ADVERTISEMENT

ತೇವಾಂಶ ಕೊರತೆ: ಬಾಡುತ್ತಿರುವ ಬೆಳೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 6:13 IST
Last Updated 12 ಜುಲೈ 2017, 6:13 IST

ಕಾಳಗಿ: ಮುಂಗಾರು ಮಳೆ ಕಾಲಕಾಲಕ್ಕೆ ಬರದೆ ಬರಿ ಗಾಳಿ ಬೀಸುತ್ತಿದೆ. ಇದರಿಂದಾಗಿ ಮಣ್ಣಿನಲ್ಲಿ ತೇವಾಂಶ ಕೊರತೆ ಉಂಟಾಗಿ ಹೊಲದಲ್ಲಿನ ಬೆಳೆಗಳು ಬಾಡಲು ಆರಂಭಿಸಿದ್ದು, ರೈತರು ಆತಂಕದಲ್ಲಿದ್ದಾರೆ.

ಕಾಳಗಿ ಸೇರಿದಂತೆ ಸುತ್ತಲಿನ ಗೋಟೂರ, ಹೆಬ್ಬಾಳ, ಚಿಂಚೋಳಿ ಎಚ್., ಅರಣಕಲ್, ಕಂದಗೂಳ, ರಾಜಾಪುರ, ಕೋರವಾರ, ಕೊಡದೂರ, ತೆಂಗಳಿ, ಗುಂಡಗುರ್ತಿ ಮೊದಲಾದ ಗ್ರಾಮಗಳಲ್ಲಿ ಮುಂಗಾರು ಮೊದಲೇ ಸುರಿದ ಮಳೆ ಕಂಡು ಜನರು ಖುಷಿಪಟ್ಟಿದ್ದರು. ಅದರಂತೆ ಮೃಗಶಿರಾ ಮಳೆ (ಜೂನ್ 7) ಮೊದಲು ಮಾಡುತ್ತಿದ್ದಂತೆ ರೈತರು ಬೀಜ ಕೈಯಲ್ಲಿ ಹಿಡಿದು ಇಲ್ಲಿಯವರೆಗೆ ಶೇಕಡಾ 90ರಷ್ಟು ಬಿತ್ತನೆ ಪೂರ್ಣಗೊಳಿಸಿದ್ದಾರೆ.

ರೈತರು ಬೆಳೆಗಳಲ್ಲಿ ಎರಡು ಸಲ ಎಡಿ, ಕುಂಟಿ ಹೊಡೆದಿದ್ದಾರೆ. ಅಲ್ಲದೆ, ಕೆಲಕಡೆ ಮಹಿಳಾ ಕೂಲಿಕಾರರಿಂದ ಕಳೆ ತೆಗೆಸುತ್ತಿದ್ದು ಹೆಸರು, ಉದ್ದು, ತೊಗರಿ, ಸೋಯಾಬಿನ್, ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ ಮತ್ತಿತರ ಬೆಳೆಗಳು ಸಾಲುಸಾಲಾಗಿ ಕಾಣುತ್ತಿವೆ.

ADVERTISEMENT

‘ಉತ್ತಮ ಮಳೆ ಈ ವರ್ಷ ಅಷ್ಟೊಂದು ಪ್ರಮಾಣದಲ್ಲಿ ಬಂದಿಲ್ಲ. ಇಲ್ಲಿಯವರೆಗೆ ಕೇವಲ 265.8 ಮಿ.ಮೀ ಮಳೆ ಸುರಿದಿದೆ’ ಎಂದು ಕೃಷಿ ಅಧಿಕಾರಿ ರುಚಿ ಕೆಂಗಾಪುರ ತಿಳಿಸಿದರು. ‘ಬೀಸುತ್ತಿರುವ ಗಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಳೆ ಸುರಿಸುವಂತೆ ಕಾಣಬರುವ ಮೋಡಗಳು ಮಾಯವಾಗುತ್ತಿವೆ. ಇನ್ನೇನು ಮಳೆ ಬಂದೇ ಬಿಟ್ಟಿತು ಎನ್ನುವಾಗ ವಾತಾವರಣ ತಿಳಿಯಾಗುತ್ತಿದೆ’ ಎಂದು ಗೋಟೂರ ಗ್ರಾಮದ ರೈತ ಬಾಬು ಬುಡಾನೋರ ಹೇಳಿದರು.

ಕಳೆದ ಮೃಗಶಿರಾ, ಆರಿದ್ರಾ ಮಳೆ ಹಾಗೂ ಈಗ ಹೂಡಿರುವ ಪುನರ್ವಸು ಮಳೆ ವಾರ್ಷಿಕ ಅಂದಾಜಿನ ಪ್ರಕಾರ ಉತ್ತಮ ಮಳೆಗಳು. ಅದರಂತೆ ಮೂರು–ನಾಲ್ಕು ಚರಣಗಳಲ್ಲಿ ಸುರಿಯಬೇಕಾದವು. ಆದರೆ, ಮಳೆ ಬರುವಿಕೆಯ ಪ್ರಮಾಣ ಹುಸಿಯಾಗಿ ಭೂಮಿ ಬಾಯ್ತೆರೆಯುತ್ತಿದೆ.

ತೇವಾಂಶ ಕೊರತೆ ಕಂಡುಬಂದು ಬೆಳೆಗಳು ಅರಸಿಣ ಬಣ್ಣಕ್ಕೆ ತಿರುಗುತ್ತಿವೆ. ಮಳೆರಾಯ ಚೆನ್ನಾಗಿ ಬಂದರೆ ಚಿನ್ನದಂತ ಬೆಳೆ ತೆಗೆಯುವ ನಿರೀಕ್ಷೆಯಲ್ಲಿದ್ದ ರೈತವರ್ಗ ಈಗ ಎಲ್ಲೆಡೆ ದೇವರ ಮೊರೆ ಹೋಗುತ್ತಿದ್ದಾರೆ. ಭಜನೆ, ಪಾದಯಾತ್ರೆ, ಸಪ್ತಾಹ ಭಜನೆ ಸೇರಿ ವಿವಿಧ ತರಹದ ಪ್ರಾರ್ಥನೆಗಳ ಮೂಲಕ ವರುಣದೇವರ ಕೃಪೆಗೆ ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.