ADVERTISEMENT

ಪ್ರತಿಯೊಬ್ಬರಲ್ಲಿ ಶಕ್ತಿ ತುಂಬಿದ ಅಂಬೇಡ್ಕರ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 9:44 IST
Last Updated 15 ಏಪ್ರಿಲ್ 2017, 9:44 IST

ಕಲಬುರ್ಗಿ: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಾಜದ ಪ್ರತಿಯೊಬ್ಬರಲ್ಲಿ ಅಗಾಧ ಶಕ್ತಿ ತುಂಬುವ ಕಾರ್ಯ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.ನಗರದ ಜಗತ್ ವೃತ್ತದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಶುಕ್ರವಾರ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ 126ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರು ವಿಶ್ವದ ಮತ್ತು ಭಾರತದ ಎಲ್ಲ ಧರ್ಮ, ತತ್ವಗಳ ಆಳ ಅಧ್ಯಯನ ನಡೆಸಿ ಸಂವಿಧಾನ ರಚಿಸಿರುವುದರಿಂದ ಹೈದರಾಬಾದ್ ಕರ್ನಾಟಕ ಭಾಗಕ್ಕೆ 371(ಜೆ) ವಿಶೇಷ ಸ್ಥಾನಮಾನ ಲಭ್ಯವಾಗಿದೆ. ಸಂವಿಧಾನದ ಆಶಯ ಈಡೇರಿಸುವಲ್ಲಿ ಇದು ಗಣನೀಯ ಸಾಧನೆಯಾಗಿದ್ದರೂ, ಸಾಧಿಸಬೇಕಾದದ್ದು ಇನ್ನೂ ಬಹಳಷ್ಟಿದೆ.

ಸಂವಿಧಾನ ಮತ್ತು ಪ್ರಜಾಪ್ರಭುತ್ವ ಭದ್ರವಾಗಿರುವವರೆಗೆ ಈ ದೇಶದಲ್ಲಿರುವ ಶೋಷಿತರು, ದೀನ ದಲಿತರು ಮತ್ತು ಮಹಿಳೆಯರಿಗೆ ರಕ್ಷಣೆ ಇದೆ ಎಂದು ಅಭಿಪ್ರಾಯಪಟ್ಟರು.
ಜನಸಂಖ್ಯೆ ಆಧಾರದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ವಿಶೇಷ ಕಾನೂನು ರಚಿಸಿ ಶೇ 24 ರಷ್ಟು ಅನುದಾನ ಮೀಸಲಿಡುವ ವ್ಯವಸ್ಥೆ ಜಾರಿಗೊಳಿಸಿದ ಕೀರ್ತಿ ಕರ್ನಾಟಕ ರಾಜ್ಯಕ್ಕೆ ಸಲ್ಲುತ್ತದೆ. ಈ ವರ್ಷದ ಬಜೆಟ್‌ನಲ್ಲಿ ಸರ್ಕಾರ ಹೆಚ್ಚಿನ ಅನುದಾನ ನೀಡಿದ್ದು, ಇದರ ಪ್ರಯೋಜನವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಹಾಗೂ ಸಂವಿಧಾನದ ಆಶಯ ಈಡೇರಿಸುವಲ್ಲಿ ಅಧಿಕಾರಿವರ್ಗ ನಿಸ್ವಾರ್ಥ ಮತ್ತು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.

ADVERTISEMENT

ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್ ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರರು ಯಾವುದೇ ಒಂದು ಜಾತಿ, ಪಂಥಕ್ಕೆ ಸೀಮಿತವಾಗಿಲ್ಲ. ಅವರು ಇಡೀ ಮಾನವ ಕಲ್ಯಾಣ ಹಾಗೂ ಎಲ್ಲರಿಗೂ ಸಮಾನತೆಯ ಮೂಲ ಹಕ್ಕುಗಳನ್ನು ಒದಗಿಸಿದ್ದಾರೆ. ಇದಕ್ಕಾಗಿ ಭಾರತವು ಅವರಿಗೆ ಸದಾ ಋಣಿಯಾಗಿದೆ. ನಮ್ಮ ದೇಶದ ಸಂವಿಧಾನ ಸರ್ವಕಾಲಿಕ ಮತ್ತು ಮಹತ್ವಪೂರ್ಣವಾಗಿದೆ. ಅವರ ಮೂಲ ತತ್ವ ಸಿದ್ಧಾಂತಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಾಸಕ ಖಮರುಲ್ ಇಸ್ಲಾಂ ಮಾತನಾಡಿದರು. ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಸಂಜಯ್ ಮಾಕಲ್ ವಿಶೇಷ ಉಪನ್ಯಾಸ ನೀಡಿದರು.
ಬೌದ್ಧ ಭಿಕ್ಕು ಸಂಘಾನಂದ ಭಂತೇಜಿ ಬುದ್ಧ ವಂದನೆ ನಡೆಸಿಕೊಟ್ಟರು. ‘ಡಾ. ಅಂಬೇಡ್ಕರ್ ಚಿತ್ರ ಸಂಪುಟ’ ಹಾಗೂ ‘ಮಾಡೋಣ ಇಂದು ಬೌದ್ಧ ಭಾರತ’ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಮೇಯರ್ ಶರಣಕುಮಾರ ಮೋದಿ, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣಗೌಡ ಪಾಟೀಲ ಸಂಕನೂರ, ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ಸದಸ್ಯರಾದ ಶಿವಾನಂದ ಪಾಟೀಲ, ಶಿವರುದ್ರ ಬೀಣಿ, ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ಎಸ್.ಎಸ್. ತಾವಡೆ, ಅಧ್ಯಕ್ಷ ವಿಶಾಲ ಎಸ್. ನವರಂಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಪಾಲಿಕೆ ಆಯುಕ್ತ ಪಿ. ಸುನಿಲಕುಮಾರ, ರಾಜ್ಯ ಎಸ್‌ಸಿ, ಎಸ್‌ಟಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ, ಪ್ರಧಾನ ಕಾರ್ಯದರ್ಶಿ ಬಾಬು ಮೋರೆ, ಮಾಜಿ ಶಾಸಕ ಮಾರುತಿರಾವ್ ಡಿ. ಮಾಲೆ, ಅಲ್ಲಮಪ್ರಭು ಪಾಟೀಲ ಇದ್ದರು.ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್. ರಾಜಪ್ಪ ಸ್ವಾಗತಿಸಿದರು. ಡಾ. ದಿಲೀಪಕುಮಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.