ADVERTISEMENT

ಭಾನುವಾರ ಪೆಟ್ರೋಲ್ ಬಂಕ್ ಬಂದ್ ಇಲ್ಲ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 5:45 IST
Last Updated 20 ಏಪ್ರಿಲ್ 2017, 5:45 IST

ಬೆಂಗಳೂರು:  ‘ಪ್ರತಿ ಭಾನುವಾರ ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ಇಲ್ಲ’  ಎಂದು ಕರ್ನಾಟಕ ಸ್ಟೇಟ್ ಫೆಡರೇಷನ್ ಆಫ್‌ ಪೆಟ್ರೋಲಿಯಂ ಡೀಲರ್ಸ್‌ ಅಧ್ಯಕ್ಷ ಎಚ್‌.ಎಸ್‌. ಮಂಜಪ್ಪ ಸ್ಪಷ್ಟಪಡಿಸಿದ್ದಾರೆ.‘ತಮಿಳುನಾಡಿನ ಪೆಟ್ರೋಲಿಯಂ ವರ್ತಕರ ಸಂಘದ ಪದಾಧಿಕಾರಿ ಸುರೇಶ ಕುಮಾರ್ ಎಂಬುವರು ಪ್ರತಿ ಭಾನುವಾರ ಪೆಟ್ರೋಲ್ ಬಂಕ್ ಮುಚ್ಚುವುದಾಗಿ ನೀಡಿರುವ ಹೇಳಿಕೆಗೆ ನಮ್ಮ ಬೆಂಬಲ ಇಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.‘ಸಾರ್ವಜನಿಕರು ಭಾನುವಾರ ಇಂಧನ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.  ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಸುರೇಶ ಕುಮಾರ್ ಈ ರೀತಿಯ ಹೇಳಿಕೆ ನೀಡಿದ್ದಾರೆ’ ಎಂದಿದ್ದಾರೆ.

‘ತುರ್ತು ಸಂದರ್ಭಕ್ಕಾಗಿ ಇಂಧನ ನೀಡಲು ಒಬ್ಬ ಸಿಬ್ಬಂದಿ ನಿಯೋಜಿಸುವುದಾಗಿ ಹೇಳಿರುವುದು ಹಾಸ್ಯಾಸ್ಪದ. ಯಾವ ಗ್ರಾಹಕರಿಗೆ ತುರ್ತು ಇದೆ ಎಂಬುದನ್ನು ಹೇಗೆ ನಿರ್ಧರಿಸುವುದು’ ಎಂದು ಅವರು ಪ್ರಶ್ನಿಸಿದ್ದಾರೆ.‘ಕರ್ನಾಟಕದ ವರ್ತಕರ ಪರವಾಗಿ ಹೇಳಿಕೆ ನೀಡಲು ಸುರೇಶ ಕುಮಾರ್‌ ಅಥವಾ ಬೇರಾವುದೇ ಸಂಘಟನೆಗೆ ಅಧಿಕಾರ ನೀಡಿಲ್ಲ. ಗ್ರಾಹಕರು, ತೈಲ ಕಂಪೆನಿಗಳು ಈ ವಿಷಯದಲ್ಲಿ ಗೊಂದಲಕ್ಕೆ ಒಳಗಾಗಬಾರದು’ ಎಂದು ಮನವಿ ಮಾಡಿದ್ದಾರೆ.

ಮೇ 6 ರಂದು ನವದೆಹಲಿಯಲ್ಲಿ ಅಖಿಲ ಭಾರತ ಪೆಟ್ರೋಲಿಯಂ ವರ್ತಕರ ಸಂಘದ ಸಭೆ ನಡೆಯಲಿದೆ. ಅಲ್ಲಿ ಈ ವಿಷಯ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳ ಲಾಗುವುದು. ಆದರೆ, ಸಾರ್ವಜನಿಕರಿಗೆ ಅನಾನುಕೂಲ ಆಗುವಂತಹ ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.‘ನಮ್ಮ ಸಂಘಟನೆ ವ್ಯಾಪ್ತಿಗೆ ರಾಜ್ಯದ 23 ಜಿಲ್ಲೆಗಳಲ್ಲಿರುವ ಪೆಟ್ರೋಲ್‌ ಪಂಪ್‌ಗಳು ಬರುತ್ತವೆ. ಕಮಿಷನ್‌ ನಿಗದಿಗೆ ಸಂಬಂಧಿಸಿದಂತೆ ನಮಗೂ ಅಸಮಾಧಾನವಿದೆ. ಆದರೆ, ಸಾರ್ವಜನಿಕರಿಗೆ  ತೊಂದರೆ ಮಾಡುವ ಉದ್ದೇಶವಿಲ್ಲ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.