ADVERTISEMENT

ಮಧ್ಯಸ್ಥಿಕೆದಾರರ ಪಾತ್ರ ಬಹಳ ಮುಖ್ಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 7:24 IST
Last Updated 15 ಜುಲೈ 2017, 7:24 IST

ಕಲಬುರ್ಗಿ: ‘ಮಧ್ಯಸ್ಥಿಕೆ ಎಂಬುದು ಕಲೆ. ಮಧ್ಯಸ್ಥಿಕೆದಾರ ಒಳ್ಳೆಯ ಕೇಳುಗನಾಗಿರಬೇಕು. ನೊಂದವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಮಧ್ಯಸ್ಥಿಕೆದಾರರ ಪಾತ್ರ ಬಹಳ ಮುಖ್ಯ’ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಜಿ.ನರೇಂದ್ರ ಹೇಳಿದರು. ಇಲ್ಲಿನ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ಸಭಾಂಗಣದಲ್ಲಿ ಬೆಂಗಳೂರು ಹಾಗೂ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದ ವತಿಯಿಂದ ಶುಕ್ರವಾರ ಆರಂಭವಾದ ಮಧ್ಯಸ್ಥಿಕೆದಾರರ ಮೂರು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮಧ್ಯಸ್ಥಿಕೆ ಎಂಬುದು ನಮ್ಮ ಪೂರ್ವಜರಿಂದಲೂ ನಡೆದುಕೊಂಡು ಬಂದಿದೆ. ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಜಗಳಗಳು ಆದಾಗ ಹಿರಿಯರೇ ಬಗೆಹರಿಸುತ್ತಿದ್ದರು. ಈಗ ಸಂಪ್ರದಾಯ ಕಡಿಮೆ ಆಗುತ್ತಿದೆ. ಎಲ್ಲವನ್ನೂ ಮಧ್ಯಸ್ಥಿಕೆದಾರರೇ ಮಾಡಲು ಆಗುವುದಿಲ್ಲ. ನ್ಯಾಯದಾನದಲ್ಲಿ ನ್ಯಾಯಾಧೀಶರ ಪಾತ್ರವೂ ಬಹಳ ಮುಖ್ಯವಾಗಿದೆ. ಎಲ್ಲರೂ ಒಟ್ಟಾಗಿ ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಸಲಹೆ ನೀಡಿದರು.

ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ಎ.ಪಾಟೀಲ ಮಾತನಾಡಿ, ‘ನ್ಯಾಯ ಬಯಸಿ ಕೋರ್ಟ್ ಮೆಟ್ಟಿಲು ಹತ್ತಬೇಕೋ ಬೇಡವೂ ಎಂಬ ಬಗ್ಗೆ ಮಧ್ಯಸ್ಥಿಕೆದಾರರು ಸೂಕ್ತ ಸಲಹೆ ನೀಡಬೇಕು. ಮಧ್ಯಸ್ಥಿಕೆದಾರರಿಗೆ ಸಾಮಾನ್ಯ ಕಾನೂನು ಜ್ಞಾನ, ತಿಳಿವಳಿಕೆ ಇರಬೇಕು. ಕಾಲ ಕಾಲಕ್ಕೆ ಬದಲಾಗುತ್ತಿರುವ ಕಾನೂನುಗಳ ಬಗ್ಗೆ ತಿಳಿದುಕೊಂಡಿರಬೇಕು. ಕಾನೂನಿನ ಬಗ್ಗೆ ನೊಂದವರಿಗೆ ಜಾಣ್ಮೆಯಿಂದ ತಿಳಿಹೇಳಬೇಕು. ಮಧ್ಯಸ್ಥಿಕೆದಾರರಲ್ಲಿ ಮುಖ್ಯವಾಗಿ ಶಿಸ್ತು, ಕೌಶಲ ಇರಬೇಕು’ ಎಂದು ಹೇಳಿದರು.

ADVERTISEMENT

ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಬಿ.ವಿ.ಪಾಟೀಲ ಮಾತನಾಡಿ, ‘ಪರ್ಯಾಯ ವ್ಯಾಜ್ಯ ಇತ್ಯರ್ಥ್ಯ ವ್ಯವಸ್ಥೆಯಲ್ಲಿ ಮಧ್ಯಸ್ಥಿಕೆದಾರರ ಪಾತ್ರ ಪ್ರಮುಖವಾಗಿದೆ. ಮಧ್ಯಸ್ಥಿಕೆದಾರರು ಮನಪೂರ್ವಕವಾಗಿ ಈ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಜಾಗೃತರಾಗಿ ಕೆಲಸ ಮಾಡಬೇಕು. ಬದಲಾಗುತ್ತಿರುವ ಕಾನೂನುಗಳ ಬಗ್ಗೆ ಸಂಪೂರ್ಣ ತಿಳಿವಳಿಕೆ ಹೊಂದಿರಬೇಕು’ ಎಂದು ತಿಳಿಸಿದರು.

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ.ಹಿರೇಮಠ ಮಾತನಾಡಿದರು. ವಕೀಲರ ಪರಿಷತ್ ಸದಸ್ಯ ಕಾಶೀನಾಥ ಮೋತಕಪಲ್ಲಿ, ಕಾಯಂ ಜನತಾ ನ್ಯಾಯಾಲಯದ ಅಧ್ಯಕ್ಷ ಎಸ್.ಎಂ.ಪಾಟೀಲ, ಬೆಂಗಳೂರಿನ ಮಧ್ಯಸ್ಥಿಕೆ ಕೇಂದ್ರದ ತರಬೇತುದಾರರಾದ ಮಂಜುಳಾ ಎನ್.ತೇಜಸ್ವಿ, ಬೃಂದಾ ನಂದಕುಮಾರ್, ಎಂ.ಚಂದ್ರಶೇಖರ್ ಇದ್ದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್.ಮಾಣಿಕ್ಯ ಸ್ವಾಗತಿಸಿ, ನಿರೂಪಿಸಿದರು. 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನವೀನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.