ ಮಹತ್ವದ ಸ್ಥಾನ ಇದೆ. ಮಹಿಳೆ ಕೇವಲ ಮಕ್ಕಳು, ಮನೆಯನ್ನು ನೋಡಿಕೊಂಡಿರಬೇಕು. ಪುರುಷ ಮನೆಗೆ ಬೇಕಾದ ಸಂಪನ್ಮೂಲ ಸಂಗ್ರಹಿಸಬೇಕು ಎಂಬ ಮನಃಸ್ಥಿತಿ ಬದಲಾಗಬೇಕು. ಆಗ ಇಡೀ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
 
ಕರ್ನಾಟಕ ವಿಶ್ವವಿದ್ಯಾಲಯದ ಸಮಾಜವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಎ.ಸೋಮಶೇಖರಪ್ಪ ಮಾತನಾಡಿ, ಎಲ್ಲಿಯವರೆಗೆ ಮಹಿಳೆಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲವೋ ಅಲ್ಲಿವರೆಗೆ ಮಹಿಳಾ ಸಬಲೀಕರಣ ಸಾಧ್ಯವಿಲ್ಲ ಎಂದು ಹೇಳಿದರು.
 
ಕೌಟುಂಬಿಕ ವ್ಯವಸ್ಥೆಯಲ್ಲಿ ಮಹಿಳೆ ಇದೇ ಕೆಲಸ ಮಾಡಬೇಕು ಎಂದು ನಿಯಂತ್ರಣ ಹೇರುವುದು ನಿಲ್ಲಬೇಕು. ಕೆಲವು ಮಿತಿಗಳ ನಡುವೆಯೂ, ನಿರ್ವಹಿಸುವ ಜವಾಬ್ದಾರಿಯಲ್ಲಿ ಬದಲಾವಣೆಯಾಗಬೇಕಿರುವುದು ಬಹಳ ಮುಖ್ಯ ಎಂದರು.
 
ಕುಟುಂಬದ ನಿರ್ವಹಣೆ ಮತ್ತು ಆರ್ಥಿಕತೆಗೆ ಇಬ್ಬರೂ ಸಮಾನವಾಗಿ ಕೊಡುಗೆ ನೀಡುತ್ತಿದ್ದೇವೆ ಎಂಬ ಭಾವನೆ ಮಹಿಳೆ ಮತ್ತು ಪುರುಷರಲ್ಲಿ ಇರಬೇಕು. ಮನಃಸ್ಥಿತಿ ಬದಲಾಗದ ಹೊರತು ಕೌಟುಂಬಿಕ ವ್ಯವಸ್ಥೆಯಲ್ಲಿ ಲಿಂಗಾಧಾರಿತ ಪಾತ್ರಗಳಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹೇಳಿದರು.
 
ಮನಸ್ಥಿತಿ ಬದಲಾಗದಿರುವುದಕ್ಕೆ ಬಡತನ, ಅನಕ್ಷರತೆ, ಆರ್ಥಿಕ ಮಟ್ಟ ಸಹ ಕಾರಣವಾಗಿವೆ. ಇದು ವ್ಯಾಪಕ ದೃಷ್ಟಿಕೋನದಲ್ಲಿ ಬದಲಾವಣೆಯಾಗಬೇಕಾದರೆ ಶಿಕ್ಷಣ ಬಹಳ ಮುಖ್ಯ. ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಸಮಾಧಾನಕರ ಸಂಗತಿ ಎಂದರು.
 
ಗುಲಬರ್ಗಾ ವಿವಿ ಸಮಾಜವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಶಿಂಧೆ ಜಗನ್ನಾಥ, ಹೈ.ಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಭೀಮಳ್ಳಿ, ಎಂ.ಎಸ್. ಇರಾನಿ ಕಾಲೇಜಿನ ಪ್ರಾಚಾರ್ಯ ಡಾ.ಈಶ್ವರಯ್ಯ ಮಠ, ಗುಲಬರ್ಗಾ ವಿಶ್ವವಿದ್ಯಾಲಯದ ಖಾಸಗಿ ಕಾಲೇಜುಗಳ ಶಿಕ್ಷಕರ ಸಂಘದ ಅಧ್ಯಕ್ಷ ಎಸ್‌.ಎಲ್. ಪಾಟೀಲ, ಹೋಮಿ ಇರಾನಿ ಅವರ ಮೊಮ್ಮಗ ನವರೋಜ್ ಇರಾನಿ ಇದ್ದರು.
 
21ನೇ ಶತಮಾನ ಬದಲಾವಣೆಯ ಯುಗ. ಮಹಿಳೆ ಕೀಳರಿಮೆಯನ್ನು ಬಿಟ್ಟು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು  ಪ್ರೊ.ಜೋಗನ್ ಶಂಕರ್‌, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.