ADVERTISEMENT

ಭೈರಾಮಡಗಿ ಸರ್ಕಾರಿ ಪ್ರೌಢಶಾಲೆ ಮಾದರಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 6:02 IST
Last Updated 18 ಜನವರಿ 2017, 6:02 IST
ಭೈರಾಮಡಗಿ ಸರ್ಕಾರಿ ಪ್ರೌಢಶಾಲೆ ಮಾದರಿ
ಭೈರಾಮಡಗಿ ಸರ್ಕಾರಿ ಪ್ರೌಢಶಾಲೆ ಮಾದರಿ   

ಅಫಜಲಪುರ: ಕೆಲು ಕಡೆ ಮಕ್ಕಳ ಸಂಖ್ಯೆ ಮತ್ತು ಶಿಕ್ಷಕರ ಸಂಖ್ಯೆ ಕಡಿಮೆ­ಯಿದ್ದು, ಸೌಕರ್ಯಗಳ ಕೊರತೆಯಿದ್ದು ಎಂಬ ಆರೋಪ ಕೇಳಿ ಬರುತ್ತದೆ. ಮತ್ತೊಂದೆಡೆ ಖಾಸಗಿ ಶಾಲೆಗಳೊಂದಿಗೆ ಸರ್ಕಾರಿ ಶಾಲೆಗಳು ಪೈಪೋಟಿ ನೀಡಲಾಗದು ಎಂಬ ಮಾತೂ ಇದೆ.

ಆದರೆ ಕೆಲ ಸರ್ಕಾರಿ ಶಾಲೆಗಳು ಎಲ್ಲಾ ಅಡತಡೆಗಳ ನಡುವೆಯೂ ಉತ್ತಮ ಸಾಧನೆ ಮಾಡುತ್ತವೆ. ಅವುಗಳಲ್ಲಿ ತಾಲ್ಲೂಕಿನ ಭೈರಾಮಡಗಿ ಸರ್ಕಾರಿ ಪ್ರೌಢಶಾಲೆಯೂ ಒಂದು.

ಈ ಪ್ರೌಢಶಾಲೆಯಲ್ಲಿ ಸರ್ಕಾರದ ಬಹುತೇಕ ಯೋಜನೆ, ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಸಕಲ ಸೌಲಭ್ಯ ಮತ್ತು ನೆರವನ್ನೂ ಪಡೆಯುತ್ತಿ­ರುವ ಈ ಶಾಲೆಯ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪ್ರಥಮ ಆದ್ಯತೆ ನೀಡುತ್ತಿದ್ದಾರೆ.

ಶಾಲೆಯಲ್ಲಿ ಒಟ್ಟು 174 ಮಕ್ಕಳಿದ್ದಾರೆ.  ಶಾಲಾ ಅವಧಿ ಮೊದಲ ಮತ್ತು ನಂತರದ ಒಂದು ಗಂಟೆಯನ್ನು ಸದ್ಬಳಕೆ ಮಾಡಿ­ಕೊಂಡು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ­ಗಳಿಗೆ ವಿಶೇಷ ತರಗತಿ ನಡೆಸಲಾಗುತ್ತದೆ.

ಮಕ್ಕಳಲ್ಲಿ ಸ್ಫೂರ್ತಿ ತುಂಬಲು ಮತ್ತು ಶೈಕ್ಷಣಿಕ ವಾತಾವರಣ ಉಂಟು ಮಾಡಲು, ಮಕ್ಕಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಆಗಾಗ್ಗೆ ಶೈಕ್ಷಣಿಕ ಹಬ್ಬ ಆಚರಿಸಲಾಗುತ್ತದೆ.

ಸರ್ಕಾರಿ ಪ್ರೌಢಶಾಲೆ ಭೈರಾಮಡಗಿ­ಯಲ್ಲಿ ವಿಜ್ಞಾನ ಕೇಂದ್ರಕ್ಕೆ ಆಯ್ಕೆ­ಯಾಗಿದ್ದು, ಪ್ರತಿ ವರ್ಷ ಇಲ್ಲಿ ವಿಜ್ಞಾನ ವಸ್ತು ಪ್ರದರ್ಶನ ನಡೆಯುತ್ತದೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ­ವರೆಗೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳು ಪ್ರಶಸ್ತಿ ಪಡೆದಿದ್ದಾರೆ.

ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಶಾಲಾ ಸುಧಾರಣಾ ಮೇಲುಸ್ತು­ವಾರಿ ಸಮಿತಿ ಅಧ್ಯಕ್ಷರು. ಆರ್‌ಎಂಎಸ್‌ ಅನುದಾನದ ₹ 28 ಲಕ್ಷ  ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಉದ್ಘಾಟನೆ­ಯಾಗಬೇಕಾಗಿದೆ.

ಮಕ್ಕಳಿಗೆ ವಿಶಾಲವಾದ ಆಟದ ಮೈದಾನ, ಶುದ್ಧ ಕುಡಿಯುವ ನೀರಿನ ಸೌಲಭ್ಯ ಮತ್ತು ಸುಸಜ್ಜಿತ ಶೌಚಾಲಯದ ವ್ಯವಸ್ಥೆಯಿದೆ. ಮುಖ್ಯಶಿಕ್ಷಕ ಶಿವಪುತ್ರಪ್ಪ ಪಾಟೀಲ ಅವರು ತಮ್ಮ ಪುತ್ರ ಹರ್ಷ ಪಾಟೀಲ ಅವರು ಸೇನೆಯಲ್ಲಿದ್ದಾರೆ. ಅವರ ಹೆಸರಿನಲ್ಲಿ ₹ 1.30 ಲಕ್ಷ ವೆಚ್ಚದಲ್ಲಿ ಆಟದ ಮೈದಾನ ಮತ್ತು ಶಾಲಾ ಕಂಪೌಂಡ್‌ ನಿರ್ಮಿಸಿದ್ದಾರೆ. 

ಸರ್ಕಾರದ ಕಾರ್ಯಕ್ರಮ ಮತ್ತು ನೀಡಿರುವ ಅನುದಾನ ಸರಿಯಾಗಿ ಉಪಯೋಗಿಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಹಲವಾರು ಕಾರ್ಯಕ್ರಮಗಳು ಶಾಲಾ ಶಿಕ್ಷಕರು ಏರ್ಪಡಿಸುತ್ತಿದ್ದು ಇದರಿಂದ ಪ್ರತಿ ವರ್ಷವೂ ಎಸ್ಸೆಸ್ಸೆಲ್ಸಿ ಫಲಿತಾಂಶ­ದಲ್ಲಿ ಹೆಚ್ಚಳವಾಗುತ್ತಿದೆ.

ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಾಂತಗೌಡ ಪಾಟೀಲ ಅವರು ಶಾಲೆಗೆ ಭೇಟಿ ನೀಡಿ, ಇಲ್ಲಿನ ಶೈಕ್ಷಣಿಕ ಚಟುವಟಿಕೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಶಿವಾನಂದ ಹಸರಗುಂಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.