ADVERTISEMENT

ಬೆಳೆಹಾನಿ: ಸಮೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 5:51 IST
Last Updated 19 ಸೆಪ್ಟೆಂಬರ್ 2017, 5:51 IST

ಜೇವರ್ಗಿ: ಮಹಾರಾಷ್ಟ್ರದ ಉಜ್ಜಯನಿ ಜಲಾಶಯದಿಂದ ಕಳೆದ ಮೂರು ದಿನಗಳಿಂದ ಭೀಮಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ನದಿ ಹಿನ್ನೀರಿನಿಂದ ಹಾನಿಗೀಡಾದ ಬೆಳೆಗಳ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ ತಿಳಿಸಿದ್ದಾರೆ. ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲು ಸೋಮವಾರ ತಮ್ಮನ್ನು ಭೇಟಿ ಮಾಡಿದ ‘ಪ್ರಜಾವಾಣಿ’ಗೆ ಅವರು ಈ ವಿಷಯ ತಿಳಿಸಿದರು.

ಕಳೆದ ಒಂದು ತಿಂಗಳಿಂದ ತಾಲ್ಲೂಕಿನಲ್ಲಿ ಬಿದ್ದ ಮಳೆ ಹಾಗೂ ಭೀಮಾ ನದಿ ಹಿನ್ನೀರಿನಿಂದ ಹಾನಿಗೀಡಾದ ಬೆಳೆಗಳ ಸಮೀಕ್ಷೆ ಕಾರ್ಯವನ್ನು ಗ್ರಾಮ ಲೇಖಪಾಲಕರಿಂದ ನಡೆಸಲಾಗುವುದು. ಬೆಳೆ ಹಾನಿ ಸಮೀಕ್ಷೆ ಕಾರ್ಯ ಪೂರ್ಣಗೊಂಡ ನಂತರ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ಭೀಮಾ ನದಿಗೆ ಪ್ರವಾಹ ಉಂಟಾಗಿದ್ದರಿಂದ ಜೇವರ್ಗಿ ಮತ್ತು ಅಫಜಲಪುರ ತಾಲ್ಲೂಕುಗಳ ಮಧ್ಯೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

‘ತಾಲ್ಲೂಕಿನ ಕಲ್ಲೂರ್ (ಬಿ) ಮತ್ತು ಅಫಜಲಪುರ ತಾಲ್ಲೂಕಿನ ಚಿನಮಳ್ಳಿ ಗ್ರಾಮದ ಮಧ್ಯೆಯಿರುವ ಭೀಮಾ ನದಿಗೆ ನಿರ್ಮಿಸಿದ ಬ್ರಿಜ್ ಕಂ ಬ್ಯಾರೇಜ್‌ಗೆ 63 ಗೇಟ್‌ಗಳನ್ನು ಅಳವಡಿಸಲಾಗಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಗೇಟ್‌ಗಳನ್ನು ತೆರೆಯದ ಕಾರಣ ಭೀಮಾ ನದಿ ಪಾತ್ರದ ಎರಡು ಬದಿಗಳಲ್ಲಿ ಹಿನ್ನೀರು ಸಂಗ್ರಹವಾಗಿ ಬೆಳೆಗಳು ಹಾನಿಗೀಡಾಗಿವೆ. ಈ ಕುರಿತು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ಕೃಷ್ಣಾ ಬಾಗ್ಯ ಜಲ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ’ ಎಂದು ಅವರು ತಿಳಿಸಿದರು.

ADVERTISEMENT

ಜೇವರ್ಗಿ ತಾಲ್ಲೂಕಿನ ಇಟಗಾದಿಂದ ಹೊನ್ನಾಳವರೆಗೆ ಸುಮಾರು 25ರಿಂದ 30 ಹಳ್ಳಿಗಳು ಭೀಮಾನದಿ ಪಾತ್ರದಲ್ಲಿವೆ. ಹಿನ್ನೀರಿನಿಂದ ನದಿ ಪಾತ್ರದ ಜಮೀನುಗಳಲ್ಲಿ ಬಿತ್ತನೆ ಮಾಡಿದ ತೊಗರಿ, ಹತ್ತಿ, ಮೇಣಸಿನಕಾಯಿ ಬೆಳೆಗಳು ಹಾನಿಗೀಡಾಗಿವೆ. ಹಾಗೂ ನೀರಿನ ರಭಸಕ್ಕೆ ಕೊಚ್ಚಿಹೋದ ಕಬ್ಬು ಬೆಳೆಯ ಸಮೀಕ್ಷೆ ಕಾರ್ಯ ನಡೆಸುವಂತೆ ಭಾನುವಾರ ಕಲ್ಲೂರ್ ಬ್ಯಾರೇಜ್ ಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಸೂಚಿಸಿದ್ದಾರೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.

‘ಭೀಮಾ ನದಿಗೆ ಪ್ರವಾಹ ಉಂಟಾಗಿದ್ದರಿಂದ ನದಿ ಪಾತ್ರದ ಹಳ್ಳಿಗಳ ಕೆಲವು ಮನೆಗಳುಹಾನಿಗೀಡಾಗಿವೆ. ಸಾರ್ವಜನಿಕ ಆಸ್ತಿ ಹಾಗೂ ರಸ್ತೆಗಳು ಹಾನಿಗೀಡಾದ ಕುರಿತು ಜಿಲ್ಲಾಡಳಿತಕ್ಕೆ ವರದಿ ನೀಡಲಾಗುವುದು. ಪ್ರವಾಹ ಹಾಗೂ ಹಿನ್ನೀರಿನಿಂದ ಹಾನಿಯಾದ ರಸ್ತೆಗಳ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಭೀಮಾ ನದಿಗೆ ಪ್ರವಾಹ ಉಂಟಾಗಿದ್ದರಿಂದ ತಾಲ್ಲೂಕಿನ ನೆಲೋಗಿ, ಬಳ್ಳುಂಡಗಿ, ಯಂಕಂಚಿ, ಕೂಡಲಗಿ, ಮಾಹೂರ್ ಗ್ರಾಮಗಳ ರೈತರ ಜಮೀನಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಹಾನಿಗೀಡಾಗಿವೆ’ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.