ADVERTISEMENT

ಮೋದಿ ಯೋಜನೆಗಳು ಜನಪರ: ತೆಲ್ಕೂರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 6:52 IST
Last Updated 16 ಫೆಬ್ರುವರಿ 2017, 6:52 IST
ಸೇಡಂ: ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ  ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಜಾರಿಗೆ ತಂದಿರುವ ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.
 
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಎಪಿಎಂಸಿ ಚುನಾವಣೆಯ ನಿಮಿತ್ತ ಬಿಜೆಪಿ ತಾಲ್ಲೂಕು ಘಟಕ ಆಯೋಜಿಸಿದ 3ನೇ ಮಂಡಲ ಕಾರ್ಯಕಾರಿಣಿ ಸಭೆ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು. 
 
ಸ್ವಾತಂತ್ರ್ಯ ಸಿಗುವುದಕ್ಕಿಂತ ಮೊದಲು ಕಾಂಗ್ರೆಸ್ ಸರ್ಕಾರ ದೇಶದ ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿರಲಿಲ್ಲ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನೇ ಹತ್ತಿಕ್ಕುವ ಕೆಲಸ ಮಾಡಿತ್ತು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಆಡಳಿತದ ದರ್ಬಾರು ನಡೆಸುತ್ತಲೇ, 6 ದಶಕ ದೇಶವನ್ನು ಹದಗೆಡಿಸಿತ್ತು. ದಲಿತರ ಮೇಲೆ ಕಗ್ಗೊಲೆ ಪ್ರಕರಣಗಳು ನಡೆದಿದ್ದವು ಎಂದು ಆಪಾದಿಸಿದರು. 
 
ಬಿಜೆಪಿ ದೇಶದ ಆಡಳಿತ ಚುಕ್ಕಾಣಿ ಹಿಡಿದಾಗಿನಿಂದ ದೇಶದಲ್ಲಿ ಅಭಿವೃದ್ಧಿ ಪರ ಕೆಲಸಗಳು ನಡೆಯುತ್ತಿವೆ. ಜನರಿಗೆ ಬಿಜೆಪಿ ಮೇಲೆ ವಿಶ್ವಾಸ ಮೂಡಿದೆ. ಕೇಂದ್ರ ಸರ್ಕಾರದಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸರ್ಕಾರದ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ಮುಟ್ಟಿಸಬೇಕು ಎಂದರು. 
 
ಮಾಜಿ ಉಪಸಭಾಪತಿ ಚಂದ್ರ ಶೇಖರ ರೆಡ್ಡಿ ದೇಶಮುಖ ಮದನಾ ಮಾತನಾಡಿ, ಪ್ರತಿಯೊಬ್ಬರು ಚುನಾವ ಣೆಗೆ ನಿಲ್ಲಬೇಕು ಎನ್ನುವುದು ಆಕಾಂಕ್ಷೆ ಇರುತ್ತದೆ. ಪಕ್ಷದಲ್ಲಿ ಯಾರೇ ನಿಲ್ಲಲಿ, ಅವರಿಗೆ ಪ್ರತಿಯೊಬ್ಬರು ಬೆಂಬಲಿಸಿ ಚುನಾವಣೆಯಲ್ಲಿ ಗೆಲ್ಲಿಸಿ ತರುವ ಕೆಲಸವ ಮಾಡಬೇಕು. ನನಗೆ ಅವಕಾಶ ಸಿಕ್ಕಿಲ್ಲ ಎಂದು ಬೇಸರಿಸಿಕೊಳ್ಳದೆ, ಪಕ್ಷಕ್ಕೆ ನಿಷ್ಠೆಯಿಂದ ದುಡಿಬೇಕು. ಮುಂದೊಂದು ದಿನ ಪಕ್ಷದಿಂದ ಅವಕಾಶಗಳು ಪ್ರತಿಯೊಬ್ಬರಿಗೂ ಸಿಗುತ್ತವೆ ಎಂದು ತಿಳಿಸಿದರು. 
 
ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಚಂದ್ರಕಾಂತ ಚವಾಣ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗಪ್ಪ ಕೊಳ್ಳಿ, ರಾಜಶೇಖರ ನೀಲಂಗಿ, ಅನೀಲ ಐನಾಪುರ, ಶ್ರೀನಾಥ ಪಿಲ್ಲಿ, ಮೋಹನ ರೆಡ್ಡಿ ಇಟಕಾಲ್, ಬಸವರಾಜ ರೇವ ಗೊಂಡ, ನಾಗರೆಡ್ಡಿ ದೇಶಮುಖ ಮದನಾ, ಮುರುಗೇಂದ್ರರೆಡ್ಡಿ ಪಾಟೀಲ, ತುರಬ್–ಉಲ್ ಹುಕ್, ಚೆನ್ನಬಸ್ಸಪ್ಪ ನಿರ್ಣಿ, ಗಂಗಮ್ಮ  ನಿಷ್ಠಿ, ಪಲ್ಲವಿ ಪಾಟೀಲ, ಪ್ರೀತಿ ಮೈಲ್ವಾರ, ಮಂಜುಳಾ, ಲಕ್ಷ್ಮಿನಾರಾಯಣ ಚಿಮ್ಮನಚೋಡಕರ್ ಇದ್ದರು. ಹಣಮಂತ ಗುಂಡಳ್ಳಿ ನಿರೂಪಿಸಿ, ಓಂಪ್ರಕಾಶ್ ಪಾಟೀಲ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.