ADVERTISEMENT

ಜಿಎಸ್‌ಟಿ ಜಾರಿ; ಆರ್ಥಿಕ ಪ್ರಗತಿ ಅಸಾಧ್ಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 5:19 IST
Last Updated 17 ಜುಲೈ 2017, 5:19 IST

ಕಲಬುರ್ಗಿ: ‘ಸರಕು ಸೇವಾ ತೆರಿಗೆ (ಜಿಎಸ್‌ಟಿ)ಯಿಂದ ದೇಶದ ಆರ್ಥಿಕ ಪ್ರಗತಿ ಅಸಾಧ್ಯ’ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಚಂದ್ರ ಪೂಜಾರಿ ಅಭಿಪ್ರಾಯಪಟ್ಟರು. ಇಲ್ಲಿನ ಜಗತ್ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಜಿಎಸ್‌ಟಿ ಜಾರಿ; ದುಡಿಯುವ ಜನರು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ನೇರ ತೆರಿಗೆ ಪಾವತಿದಾರರು ಶೇ 30ರಷ್ಟಿದ್ದರೆ, ಪರೋಕ್ಷ ತೆರಿಗೆದಾರರು ಶೇ 70ರಷ್ಟಿದ್ದಾರೆ. 70ರಷ್ಟು ಜನರಿಗೆ ಜಿಎಸ್‌ಟಿ ಹೊರೆಯಾಗಿ ಪರಿಣಮಿಸುತ್ತದೆ. ದೇಶದ ಆರ್ಥಿಕ ಪ್ರಗತಿಗೆ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯ. ಆರ್ಥಿಕ ಪ್ರಗತಿಯಾಗಲು ದುಡಿಯುವ ವರ್ಗಕ್ಕೆ ಭೂಮಿ, ಬಂಡವಾಳ, ಆರೋಗ್ಯ, ಶಿಕ್ಷಣವನ್ನು ಒದಗಿಸಬೇಕು. ಲಿಂಗ, ಜಾತಿ, ಧರ್ಮ ಮತ್ತು ತಾರತಮ್ಯ ಹೋಗಲಾಡಿಸಬೇಕು. ಆರ್ಥಿಕ ಒಳಗೊಳ್ಳುವಿಕೆ ಮೂಲಕ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ತಿಳಿಸಿದರು.

‘ವ್ಯಾಟ್, ಸೇವಾ ತೆರಿಗೆ, ಆಕ್ಟ್ರಾಯ್, ಪ್ರವೇಶ ತೆರಿಗೆ ಸೇರಿ ಹಲವು ವಿಧದ ತೆರಿಗೆಗಳನ್ನು ರದ್ದುಗೊಳಿಸಿ, ಈಗ ಒಂದೇ ತೆರಿಗೆ ವಿಧಿಸಲಾಗಿದೆ. ಆದರೆ ಸಾರ್ವಜನಿಕರಲ್ಲಿ ಈ ಬಗ್ಗೆ ಸ್ಪಷ್ಟತೆ ಇಲ್ಲ. ಬ್ರ್ಯಾಂಡೆಡ್ ಅಲ್ಲದ ಆಹಾರ ಪದಾರ್ಥಗಳಿಗೆ ತೆರಿಗೆ ವಿಧಿಸಿಲ್ಲ. ಆದರೆ ಬ್ರ್ಯಾಂಡೆಡ್ ಆಹಾರ ಪದಾರ್ಥಗಳಿಗೆ ಶೇ 5ರಿಂದ ಶೇ 12ರಷ್ಟು ತೆರಿಗೆ ವಿಧಿಸಲಾಗಿದೆ. ಹೋಟೆಲ್‌ನವರು ಬ್ರ್ಯಾಂಡೆಡ್ ಅಲ್ಲದ ಪದಾರ್ಥಗಳನ್ನು ತಂದು, ಬ್ರ್ಯಾಂಡೆಡ್ ಎಂದು ಬಿಂಬಿಸಿ ತೆರಿಗೆ ವಸೂಲಿ ಮಾಡಿದರೆ ಹೇಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ’ ಎಂದರು.

ADVERTISEMENT

‘ಕೇಂದ್ರ ಸರ್ಕಾರವು ಶೇ16.5ರಷ್ಟು ನೇರ ತೆರಿಗೆ ಹಾಗೂ ಶೇ 5.5 ರಷ್ಟು ಪರೋಕ್ಷ ತೆರಿಗೆ ವಿಧಿಸುತ್ತಿದೆ. ಈ ತೆರಿಗೆಯನ್ನು ಶೇ20ಕ್ಕೆ ಹೆಚ್ಚಿಸುವ ಮೂಲಕ ಶೇ 2ರಷ್ಟು ತೆರಿಗೆ ಆದಾಯ ಹೆಚ್ಚಳಕ್ಕೆ ಮುಂದಾಗಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ಪೆಟ್ಟು ಬೀಳಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪೆಟ್ರೋಲ್, ಡೀಸೆಲ್, ಮದ್ಯ, ತಂಬಾಕು ಉತ್ಪನ್ನಗಳನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ. ರಿಯಲ್‌ ಎಸ್ಟೇಟ್ ಕೂಡ ಸದ್ಯ ಹೊರಗಿದ್ದು, ದರ ನಿಗದಿ ಬಳಿಕ ಜಿಎಸ್‌ಟಿ ವ್ಯಾಪ್ತಿಗೆ ಬರಲಿದೆ. ಒಟ್ಟಾರೆ ಜಿಎಸ್‌ಟಿಯ ಪರಿಣಾಮದ ಬಗ್ಗೆ ತಿಳಿದುಕೊಳ್ಳಲು ಇನ್ನೂ ಒಂದು ವರ್ಷ ಬೇಕಾಗಬಹುದು’ ಎಂದು ಹೇಳಿದರು.

ಅಖಿಲ ಭಾರತ ಕಿಸಾನ ಸಭಾ ಕೆನಿಂಗ್ ಲೈನ್‌ನ ಕೇಂದ್ರ ಸಮಿತಿ ಸದಸ್ಯ ಮಾರುತಿ ಮಾನ್ಪಡೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಶಿವಗಂಗಾ ರುಮ್ಮಾ, ಸಿಐಟಿಯು ಜಿಲ್ಲಾ ಸಮಿತಿಯ ಶಾಂತಾ ಎನ್.ಘಂಟಿ, ಗಂಗಮ್ಮ ಬಿರಾದಾರ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕಾರ್ಯದರ್ಶಿ ಅಶೋಕ ಮ್ಯಾಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.