ADVERTISEMENT

ಕೇಂದ್ರ ಸರ್ಕಾರ ಶೇ 50 ಸಾಲ ಮನ್ನಾ ಮಾಡಲಿ

ಶಾಸಕ ಮಾಲೀಕಯ್ಯ ಗುತ್ತೇದಾರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 5:47 IST
Last Updated 17 ಜನವರಿ 2017, 5:47 IST
ಕೇಂದ್ರ ಸರ್ಕಾರ ಶೇ 50 ಸಾಲ ಮನ್ನಾ ಮಾಡಲಿ
ಕೇಂದ್ರ ಸರ್ಕಾರ ಶೇ 50 ಸಾಲ ಮನ್ನಾ ಮಾಡಲಿ   

ಅಫಜಲಪುರ: ‘ರಾಜ್ಯದಲ್ಲಿ ಸತತ 2 ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತ ಕಂಗಾಲಾಗಿದ್ದು, ರೈತರ ಸಾಲ ಮನ್ನಾ ಮಾಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರ ಶೇ 50 ರಷ್ಟು ಸಾಲ ಮನ್ನಾ  ಮಾಡಬೇಕು’ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.

ತಾಲ್ಲೂಕಿನ ಅಳ್ಳಗಿ (ಬಿ) ಗ್ರಾಮದಲ್ಲಿ ಈಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸೋಮವಾರ ₹ 5 ಲಕ್ಷ ಪರಿಹಾರ ಚೆಕ್‌ ವಿತರಣೆ ಮಾಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಹಕಾರ ನೀಡಿದರೆ ರಾಜ್ಯ ಸರ್ಕಾರ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಿದೆ ಎಂದು ತಿಳಿಸಿದರು.

ಬೆಳೆ ಹಾನಿ ಬಗ್ಗೆ ಈಗಾಗಲೇ ತಾಲ್ಲೂಕು ಆಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಕೇಂದ್ರ ಸರ್ಕಾರದಿಂದ ಈಗಾಗಲೇ ₹ 1,700 ಕೋಟಿ ಅನುದಾನ ಬೆಳೆ ಪರಿಹಾರಕ್ಕಾಗಿ ನೀಡಿದ್ದಾರೆ. ಇದು ಯಾವುದಕ್ಕೂ ಸಾಲುವುದಿಲ್ಲ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಅನುದಾನಕ್ಕೆ ಸೇರಿಸಿ ರೈತರಿಗೆ ಬೆಳೆ ಪರಿಹಾರ ನೀಡಲಿದೆ ಎಂದು ಅವರು ತಿಳಿಸಿದರು.

ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಸಾಲಕ್ಕೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ, ನಿಮ್ಮೊಂದಿಗೆ ಸರ್ಕಾರ ಇದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ಸಾಕಷ್ಟು ರೈತರಿಗೆ ಸೌಲಭ್ಯಗಳನ್ನು ನೀಡಲಾಗುತ್ತದೆ. ಅದನ್ನು ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶಂಕರಗೌಡ ಪಾಟೀಲ, ತಾ.ಪಂ ಮಾಜಿ ಅಧ್ಯಕ್ಷ ಶಿವಪುತ್ರಪ್ಪ ಕರೂರ, ಖಾದಿ ಗ್ರಾಮೋದ್ಯೋಗ ಮಂಡಳಿ ರಾಜ್ಯ ನಿರ್ದೇಶಕರ ಮಲ್ಲಿನಾಥ ಪಾಟೀಲ ಮುಖಂಡರಾದ ಅರವಿಂದ ಹಾಳಕಿ, ಸಿದ್ದುಗೌಡ ಪಾಟೀಲ ಭಾಸಗಿ, ಪಪ್ಪು ಪಟೇಲ, ಮುಳ್ಳಯ್ಯ ಮಠ, ಅಂಬಾರಾಯ, ಸಹಾಯಕ ನಿರ್ದೇಶಕ ಶರಣಗೌಡ ಪಾಟೀಲ, ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ, ತಾಂತ್ರಿಕ ಕೃಷಿ ಅಧಿಕಾರಿ ಸರ್ಧಾರ ಭಾಷಾ ನದಾಫ್‌, ಕೃಷಿ ಸಹಾಯಕ ಮಡಿವಾಳಪ್ಪ ಹೋಳಕರ, ಪಿಡಿಒ ಶರಣಪ್ಪ ಡಂಗಿ, ಕಂದಾಯ ನಿರೀಕ್ಷಕ ನಂದಿಕೋಲ ಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.