ADVERTISEMENT

ಕೊತ್ತಲ ಬಸವೇಶ್ವರ ರಥೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 8:31 IST
Last Updated 23 ಏಪ್ರಿಲ್ 2017, 8:31 IST

ಸೇಡಂ: ಜಾಲಿಗಿಡ, ಕಗ್ಗತ್ತಲು ಪ್ರದೇಶದಿಂದ ಕೂಡಿದ್ದ ಸ್ಥಳ ಈಗ ಪ್ರತಿಭಾವಂತರನ್ನು ರೂಪಿಸುವ ಜ್ಞಾನದಾಸೋಹದ ತವನಿಧಿಯಾಗಿದೆ. ಸೇಡಂನ  ಆರಾಧ್ಯ ದೈವ,        ಭಾಗ್ಯದಾತ ಎಂದು ಖ್ಯಾತರಾದ ಸಪ್ಪಣ್ಣಾರ್ಯ ಅವರಿಂದ ಬೆಳಕಿಗೆ ಬಂದ ಕೊತ್ತಲ ಬಸವೇಶ್ವರ ದೇವಾಲಯ ಇಂದು ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಪಾಳುಬಿದ್ದ ಭೂಮಿಯಲ್ಲಿ ಭಕ್ತಿಯ ಬೀಜಬಿತ್ತಿ ಕೀರ್ತಿ ಸಪ್ಪಣ್ಣಾರ್ಯ ಅವರಿಗೆ ಸಲ್ಲುತ್ತದೆ. ಕತ್ತಲಿಂದ ಬೆಳಕಿಗೆ ಬಂದ ಕೊತ್ತಲಬಸವಣ್ಣ ಅನೇಕರ ಬಾಳು ಬೆಳಗಿಸಿದ್ದಾರೆ. ಧರ್ಮ ಮತ್ತು ಸಮಾಜಸೇವೆಗೆ ಸೀಮಿತವಾಗಿದ್ದ ದೇವಾಲಯದಲ್ಲಿ 1974ರಲ್ಲಿ ಮಡಿವಾಳಯ್ಯ ಸ್ವಾಮೀಜಿ ಗುರುಕುಲ ಶಿಕ್ಷಣ ಪ್ರಾರಂಭಿಸಿದರು. ಬನ್ನಿ ಮರದ ಕೆಳಗೆ 6 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಭಾರತೀಯ ಶಿಕ್ಷಣ ಸಮಿತಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಹೆಮ್ಮರವಾಗಿ ಬೆಳೆದಿದೆ.

37ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು, 600ಕ್ಕೂ ಅಧಿಕ ಸಿಬ್ಬಂದಿ, 8,000 ವಿದ್ಯಾರ್ಥಿಗಳು ಇಲ್ಲಿದ್ದಾರೆ. ಕೊತ್ತಲ ಬಸವೇಶ್ವರ ದೇವಾಲಯ ಮತ್ತು ಶಿಕ್ಷಣ ಸಮಿತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಇಲ್ಲಿ ಶಿಕ್ಷಣ ಪಡೆದವರು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ದೇಶ, ವಿದೇಶಗಳ ಪ್ರತಿಷ್ಠಿತ  ಸಂಸ್ಥೆಗಳಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ. ವೈದ್ಯಕೀಯ, ತಂತ್ರಜ್ಞಾನ ಶಿಕ್ಷಣ ಹೊರತು ಪಡಿಸಿ ಉಳಿದೆಲ್ಲ ಕೋರ್ಸ್‌ಗಳನ್ನು ಸಂಸ್ಥೆಯ ಕಾಲೇಜುಗಳಲ್ಲಿ ಆರಂಭಿಸಲಾಗಿದೆ.

ADVERTISEMENT

ಪ್ರತಿವರ್ಷ ಕೊತ್ತಲ ಬಸವೇಶ್ವರರ ಜಾತ್ರೆ ನಡೆಯುತ್ತದೆ. ಲಕ್ಷಾಂತರ ಜನ ಜಾತ್ರೆಗೆ ಬರುತ್ತಾರೆ. ಹಳೆಯ ವಿದ್ಯಾರ್ಥಿಗಳು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಸೇಡಂ ತಾಲ್ಲೂಕು ಮಾತ್ರವಲ್ಲ ಕಲಬುರ್ಗಿ ಜಿಲ್ಲೆ, ಪಕ್ಕದ ರಾಜ್ಯಗಳಿಂದಲೂ ಭಕ್ತರು ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಐದು ದಿನಗಳ ಜಾತ್ರೆ ಇಲ್ಲಿನ ಪ್ರತಿಯೊಬ್ಬರ ಮನೆಯ ಹಬ್ಬವಾಗಿರುತ್ತದೆ.ಅಗ್ಗಿ, ಪ್ರವೇಶ, ಪುರಂವತಿಕೆ, ಪಲ್ಲಕ್ಕಿ ಹಾಗೂ ರಥೋತ್ಸವ ಅದ್ಧೂರಿಯಾಗಿ ನಡೆಯಲಿವೆ. ಗೀಗೀಪದ, ಭಜನೆ ಸೇರಿದಂತೆ ಸಾಂಪ್ರದಾಯಕ ಕಲೆಗಳು ಪ್ರದರ್ಶನಗೊಳ್ಳಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.