ADVERTISEMENT

ಜೆಡಿಎಸ್ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ

ಜನರ ಒಲವು ಕಾಂಗ್ರೆಸ್ ಪರ: ಪ್ರಿಯಾಂಕ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 9:47 IST
Last Updated 23 ಏಪ್ರಿಲ್ 2018, 9:47 IST

ಚಿತ್ತಾಪುರ: ಜಾತ್ಯತೀತ ಜನತಾ ದಳದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಶರಣರೆಡ್ಡಿ ಭಂಕಲಗಾ ಹಾಗೂ ಪದಾಧಿಕಾರಿಗಳು ಮತ್ತು  ಕಾರ್ಯಕರ್ತರು ಭಾನುವಾರ ಜೆಡಿಎಸ್‌ಗೆ  ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿ, ಕಾಂಗ್ರೆಸ್ ಮುಖಂಡ ಡಾ.ಪ್ರಭುರಾಜ ಕಾಂತಾ ಅವರ ಮನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮುಖಂಡರಾದ ಸತೀಶ ಕಾಂತಾ, ರಾಮು ಹರವಾಳ, ರವಿಶಂಕರ ಬೆಣ್ಣಿ, ಜಹೀರ್ ಜುನೈದಿ, ರಾಜು ಕುಂಬಾರ, ಸಾಹೇಬಗೌಡ ಲಕ್ಕುಂಡಿ, ಮಲ್ಲಣ್ಣ ದೊಡ್ಮನಿ, ಮಲ್ಲಿಕಾರ್ಜುನ ಭಾಗೋಡಿ, ರಾಯಪ್ಪ ಪೂಜಾರಿ, ನಾಗಪ್ಪ ಮೂಲಿಮನಿ, ಕಿಶೋರ ತುರೆ ಅವರು ಕಾಂಗ್ರೆಸ್ ಪಕ್ಷ ಸೇರಿದರು.

‘ಜೆಡಿಎಸ್‌ನಲ್ಲಿ ಆಂತರಿಕ ಸಮಸ್ಯೆ ಹೆಚ್ಚಿದೆ. ಜಿಲ್ಲಾಮಟ್ಟದಲ್ಲಿ ಸಮರ್ಥ ನಾಯಕತ್ವದ ಕೊರತೆಯಿದೆ. ಪಕ್ಷ ಸಂಘಟನೆಗೆ ಯುವಕರು, ಕಾರ್ಯಕರ್ತರ ಪಡೆ ತಯಾರು ಮಾಡಿ ಪಕ್ಷವನ್ನು ಬಲಿಷ್ಠ ಮಾಡಿದ್ದೇವೆ. ಆದರೆ, ಕಾರ್ಯಕರ್ತರನ್ನು ನಡೆಸಿಕೊಳ್ಳುವ ರೀತಿ ಮತ್ತು ಭಿನ್ನಾಭಿಪ್ರಾಯದಿಂದ ಆ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇವೆ. ಪ್ರಿಯಾಂಕ್ ಖರ್ಗೆ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಮೆಚ್ಚಿ ಹಾಗೂ ಅವರ ಕೈ ಮತ್ತಷ್ಟು ಬಲಪಡಿಸಲು ಕಾಂಗ್ರೆಸ್ ಪಕ್ಷ ಸೇರಿದ್ದೇವೆ. ಕಾಂಗ್ರೆಸ್ ಗೆಲ್ಲಿಸುವುದೇ ನಮ್ಮ ಗುರಿ’ ಎಂದು ಶಿವಶರಣರೆಡ್ಡಿ ಹೇಳಿದರು.

ADVERTISEMENT

ಇದೇ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪ್ರವೀಣ ಪವಾರ್ ಅವರು ತಮ್ಮ ಬೆಂಬಲಿಗ ಮುಖಂಡರು, ಕಾರ್ಯಕರ್ತರೊಂದಿಗೆ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯಲ್ಲಿ ಪ್ರಿಯಾಂಕ್ ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಪ್ರಿಯಾಂಕ್‌ ಖರ್ಗೆ ಮಾತನಾಡಿ, ‘ಕಳೆದ ನಾಲ್ಕೂವರೆ ವರ್ಷಗಳಲ್ಲಿ ಶಾಸಕನಾಗಿ ನಾನು ಮತಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗೆ ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯ ಮತದಾರರ ಒಲವು ಕಾಂಗ್ರೆಸ್ ಪರವಾಗಿದೆ. ಜೆಡಿಎಸ್‌ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ಉತ್ತಮ ಬೆಳವಣಿಗೆ. ಪಕ್ಷದ ತತ್ವ, ಸಿದ್ಧಾಂತದಲ್ಲಿ ನಂಬಿಕೆಯಿಟ್ಟು ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಹೊಡೆಯುವಂತೆ ಪಕ್ಷದ ಚುನಾವಣೆ ಪ್ರಚಾರ ಮಾಡಬೇಕು’ ಎಂದು ಅವರು ಸಲಹೆ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ಡಾ.ಪ್ರಭುರಾಜ ಕಾಂತಾ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾದ ರಮೇಶ ಮರಗೋಳ, ಜಯಪ್ರಕಾಶ ಕಮಕನೂರ, ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಶಿವರುದ್ರ ಭೀಣಿ, ಸುನಿಲ್ ದೊಡ್ಡಮನಿ, ಹಣಮಂತ ಸಂಕನೂರ, ಭೀಮರಾಯ ಹೋತಿನಮಡಿ, ಶೇಖ್ ಬಬ್ಲು, ಶಿವಾಜಿ ಕಾಶಿ, ಶರಣು ಡೋಣಗಾಂವ್, ನಾಗರಾಜ ಕಡಬೂರ, ಶಂಕರ ಚವಾಣ್, ನಜೀರ್ ಆಡಕಿ ಇದ್ದರು.

**

ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಜನರಿಗೆ ತಿಳಿಸಿ, ಅಭಿಮಾನದಿಂದ ಮತಯಾಚನೆ ಮಾಡಬೇಕು. ಮತ್ತೊಮ್ಮೆ ಅಭಿವೃದ್ಧಿ ಪರವಾಗಿ ಬೆಂಬಲಿಸಲಿದ್ದಾರೆ
– ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.