ADVERTISEMENT

ವಿಧೇಯಕ ಮಂಡನೆಗೆ ವೈದ್ಯರ ವಿರೋಧ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 6:59 IST
Last Updated 14 ನವೆಂಬರ್ 2017, 6:59 IST

ಕಲಬುರ್ಗಿ: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ 2017ಕ್ಕೆ (ಕೆಪಿಎಂಇ) ಮಾಡಿರುವ ತಿದ್ದುಪಡಿ ವಿಧೇಯಕ ಮಂಡನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಜಿಲ್ಲಾ ಸಮಿತಿ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ಮಾಡಿದರು.

ಗ್ರಾಹಕರ ನ್ಯಾಯಾಲಯ ಮತ್ತು ವೈದ್ಯಕೀಯ ಪರಿಷತ್‌ಗಳು ಈಗಾಗಲೇ ರೋಗಿಗಳಿಗೆ ನ್ಯಾಯ ಒದಗಿಸುತ್ತಿವೆ. ವೈದ್ಯರು ತಪ್ಪಿತಸ್ಥರು ಎಂದು ಕಂಡು ಬಂದಲ್ಲಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶವಿದೆ.

ಹೀಗಿರುವಾಗ ಜಿಲ್ಲಾ ಮಟ್ಟದಲ್ಲಿ ಮತ್ತೊಂದು ಕುಂದು ಕೊರತೆ ಪರಿಹಾರ ಸಮಿತಿ ರಚಿಸಲು ಮುಂದಾಗಿರುವುದು ಸರಿಯಲ್ಲ. ಆದ್ದರಿಂದ ಅದನ್ನು ವಿಧೇಯಕದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಚಿಕಿತ್ಸೆ ವೈಫಲ್ಯ ಹಾಗೂ ಆಸ್ಪತ್ರೆಯ ವೆಚ್ಚಗಳ ಏರುಪೇರಿನ ಕಾರಣಕ್ಕೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಸದುದ್ದೇಶದಿಂದ ಚಿಕಿತ್ಸೆ ನೀಡಿದ ಬಳಿಕವೂ ಅನಾಹುತ ಸಂಭವಿಸಿದರೆ ವೈದ್ಯರನ್ನು ಜೈಲಿಗೆ ಕಳುಹಿಸುವುದು ಸರಿಯಾದ ಕ್ರಮವಲ್ಲ. ವೈದ್ಯರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು.

ಕಾಯ್ದೆ ಮೂಲಕ ವೃತ್ತಿ ನಿಯಂತ್ರಿಸಲು ಪ್ರಯತ್ನಿಸಿದರೆ, ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದರೆ ಆ ಭಯದಿಂದ ವೈದ್ಯರು ರೋಗಿಗಳನ್ನು ದಾಖಲು ಮಾಡಿಕೊಳ್ಳದೇ ಮತ್ತೊಂದು ಆಸ್ಪತ್ರೆಗೆ ಕಳುಹಿಸಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿ ಸಬೇಕು ಎಂದು ಆಗ್ರಹಿಸಿದರು.

ಡಾ. ಅನೂಪ್ ದೇಸಾಯಿ, ಡಾ. ರವೀಂದ್ರ, ಡಾ. ಅಮರೇಶ ಬಿರಾದಾರ, ಡಾ. ವೀರೇಶ ಕೊರವಾರ, ಡಾ. ಗಿರೀಶ, ಡಾ. ಕೈಲಾಶ ಬನ್ನಾಳೆ, ಡಾ. ನಿತಿನ್ ಟೆಂಗಳಿ, ಡಾ. ನಂದಕಿಶೋರ ಸಿಂಧೆ, ಡಾ. ಅಬ್ದುಲ್, ಡಾ. ಕೆ.ಎಸ್.ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.