ADVERTISEMENT

ನಾಟಕ ರಚನೆ ಹವ್ಯಾಸ ಕ್ಷೀಣ: ವಿಷಾದ

ಐತಿಹಾಸಿಕ ‘ಕಾಗಿಣೆಯ ದಡದಲ್ಲಿ ಕವಡೆ’ ಪ್ರದರ್ಶನದಲ್ಲಿ ಜಂಗಮಶೆಟ್ಟಿ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 6:08 IST
Last Updated 13 ಜುಲೈ 2017, 6:08 IST

ಕಲಬುರ್ಗಿ: ‘ಇತ್ತೀಚಿನ ದಿನಗಳಲ್ಲಿ ನಾಟಕ ರಚನೆ ಹವ್ಯಾಸ ಕಡಿಮೆಯಾಗುತ್ತಿದ್ದು, ರಂಗಭೂಮಿ ಹೊಸ ಪ್ರಯೋಗಳಿಗೆ ತೆರೆದುಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ರಂಗ ಸಮಾಜದ ಸದಸ್ಯೆ ಸುಜಾತಾ ಜಂಗಮಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಎಸ್‌.ಎಂ.ಪಂಡಿತ್ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂಗಮೇಶ್ವರ ಮಹಿಳಾ ಮಂಡಳದ ಆಶ್ರಯದಲ್ಲಿ ಬುಧವಾರ ನಡೆದ ‘ಕಾಗಿಣೆಯ ದಡದಲ್ಲಿ ಕವಡೆ’ ಐತಿಹಾಸಿಕ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹೊಸ ನಾಟಕಗಳ ರಚನೆ ಇಲ್ಲದೆ ಹಳ್ಳಿಗಳಲ್ಲಿನ ನಾಟಕಗಳನ್ನೇ ಮತ್ತೆ ಮತ್ತೆ ಪ್ರದರ್ಶಿಸುವ ಸ್ಥಿತಿ ಬಂದಿದೆ. ಮಹಿಳೆಯರು ನಾಟಕಗಳ ರಚನೆಯಲ್ಲಿ ತೊಡಗಬೇಕು. ಅವರು ನಾಟಕ ರಚನೆಯಲ್ಲಿ ತೊಡಗುವ ವಾತಾವರಣವನ್ನು ಸಮಾಜವು ಸೃಷ್ಟಿಸಬೇಕು. ಆದರೆ, ಮಹಿಳೆಯರು ಈ ಕ್ಷೇತ್ರಕ್ಕೆ ಬರುತ್ತಿಲ್ಲ, ಇನ್ನೊಂದೆಡೆ ಪುರುಷರಲ್ಲಿ ನಾಟಕ ಬರೆಯುವ ಹವ್ಯಾಸ ಕಡಿಮೆಯಾಗುತ್ತಿದೆ’ ಎಂದು ವಿಷಾದಿಸಿದರು.

ADVERTISEMENT

‘ಮಹಿಳೆಯರಿಗೆ ರಂಗ ಚಟುವಟಿಕೆಗಲ್ಲಿ ತೊಡಗುವಂತೆ ಯಾರೂ ರತ್ನಗಂಬಳಿ ಹಾಸುವುದಿಲ್ಲ. ಸಂಸಾರ, ಸಮಾಜದ ಸಂಕಷ್ಟಗಳ ನಡುವೆಯೇ ಅವರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು’ ಎಂದು ಸಲಹೆ ನೀಡಿದರು.

ಕಲಬುರ್ಗಿ ರಂಗಾಯಣ ನಿರ್ದೇಶಕ ಮಹೇಶ ಪಾಟೀಲ ಮಾತನಾಡಿ,‘ನಾಟಕಗಳ ಪ್ರದರ್ಶನ ಆಯೋಜಿಸುವವರು ಸಮಯ ಪಾಲನೆ ಮಾಡಬೇಕು. ಪ್ರೇಕ್ಷಕರನ್ನು ಕಾಯಿಸಬಾರದು. ಸಮಯಕ್ಕೆ ಸರಿಯಾಗಿ ನಾಟಕ ಪ್ರಾರಂಭಿಸುವ ರೂಢಿ ಬೆಳೆಸಿಕೊಳ್ಳಬೇಕು. ನಾಟಕಗಳತ್ತ ಜನರನ್ನು ಸೆಳೆಯಬೇಕು. ಸಭಾಂಗಣ ತುಂಬಿದ್ದರೆ ನಾಟಕದ ಪ್ರಯೋಗಕ್ಕೆ ಭೂಷಣ’ ಎಂದರು.

ಸಂಗಮೇಶ್ವರ ಮಹಿಳಾ ಮಂಡಳದ ಅಧ್ಯಕ್ಷೆ ಇಂದಿರಾ ಮಾನ್ವಿಕರ ಮಾತನಾಡಿ, ‘ರಂಗಭೂಮಿಯತ್ತ ಮಹಿಳೆಯರನ್ನು ಸೆಳೆಯಲು ಕಾಗಿಣೆಯ ದಡದಲ್ಲಿ ಕವಡೆ ನಾಟಕದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ನಾಟಕದ ಎಲ್ಲ ಪಾತ್ರಗಳಿಗೆ ಮಹಿಳೆಯರನ್ನೇ ಆಯ್ಕೆ ಮಾಡುವ ಯೋಚನೆ ಇತ್ತು. ಆದರೆ, ಸಮಯದ ಅಭಾವದಿಂದ ಆ ಆಶಯ ಕೈಗೂಡಲಿಲ್ಲ’ ಎಂದರು.

ನಾಟಕದ ರಚಿಸಿರುವ ಜ್ಯೋತಿ ಬಿ.ಕುಲಕರ್ಣಿ, ಸಂಗಮೇಶ್ವರ ಮಹಿಳಾ ಮಂಡಳದ ಕಾರ್ಯದರ್ಶಿ ಶೋಭಾ ರಂಜೋಳಕರ ಮಾತನಾಡಿದರು. ರಂಗಶಿಕ್ಷಕ ಅಶೋಕ ತೊಟ್ನಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.