ADVERTISEMENT

ಕೊಚ್ಚಿಹೋದ ಕಲ್ಲೂರ್ ಬ್ಯಾರೇಜ್ ಸೇತುವೆ

ವೆಂಕಟೇಶ ಆರ್.ಹರವಾಳ
Published 21 ಸೆಪ್ಟೆಂಬರ್ 2017, 5:36 IST
Last Updated 21 ಸೆಪ್ಟೆಂಬರ್ 2017, 5:36 IST
ಕಲ್ಲೂರ್(ಬಿ)–ಚಿನಮಳ್ಳಿ ಬ್ರಿಜ್ ಕಂ ಬ್ಯಾರೇಜ್ ಸೇತುವೆ ಕೊಚ್ಚಿಕೊಂಡು ಹೋಗಿದೆ
ಕಲ್ಲೂರ್(ಬಿ)–ಚಿನಮಳ್ಳಿ ಬ್ರಿಜ್ ಕಂ ಬ್ಯಾರೇಜ್ ಸೇತುವೆ ಕೊಚ್ಚಿಕೊಂಡು ಹೋಗಿದೆ   

ಜೇವರ್ಗಿ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಸೆ. 17ರಂದು ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ ಜೇವರ್ಗಿ ತಾಲ್ಲೂಕಿನ ಕಲ್ಲೂರ್ (ಬಿ) ಮತ್ತು ಅಫಜಲಪುರ್ ತಾಲ್ಲೂಕಿನ ಚಿನಮಳ್ಳಿ ಮಧ್ಯೆ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಜ್ ಕಂ ಬ್ಯಾರೇಜ್ ಸೇತುವೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ಜೇವರ್ಗಿ ಮತ್ತು ಅಫಜಲಪುರ ತಾಲ್ಲೂಕಿನ ಮಧ್ಯೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಕಲ್ಲೂರ್ (ಬಿ)–ಚಿನಮಳ್ಳಿ ಬ್ರಿಜ್ ಕಂ ಬ್ಯಾರೇಜ್‌ಗೆ ಅಳವಡಿಸಿದ ಗೇಟ್‌ಗಳನ್ನು ತೆರೆಯದ ಕಾರಣ ಸೇತುವೆ ಕೊಚ್ಚಿಕೊಂಡು ಹೋಗಿದೆ. ಭೀಮಾ ಹಿನ್ನೀರಿನಿಂದ ಭೀಮಾ ನದಿ ಪಾತ್ರದ ಹಳ್ಳಿಗಳ ರೈತರ ಜಮೀನಿನಲ್ಲಿನ ಬೆಳೆಗಳು ಹಾಗೂ ಫಲವತ್ತಾದ ಮಣ್ಣು ನದಿಗೆ ಕೊಚ್ಚಿಕೊಂಡು ಹೋಗಿದೆ.

ಬೆಳೆ ಹಾನಿ: ತಾಲ್ಲೂಕಿನ ಕಲ್ಲೂರ್ (ಬಿ) ಬ್ರಿಜ್ ಕಂ ಬ್ಯಾರೇಜ್ ಸೇತುವೆ ಕೊಚ್ಚಿಹೋಗಿದ್ದರಿಂದ ತಾಲ್ಲೂಕಿನ ನೆಲೋಗಿ, ಕಲ್ಲೂರ್ (ಕೆ), ಕಲ್ಲೂರ್ (ಬಿ), ಬಳ್ಳುಂಡಗಿ, ನೆಲೋಗಿ, ಕೂಡಲಗಿ, ಯಂಕಂಚಿ, ಮಾಹೂರ್ ಗ್ರಾಮದ ರೈತರ ಜಮೀನುಗಳಲ್ಲಿ ಬಿತ್ತನೆ ಮಾಡಿದ ಮುಂಗಾರು ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ ಎಂದು ಕಲ್ಲೂರ್ (ಬಿ) ಗ್ರಾಮದ ರೈತ ದೊಡ್ಡಪ್ಪ ಒಡೆಯರ್ ಬುಧವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪತ್ರಕರ್ತರ ಮುಂದೆ ಅಳಲು ತೋಡಿಕೊಂಡರು.

ADVERTISEMENT

‘ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ನಿರ್ಲಕ್ಷದಿಂದ ನೆಲೋಗಿ ಹೋಬಳಿಯಲ್ಲಿನ ಫಲವತ್ತಾದ ಭೂಮಿ ಮತ್ತು ಬೆಳೆಗಳು ಕೊಚ್ಚಿಕೊಂಡು ಹೋಗಿದೆ. ಬೆಳೆ ಹಾನಿಗೀಡಾದ ರೈತರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಕಲ್ಲೂರ್ (ಕೆ) ಗ್ರಾಮದ ರೈತ ರುದ್ರಗೌಡ ಮಾಲಿಪಾಟೀಲ್ ಒತ್ತಾಯಿಸಿದ್ದಾರೆ.

ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಜೂನ್ ತಿಂಗಳ ಅಂತ್ಯದಲ್ಲಿ ಕಲ್ಲೂರ್ (ಬಿ)–ಚಿನಮಳ್ಳಿ ಬ್ರಿಜ್ ಕಂ ಬ್ಯಾರೇಜ್‌ಗೆ ಅಳವಡಿಸಿದ ಗೇಟ್‌ಗಳನ್ನು ತೆರೆಯದೇ ಇದ್ದ ಕಾರಣ ಫಲವತ್ತಾದ ಜಮೀನು ಹಾನಿಗೀಡಾಗಿವೆ ಎಂದು ಕಲ್ಲೂರ್ (ಬಿ) ಗ್ರಾಮದ ರೈತ ದೊಡ್ಡಪ್ಪ ಒಡೆಯರ್ ದೂರಿದರು.

ಸೇತುವೆ ದುರಸ್ತಿಗೆ ಆಗ್ರಹ: ಭೀಮಾ ನದಿಗೆ ಉಂಟಾದ ಪ್ರವಾಹದಿಂದ ಕೊಚ್ಚಿಕೊಂಡು ಹೋಗಿರುವ ಕಲ್ಲೂರ್ (ಬಿ)–ಚಿನಮಳ್ಳಿ ಮಧ್ಯೆ ನಿರ್ಮಿಸಿದ ಬ್ರಿಜ್ ಕಂ ಬ್ಯಾರೇಜ್ ಸೇತುವೆಯನ್ನು ತಕ್ಷಣ ದುರಸ್ತಿಗೊಳಿಸಿ ಜೇವರ್ಗಿ ಮತ್ತು ಅಫಜಲಪುರ ತಾಲ್ಲೂಕಿನ ಮಧ್ಯೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಕಲ್ಲೂರ್ (ಬಿ) ಗ್ರಾಮಸ್ಥರು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.