ADVERTISEMENT

ಪಠ್ಯ ಪುಸ್ತಕ ಅಲಭ್ಯ: ತೊಂದರೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:02 IST
Last Updated 21 ಜುಲೈ 2017, 6:02 IST

ಚಿಂಚೋಳಿ: ಶೈಕ್ಷಣಿಕ ವರ್ಷ ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಇನ್ನೂ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯ ಪುಸ್ತಕಗಳು ಲಭಿಸಿಲ್ಲ ಎಂದು ಪಾಲಕರು ದೂರಿದ್ದಾರೆ. ‘ತಾಲ್ಲೂಕಿನ ಪ್ರೌಢಶಾಲೆಯ 1,400 ಬಾಲಕಿಯರು ಮತ್ತು ಪ್ರಾಥಮಿಕ ಶಾಲೆಗಳ 2 ಸಾವಿರ ಬಾಲಕರು ಸಮವಸ್ತ್ರ ಕ್ಕಾಗಿ ಕಾಯುವಂತಾಗಿದೆ. 3,400 ಮಕ್ಕಳಿಗೆ ಸಮವಸ್ತ್ರ ಕೊರತೆ ಎದುರಾ ಗಿದೆ’ ಎಂದು ಶಿಕ್ಷಣ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಪಠ್ಯ ಪುಸ್ತಕಗಳು ಶೇ 95ರಷ್ಟು ಸರಬರಾಜಾಗಿವೆ ಎಂದು ಮೂಲಗಳು ತಿಳಿಸಿದರೂ ಶಾಲೆಗಳಲ್ಲಿ ಮಕ್ಕಳಿಗೆ ಸಾಕಷ್ಟು ಪುಸ್ತಕಗಳು ಸಿಕ್ಕಿಲ್ಲ. ಕ್ಷೇತ್ರ ಶಿಕ್ಷ ಣಾಧಿಕಾರಿ ಕಚೇರಿಗೆ ನಿತ್ಯ ಒಂದೊಂದೆ ವಿಷಯದ ಪಠ್ಯಪುಸ್ತಕ ಪೂರೈಕೆ ಆಗುತ್ತಿರುವುದರಿಂದ ಶಿಕ್ಷಕರು ಬಂದು ಶಾಲೆಗಳಿಗೆ ಪುಸ್ತಕ ಕೊಂಡೊಯ್ಯುವುದೇ ಕೆಲಸವಾಗಿದೆ’ ಎಂದು ಶಿಕ್ಷಕರೊ ಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

8ನೇ ತರಗತಿಯ ಮತ್ತು 10ನೇ ತರಗತಿಯ ದ್ವಿತೀಯ ಭಾಷೆ ಪಠ್ಯಪುಸ್ತಕ ಮಕ್ಕಳಿಗೆ ಇನ್ನೂ ಲಭಿಸಿಲ್ಲ. 9ನೇ ತರಗತಿಯ ಗಣಿತ ಹಾಗೂ ಸಮಾಜ ವಿಜ್ಞಾನ ಪಠ್ಯಪುಸ್ತಕದ ಭಾಗ–1 ಮತ್ತು ಭಾಗ –2 ಪಠ್ಯಪುಸ್ತಕ, ಕೊರತೆಯಾಗಿದೆ.

ADVERTISEMENT

10ನೇ ತರಗತಿಯ ಗಣಿತದ ಭಾಗ–2 ಪುಸ್ತಕ ಲಭಿಸಿಲ್ಲ. ಉರ್ದು ಮಾಧ್ಯಮದ ಉರ್ದು ಭಾಷೆಯ 10ನೇ ತರಗತಿ ಪಠ್ಯಪುಸ್ತಕ ಕೊರತೆಯಾಗಿದೆ. 6ನೇ ತರಗತಿಯಿಂದ 10ನೇ ತರಗತಿ ವರೆಗೆ ಭಾಗ–2ರ ಪುಸ್ತಕ ಮಕ್ಕಳ ಕೈಗೆ ಸಿಕ್ಕಿಲ್ಲ. ಇದರಿಂದ ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ಅದೇ ಪಾಠ: ತರಗತಿ ಬದಲು
ಆಂಗ್ಲಮಾಧ್ಯಮದ 10ನೇ ತರಗತಿಯ ವಿಜ್ಞಾನ ವಿಷಯದ ಪಠ್ಯಪುಸ್ತಕದಲ್ಲಿನ ಪುಟಸಂಖ್ಯೆ 106ರಿಂದ 122ರ ವರೆಗೆ ಕನ್ನಡ ಮಾಧ್ಯಮದ ಪಾಠಗಳು ಮುದ್ರಣಗೊಂಡಿವೆ. 2016–17ನೇ ಸಾಲಿನಲ್ಲಿ 8ನೇ ತರಗತಿಯಲ್ಲಿ ಬೋಧಿಸುತ್ತಿದ್ದ ‘ತಿಳಿಗನ್ನಡದ ಐಕ್ಯಗಾನ ಕವಿತೆ’ ಪುನರ್‌ ರಚಿತ ಪಠ್ಯಪುಸ್ತಕ (2017–18ನೇ ವರ್ಷ)ದ 6ನೇ ತರಗತಿಯ ಪಠ್ಯದಲ್ಲಿ ಕವಿತೆ ಸ್ಥಾನ ಪಡೆದಿದೆ.

2016–17ನೇ ಸಾಲಿನಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ 6ನೇ ತರಗತಿಯಲ್ಲಿ ಅಭ್ಯಾಸ ಮಾಡಿದ್ದ ವಿಜಯನಗರ ಸಾಮ್ರಾಜ್ಯ, ಬಹಮನಿ ಆದಿಲ್‌ ಶಾ, ಭಕ್ತಿ ಸಂಸ್ಕೃತಿ ಮತ್ತು ಸೂಫಿ ಪರಂಪರೆಯ ಪಾಠಗಳು 2017–18ನೇ ಸಾಲಿನ 7ನೇ ತರಗತಿಯ ಪಠ್ಯದಲ್ಲಿ ಮತ್ತೆ ಸೇರಿಕೊಂಡಿವೆ. ಕಳೆದ ವರ್ಷ ಓದಿದ ಪಾಠಗಳೇ ಪುನರಾವರ್ತನೆ ಆಗಿರುವುದಕ್ಕೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

* * 

ಬಟ್ಟೆಗಳ ಕೊರತೆ ಎದುರಾಗಿದ್ದು, ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಪಠ್ಯಪುಸ್ತಕಗಳ ಸರಬರಾಜು ನಿರಂತರ ನಡೆದಿದೆ.
ಜನಾರ್ದನ ರೆಡ್ಡಿ ಮಾಲಿಪಾಟೀಲ
ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.