ADVERTISEMENT

ಬಾಕಿ ವೇತನ ಪಾವತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 7:25 IST
Last Updated 15 ಜುಲೈ 2017, 7:25 IST

ಕಲಬುರ್ಗಿ: ಮೂರು ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಇಲ್ಲಿನ ಸೇಡಂ ರಸ್ತೆಯಲ್ಲಿರುವ ಇಎಸ್‌ಐ ಆಸ್ಪತ್ರೆಯ ಗುತ್ತಿಗೆ ಕಾರ್ಮಿಕರು ಶುಕ್ರವಾರ ಪ್ರತಿಭಟನೆ ಮಾಡಿದರು. 2016ರ ಡಿಸೆಂಬರ್ 1ರಿಂದ 70ಕ್ಕೂ ಅಧಿಕ ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ. 2017ರ ಮಾರ್ಚ್ 31ರ ವರೆಗೆ ವೇತನ ನೀಡಲಾಗಿದೆ. ಆದರೆ, ಏಪ್ರಿಲ್‌ನಿಂದ ಇಲ್ಲಿಯವರೆಗೆ ವೇತನ ಪಾವತಿಸಿಲ್ಲ. ಇದರಿಂದಾಗಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ.

ಈ ಬಗ್ಗೆ ಹೊರ ಗುತ್ತಿಗೆ ಏಜೆನ್ಸಿ ಸಿಬ್ಬಂದಿಯನ್ನು ಪ್ರಶ್ನಿಸಿದರೆ ವಾರದಲ್ಲಿ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಇದುವರೆಗೂ ವೇತನ ಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬೆಂಕಿ ಪತ್ತೆ ಹಚ್ಚುವಿಕೆ, ಪ್ಲಂಬಿಂಗ್, ಎಲೆಕ್ಟ್ರಿಕಲ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ನೋಯ್ಡಾದ ಗುತ್ತಿಗೆದಾರ ರಾಹುಲ್ ಎಂಬುವರು ಹೊರಗುತ್ತಿಗೆ ವ್ಯವಸ್ಥೆಯಡಿ ನಮ್ಮನ್ನು ನೇಮಕ ಮಾಡಿಕೊಂಡಿದ್ದಾರೆ. ಆದರೆ ನಿಗದಿತ ಸಮಯದಲ್ಲಿ ವೇತನ ಪಾವತಿಸುತ್ತಿಲ್ಲ ಎಂದು ದೂರಿದರು.

ADVERTISEMENT

ಎನ್‌ಎಸ್‌ಯುಐ ಪ್ರತಿಭಟನೆ: ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಒತ್ತಾಯಿಸಿ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ (ಎನ್‌ಎಸ್‌ಯುಐ) ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಘೋಷಣೆ ಕೂಗಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುತ್ತಿರುವುದು ಸ್ವಾಗತಾರ್ಹ. ಅದೇ ರೀತಿ ಎಲ್ಲಾ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ರಕೀಬ್, ಜಿಲ್ಲಾ ಘಟಕದ ಅಧ್ಯಕ್ಷ ವಿಶಾಲ ಎಸ್.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.