ADVERTISEMENT

ಮಹಿಳಾ ಸಾರಥ್ಯದಲ್ಲಿ ಚುನಾವಣೆ

ಕುತೂಹಲ ಕೆರಳಿಸಿದ ಸೇಡಂ ವಿಧಾನಸಭಾ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 9:41 IST
Last Updated 9 ಏಪ್ರಿಲ್ 2018, 9:41 IST

ಸೇಡಂ: ಜಿಲ್ಲೆಯಲ್ಲಿಯೇ ಸೇಡಂ ಕ್ಷೇತ್ರದ ವಿಧಾನಸಭಾ ಚುನಾವಣೆ ಮೊದಲ ಬಾರಿಗೆ ಮಹಿಳಾ ಸಾರಥ್ಯದಲ್ಲಿ ನಡೆಯುತ್ತಿದ್ದು, ಅತ್ಯಂತ ಕುತೂಹಲ ಕೆರಳಿಸಿದೆ. ಜಿಲ್ಲೆಯಲ್ಲಿ ಇಬ್ಬರು ಮಹಿಳಾ ಚುನಾವಣಾ ಅಧಿಕಾರಿಗಳು ಒಂದೆಡೆ ನಿಯೋಜನೆಗೊಂಡಿರುವುದು ಸೇಡಂ ಕ್ಷೇತ್ರದಲ್ಲಿ. ಇಬ್ಬರಿಗೂ ಮೊದಲ ಚುನಾವಣೆ ಜವಾಬ್ದಾರಿಯಾಗಿರುವುದು ಮತ್ತೊಂದು ವಿಶೇಷ.ಚುನಾವಾಣಾ ಆಯೋಗವು (ಉಪ ವಿಭಾಗಾಧಿಕಾರಿ) ಚುನಾವಣಾಧಿಕಾರಿಯನ್ನಾಗಿ ಬಿ.ಸುಶೀಲಾ ಮತ್ತು ಸಹಾಯಕ ಚುನಾವಣಾಧಿಕಾರಿ (ತಹಶೀಲ್ದಾರ್) ಕೀರ್ತಿ ಚಾಲಕ್ ಅವರನ್ನು ಸೇಡಂಗೆ ನಿಯೋಜಿಸಿದೆ.  ಅಧಿಕಾರಿಗಳು ಸಕಲ ತಯಾರಿ ನಡೆಸುತ್ತಿದ್ದಾರೆ.

ಹೈದರಾಬಾದ್‌ನ ಸುಶೀಲಾ 2015ರ ಐಎಎಸ್ ಬ್ಯಾಚ್‌ನಲ್ಲಿ ನೇಮಕಗೊಂಡು ರಾಯಚೂರು ಜಿಲ್ಲೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಸೇವೆ ಮುಗಿಸಿದ್ದಾರೆ. ನಂತರ ಸೇಡಂ ಉಪವಿಭಾಗಾಧಿಕಾರಿಯಾಗಿ ಕೆಲ ತಿಂಗಳು ಸೇವೆ ಸಲ್ಲಿಸಿದ್ದರು. ಆದರೆ, ಅವರು ಸೇವೆಗೆ ಸೇರಿದ ನಂತರ ಯಾವುದೇ ಚುನಾವಣೆಗಳು ಎದುರಾಗಿಲ್ಲ.

‘ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದೇನೆ. ಸರ್ಕಾರ ನನ್ನನ್ನು ಚುನಾವಣಾಧಿಕಾರಿಯಾಗಿ ನೇಮಿಸಿದೆ. ಅತ್ಯಂತ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತದಿಂದ ಚುನಾವಣೆ ನಡೆಸುತ್ತೇನೆ’ ಎಂದು ಸುಶೀಲಾ ಹೇಳುತ್ತಾರೆ.

ADVERTISEMENT

ಬೀದರ್ ಜಿಲ್ಲೆಯವರಾದ ಕೀರ್ತಿ ಚಾಲಕ್ ಅವರು ಬೀದರ್‌ನಲ್ಲಿ ಗ್ರೇಡ್-2 ತಹಶೀಲ್ದಾರ್ ಆಗಿ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ ಹುದ್ದೆಯಲ್ಲಿ ಪದೊನ್ನತಿ ಹೊಂದಿ ಮೂರು ವರ್ಷ ತಹಶೀಲ್ದಾರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಬೀದರ್‌ನ ಸ್ಥಳೀಯ ಚುನಾವಣೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲಸ ಮಾಡಿದ ಅನುಭವ ಇದೆ. ಆದರೆ, ಇಲ್ಲಿಯವರೆಗೆ ಇವರು ಚುನಾವಣಾಧಿಕಾರಿಯಾಗಿ ಕೆಲಸ ನಿರ್ವಹಿಸಿಲ್ಲ. ಇಬ್ಬರೂ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ವಿಶ್ವಾಸದಲ್ಲಿದ್ದಾರೆ.

6 ತಿಂಗಳಲ್ಲಿ 3 ಬಾರಿ ವರ್ಗಾವಣೆ

ಸುಶೀಲಾ ಅವರು ಸೇಡಂ ಉಪವಿಭಾಗಕ್ಕೆ ಅಕ್ಟೋಬರ್ 2017ರಲ್ಲಿ ಬಂದು ಅಧಿಕಾರ ವಹಿಸಿಕೊಂಡಿದ್ದರು. ಅವರು ಅಧಿಕಾರ ಸ್ವೀಕರಿಸಿದ ಆರು ತಿಂಗಳಲ್ಲಿಯೇ ಕಲಬುರ್ಗಿ ಮತ್ತು ಸೇಡಂಗೆ ಮೂರು ಬಾರಿ ವರ್ಗಾವಣೆಗೊಂಡಿದ್ದಾರೆ. ಇದು ಜನರಲ್ಲಿ ಮತ್ತು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.‘ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಸಾಮಾನ್ಯವಾಗಿದೆ. ಎಲ್ಲಿ ಹೋದರೂ ನಾನು ಪ್ರಾಮಾಣಿಕವಾಗಿ ಮತ್ತು ಕಾನೂನುಬದ್ಧವಾಗಿ ಕೆಲಸ ನಿರ್ವಹಿಸುತ್ತೇನೆ. ಇದು ನನ್ನ ನಿಯಮವಾಗಿದೆ. ಕಾನೂನು ಮೀರುವ ಕೆಲಸ ಮಾಡುವುದಿಲ್ಲ’ ಎಂದು ಸುಶೀಲಾ ಪ್ರತಿಕ್ರಿಯಿಸಿದರು.

**

ಚುನಾವಣಾಧಿಕಾರಿಯಾಗಿ ಮೊದಲ ಬಾರಿ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ. ಚುನಾವಣೆ ನಡೆಸಲು ಅನುಭವ ಕಡ್ಡಾಯವೇನಿಲ್ಲ. ಕಾನೂನಾತ್ಮಕವಾಗಿ ಚುನಾವಣಾ ಕಾರ್ಯನಿರ್ವಹಿಸುವೆ – ಬಿ.ಸುಶೀಲಾ, ಚುನಾವಣಾಧಿಕಾರಿ, ಸೇಡಂ.

**

ಬೀದರ್‌ನಲ್ಲಿ ಗ್ರೇಡ್-2 ತಹಶೀಲ್ದಾರ್ ಆಗಿದ್ದಾಗ ವಿವಿಧ ಚುನಾವಣೆಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ಸಹಾಯಕ ಚುನಾವಣಾಧಿಕಾರಿಯಾಗಿ ಇದು ಮೊದಲ ಜವಾಬ್ದಾರಿ – ಕೀರ್ತಿ ಚಾಲಕ್, ಸಹಾಯಕ ಚುನಾವಣಾಧಿಕಾರಿ, ಸೇಡಂ.

**

ಅವಿನಾಶ ಎಸ್.ಬೋರಂಚಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.