ADVERTISEMENT

ಕೊನೆಗೂ ಕಲಬುರ್ಗಿ ಐಟಿ ಪಾರ್ಕ್‌ ಭರ್ತಿ

ರವಿ ಎಸ್.ಬಳೂಟಗಿ
Published 21 ನವೆಂಬರ್ 2017, 9:10 IST
Last Updated 21 ನವೆಂಬರ್ 2017, 9:10 IST
ಕಲಬುರ್ಗಿಯ ಐಟಿ ಪಾರ್ಕ್‌ನ ಕಟ್ಟಡ
ಕಲಬುರ್ಗಿಯ ಐಟಿ ಪಾರ್ಕ್‌ನ ಕಟ್ಟಡ   

ಕಲಬುರ್ಗಿ: ಸ್ಥಾಪನೆಯಾದ ಹಲವು ವರ್ಷಗಳ ನಂತರವೂ ಪಾಳುಕಟ್ಟಡದಂತಿದ್ದ ಇಲ್ಲಿನ ಐಟಿ ಪಾರ್ಕ್‌ನಲ್ಲಿ ಔದ್ಯೋಗಿಕ ಚಟುವಟಿಕೆಗಳು ಗರಿಗೆದರಿವೆ. ಐಟಿ ಪಾರ್ಕ್‌ನ ಕೊಠಡಿಗಳನ್ನು ವಿವಿಧ ಕಂಪೆನಿಗಳು ಬಾಡಿಗೆ ಪಡೆದಿವೆ. ಮತ್ತಷ್ಟು ಐಟಿ ಕಂಪೆನಿಗಳು ಜಾಗ ನೀಡುವಂತೆ ಮನವಿ ಸಲ್ಲಿಸಿವೆ. ಪ್ರಸ್ತುತ 16 ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಸಾಫ್ಟ್‌ವೇರ್‌ ಕಂಪೆನಿಗಳೇ ಹೆಚ್ಚು. ಉದ್ಯೋಗ ಮಾಹಿತಿ ಕೇಂದ್ರ, ಗ್ರಾಹಕ ಸೇವಾ ಕಂಪೆನಿಗಳಿಗೂ ಈ ಪಾರ್ಕ್‌ ಆಸರೆಯಾಗಿದೆ.

ವೆಬ್‌ಡಿಸೈನ್, ತಂತ್ರಾಂಶ ಅಭಿವೃದ್ಧಿ, ಹೊರ ಗುತ್ತಿಗೆ ನಿರ್ವಹಣೆ(ಬಿಪಿಒ), ಮಾನವ ಸಂಪನ್ಮೂಲ(ಎಚ್‌.ಆರ್‌) ಸರಬರಾಜು ವಿಭಾಗಗಳಲ್ಲಿ ಸ್ಥಳೀಯರು ಕೆಲಸ ಮಾಡುತ್ತಿದ್ದಾರೆ. ರಿಲಾಯನ್ಸ್‌ನ ಜಿಯೊ ಪ್ರಾದೇಶಿಕ ಕೇಂದ್ರ ಹೊರತುಪಡಿಸಿದರೆ ಉಳಿದೆಲ್ಲವೂ ಹೈದರಾಬಾದ್‌ ಕರ್ನಾಟಕ ಭಾಗದ ಕಂಪೆನಿಗಳಾಗಿರುವುದು ವಿಶೇಷ.

ಪೂಜ್ಯ ದೊಡ್ಡಪ್ಪ ಅಪ್ಪ(ಪಿಡಿಎ) ಎಂಜಿನಿಯರಿಂಗ್‌ ಕಾಲೇಜು ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾಲೇಜುಗಳು ಇಲ್ಲಿನ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಇದರಿಂದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹಾಗೂ ತರಬೇತಿಗೂ ಐಟಿ ಪಾರ್ಕ್‌ ನೆರವು ನೀಡಿದಂತಾಗಿದೆ.

ADVERTISEMENT

1.72 ಎಕರೆ ವಿಸ್ತೀರ್ಣದಲ್ಲಿ ವಿಶಾಲವಾದ ಕ್ಯಾಂಪಸ್‌ ಒಳಗೊಂಡಿರುವ ಈ ಪಾರ್ಕ್‌ 2014ರಲ್ಲಿ ಉದ್ಘಾಟನೆಯಾಯಿತು. ಆರು ಮಹಡಿಯ ಬೃಹತ್ ಕಟ್ಟಡ ಇದಾಗಿದೆ. ನೆಲ ಅಂತಸ್ತಿನಲ್ಲಿ ಬೈಕ್‌ ಹಾಗೂ ಮೊದಲ ಮಹಡಿಯಲ್ಲಿ ಕಾರ್‌ ಪಾರ್ಕಿಂಗ್‌ಗೆ ಅವಕಾಶವಿದೆ. ನಾಲ್ಕು ಮಹಡಿಗಳ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ. ಪ್ರತಿ ಚದರ ಅಡಿಗೆ ₹5 ಮಾಸಿಕ ಬಾಡಿಗೆ ಹಾಗೂ ₹1 ನಿರ್ವಹಣಾ ವೆಚ್ಚವನ್ನು ನಿಗದಿಯಾಗಿದೆ.

ಐಟಿ ಪಾರ್ಕ್‌ನ ಕಾರ್ಯಾಲಯಕ್ಕಾಗಿ ಮೀಸಲಾಗಿದ ಜಾಗವನ್ನೂ ಇತ್ತೀಚೆಗೆ ಬಾಡಿಗೆ ನೀಡಲಾಗಿದೆ. ಸಣ್ಣ ಉದ್ಯಮಿಗಳನ್ನು ಉತ್ತೇಜಿಸಲು 25ಕ್ಕೂ ಹೆಚ್ಚು ಕಂಪ್ಯೂಟರ್‌ಗಳನ್ನು ಅಂತರ್ಜಾಲ ಸೇವೆಯೊಂದಿಗೆ ಬಾಡಿಗೆ ನೀಡಲಾಗುತ್ತಿದೆ. ಉದ್ಯೋಗಿಗಳಿಗಾಗಿ ಎರಡು ಲಿಫ್ಟ್‌ಗಳ ಸೌಲಭ್ಯವೂ ಇದೆ.

‘ಆರಂಭದಲ್ಲಿ ಕಂಪೆನಿಗಳು ಹಿಂದೇಟು ಹಾಕುತ್ತಿದ್ದವು. ಆದರೆ, ಮೂಲ ಸೌಕರ್ಯ, ಭದ್ರತೆ ಹಾಗೂ ಕಡಿಮೆ ಬಾಡಿಗೆಯ ಪ್ರಚಾರ ನಡೆಸಿದ ನಂತರ ಹೆಚ್ಚಿನ ಕಂಪೆನಿಗಳು ಐಟಿ ಪಾರ್ಕ್‌ನತ್ತ ಮುಖಮಾಡುತ್ತಿವೆ’ ಎಂದು ಐಟಿ ಪಾರ್ಕ್‌ನ ತಾಂತ್ರಿಕ ಸಹಾಯಕ ಎನ್‌.ಆರ್‌.ನಾಗೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಂಪೆನಿಗಳು ವಿದ್ಯುತ್‌ ಹಾಗೂ ನೀರಿಗೆ ಮಾತ್ರ ಶುಲ್ಕ ನೀಡುತ್ತಿವೆ. ಶುಚಿತ್ವದ ಖರ್ಚನ್ನು ನಾವೇ ಭರಿಸುತ್ತಿದ್ದೇವೆ. ಐಟಿ–ಬಿಟಿ ಇಲಾಖೆಯ ಇಬ್ಬರು ಅಧಿಕಾರಿಗಳು ಇದ್ದಾರೆ. ಭದ್ರತಾ ಸಿಬ್ಬಂದಿ, ಶುಚಿತ್ವ, ಕಾವಲಿಗಾಗಿ ಒಂಬತ್ತು ಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಅವರು.

ಮೊದಲ ಮಹಡಿ ಬಳಕೆಗೂ ಚಿಂತನೆ: ಕಾರ್‌ ಪಾರ್ಕಿಂಗ್‌ಗಾಗಿ ಮೀಸಲಿಟ್ಟಿರುವ ಮಹಡಿಯಲ್ಲಿ ಮತ್ತಷ್ಟು ಮಳಿಗೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪಾರ್ಕಿಂಗ್‌ ಜಾಗ ಬಹಳ ವಿಸ್ತಾರವಾಗಿದೆ. ಇರುವ ಸ್ಥಳಾವಕಾಶ ಸದ್ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

ಯಾವೆಲ್ಲ ಕಂಪೆನಿಗಳು
ಅಪ್ಪಾ ಟೆಕ್ನಾಲಜಿ, ಕೆ.ಜಿ.ಬಿನ್‌, ಫ್ಯೂಜೆನಿಕ್‌ ಲಿಮಿಟೆಡ್‌, ಟೆಕ್‌ಕ್ಷೇತ್ರಾ ಇನ್ಫೋ ಸಲ್ಯೂಷನ್, 19 ಸಿಂಬಲ್, ಎಸೆಂಟ್ರಿಕ್‌ ಟ್ಯುಟಿಲೇಜ್, ಮರ್‌ಫೆರ್ರಿ ಟೆಕ್ನಾಲಜಿ, ಇನ್ಫೋಥಿಂಕ್‌ ಟೆಕ್ನಾಲಜಿ, ಮೈಂಡ್ಸ್‌ ಸಾಲ್ವಿಟ್‌(ಸಾಫ್ಟ್‌ವೇರ್‌ ಕಂಪೆನಿಗಳು), ಬಿಎಎಸ್‌ಆರ್‌ ಕನ್ಸಲ್ಟೆನ್ಸಿ(ಉದ್ಯೋಗ ಮಾಹಿತಿ ಕೇಂದ್ರ), ವೆಲ್‌ಸ್ಪ್ರಿಂಗ್‌ ಕರಿಯರ್‌ ಸ್ಕೂಲ್‌, ಬೆಂಚ್‌ ಮಾರ್ಕ್‌ ಇಂಟರ್‌ ನ್ಯಾಷನಲ್‌ (ಹೊರಗುತ್ತಿಗೆ ಸೇವೆ), ಎಜಿಎಂ ಸಲ್ಯೂಷನ್‌(ಮಾನವ ಸಂಪನ್ಮೂಲ ವಿಭಾಗ) ಇಲ್ಲಿನ ಕಂಪೆನಿಗಳು.

* * 

ಐಟಿ ಪಾರ್ಕ್‌ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನೀರು, ವಿದ್ಯುತ್‌ ನಿರಂತರವಾಗಿ ಪೂರೈಕೆ ಆಗುತ್ತಿದೆ. ಪಾರ್ಕ್‌ ಹೊರ ಆವರಣದಲ್ಲಿ ಸೋಲಾರ್‌ ಘಟಕ ಸ್ಥಾಪಿಸುವ ಪ್ರಸ್ತಾಪವೂ ಇದೆ.
ಎನ್‌.ಆರ್‌.ನಾಗೇಂದ್ರ
ತಾಂತ್ರಿಕ ಸಹಾಯಕ, ಕಲಬುರ್ಗಿ ಐಟಿ ಪಾರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.