ADVERTISEMENT

ಕೇಂದ್ರ ಗ್ರಂಥಾಲಯಕ್ಕೆ ಬರಲಿದೆ ಹೈಟೆಕ್ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 7:18 IST
Last Updated 18 ಸೆಪ್ಟೆಂಬರ್ 2017, 7:18 IST
ಕಲಬುರ್ಗಿಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಮೊದಲ ಮಹಡಿಯ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು
ಕಲಬುರ್ಗಿಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಮೊದಲ ಮಹಡಿಯ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು   

ಕಲಬುರ್ಗಿ: ನಗರ ಕೇಂದ್ರ ಗ್ರಂಥಾಲಯದಲ್ಲಿ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ವಾಚಕರಿಗೆ ಅನುಕೂಲ ಕಲ್ಪಿಸಲು ಗ್ರಂಥಾಲಯ ಇಲಾಖೆ ಮುಂದಾಗಿದೆ.
2012ರಲ್ಲಿ ನಗರ ಕೇಂದ್ರ ಗ್ರಂಥಾಲಯದ ಕಟ್ಟಡ ನಿರ್ಮಾಣವಾಗಿದೆ. ಸದ್ಯ ವಿಶಾಲ ಕೊಠಡಿ ಇದ್ದು, ಮೊದಲ ಮಹಡಿಯ ನಿರ್ಮಾಣ ಕಾರ್ಯ ನಡೆಯುತ್ತಿದೆ. 

ಲೋಕೋಪಯೋಗಿ ಇಲಾಖೆ ಕಾಮಗಾರಿ ನಿರ್ವಹಿಸುತ್ತಿದ್ದು, ₹1.31 ಕೋಟಿ ವೆಚ್ಚದಲ್ಲಿ ಮೊದಲ ಮಹಡಿ ನಿರ್ಮಾಣವಾಗಲಿದೆ. ಕಾಮಗಾರಿ ಆರಂಭವಾಗಿ ಮೂರು ತಿಂಗಳಾಗಿದ್ದು, ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

‘ನೆಲಮಹಡಿಯಲ್ಲಿ ಸ್ಥಳಾವಕಾಶದ ಕೊರತೆ ಇತ್ತು. ಪುಸ್ತಕಗಳು, ನಿಯತಕಾಲಿಕೆಗಳು, ಕಚೇರಿ ಎಲ್ಲವೂ ನೆಲಮಹಡಿಯಲ್ಲೇ ಇವೆ. ಹೀಗಾಗಿ ಓದುಗರಿಗೆ ಸಮಸ್ಯೆಯಾಗುತ್ತಿದೆ. ಅದನ್ನು ತಪ್ಪಿಸಲು ಮೊದಲ ಮಹಡಿಯನ್ನು ನಿರ್ಮಾಣ ಮಾಡಲಾಗುತ್ತಿದೆ’ ಎಂದು ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಅಜಯಕುಮಾರ್‌ ತಿಳಿಸಿದರು.

ADVERTISEMENT

‘ಮೊದಲ ಮಹಡಿ ನಿರ್ಮಾಣವಾದ ನಂತರ ಅದರಲ್ಲಿ ಪುಸ್ತಕಗಳು, ನಿಯತಕಾಲಿಕೆಗಳು, ಮಕ್ಕಳ ಪುಸ್ತಕಗಳಿಗೆ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗುತ್ತಿದೆ. ಸುಮಾರು 250 ಜನ ಕುಳಿತುಕೊಳ್ಳಲು ಸಾಧ್ಯವಾಗುವಂತಹ ಪೂರಕ ಮಾಹಿತಿ ಕೇಂದ್ರ ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು.

‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಅದಕ್ಕೆ ಅಂತರ್ಜಾಲದ ಅವಶ್ಯಕತೆ ಇದೆ. ಹೀಗಾಗಿ ಗ್ರಂಥಾಲಯದಲ್ಲಿ ಸೈಬರ್‌ ಕೇಂದ್ರ ಮತ್ತು ವೈಫೈ ಸೌಲಭ್ಯವನ್ನು ನೀಡಲಾಗುವುದು. ಸೈಬರ್‌ ಕೇಂದ್ರ ಬಳಸಲು ಎಷ್ಟು ಶುಲ್ಕ ನಿಗದಿಪಡಿಸಬೇಕು ಎಂಬ ಬಗ್ಗೆ ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಗುವುದು’ ಎಂದರು.

‘ಮೊದಲ ಮಹಡಿ ಪೂರ್ಣಗೊಂಡ ನಂತರ ಎರಡನೇ ಮಹಡಿಯನ್ನು ನಿರ್ಮಿಸಲಾಗುವುದು. ಅಲ್ಲಿ ಐಎಎಸ್, ಕೆಎಎಸ್‌ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗುವುದು’ ಎಂದು ತಿಳಿಸಿದರು.

‘ಗ್ರಂಥಾಲಯ ಇಲಾಖೆ ವತಿಯಿಂದ ನಾಲ್ಕು ತಿಂಗಳ ಅವಧಿಯ ಗ್ರಂಥಾಲಯ ವಿಜ್ಞಾನ ತರಬೇತಿ ನೀಡಲಾಗುತ್ತಿದೆ. ನಗರ ಕೇಂದ್ರ ಗ್ರಂಥಾಲಯ ಕಟ್ಟಡದಲ್ಲಿ ಸ್ಥಳದ ಅಭಾವ ಇರುವುದರಿಂದ ಬಾಡಿಗೆ ಕಟ್ಟಡದಲ್ಲಿ ತರಬೇತಿ ನೀಡಲಾಗುತ್ತಿದೆ.

ಮೊದಲ ಮಹಡಿ ನಿರ್ಮಾಣವಾದರೆ ತರಬೇತಿಯನ್ನು ಇಲ್ಲೇ ನಡೆಸಲು ಅನುಕೂಲವಾಗಲಿದೆ’ ಎಂದರು. ನಗರ ಕೇಂದ್ರ ಗ್ರಂಥಾಲಯ ಸೇರಿದಂತೆ 15 ಶಾಖಾ ಗ್ರಂಥಾಲಯಗಳು ನಗರದಲ್ಲಿವೆ. ನಗರ ಕೇಂದ್ರ ಗ್ರಂಥಾಲಯದಲ್ಲಿ 1.05 ಲಕ್ಷ ಪುಸ್ತಕಗಳ ಸಂಗ್ರಹ ಇದೆ. ವಿದ್ಯಾರ್ಥಿಗಳು, ಮಕ್ಕಳು, ಹಿರಿಯ ನಾಗರಿಕರು ಪ್ರತಿ ದಿನ ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.