ADVERTISEMENT

ವೀರಶೈವ, ಮೈಲಾರ ಪರಂಪರೆಯ ಹಲಕರ್ಟಿ

ಸಿದ್ದರಾಜ ಎಸ್.ಮಲಕಂಡಿ
Published 9 ನವೆಂಬರ್ 2017, 7:15 IST
Last Updated 9 ನವೆಂಬರ್ 2017, 7:15 IST
ಹಲಕರ್ಟಿ ಗ್ರಾಮದ ಕೋಟೆಯ ಹೆಬ್ಬಾಗಿಲು
ಹಲಕರ್ಟಿ ಗ್ರಾಮದ ಕೋಟೆಯ ಹೆಬ್ಬಾಗಿಲು   

ವಾಡಿ: ಐತಿಹಾಸಿಕ ಕುರುಹು, ಸ್ಮಾರಕಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಹಲಕರ್ಟಿ ಗ್ರಾಮವು ಧಾರ್ಮಿಕ ನೆಲೆಯಾಗಿ ಜಿಲ್ಲೆಯಲ್ಲಿ ವಿಶಿಷ್ಟ ಛಾಪು ಮೂಡಿಸಿದೆ.
ಗ್ರಾಮದ ಚರಿತ್ರೆ ಹಾಗೂ ಭವ್ಯ ಸಾಂಸ್ಕೃತಿಕ ಪರಂಪರೆಗೆ ಗ್ರಾಮದ ಕಲ್ಯಾಣಿ ಚಾಲುಕ್ಯರ ಕಾಲದ ಶಾಸನಗಳು, ಕೋಟೆ ಕೊತ್ತಲುಗಳು ಮತ್ತು ಪುರಾತನ ದೇಗುಲಗಳು ಸಾಕ್ಷಿ.

ಕಲ್ಯಾಣ ಚಾಲುಕ್ಯರ ಆಳ್ವಿಕೆ ಕಾಲಾವಧಿಯಲ್ಲಿ 300 ಗ್ರಾಮ ಘಟಕಗಳ ಆಡಳಿತ ಕೇಂದ್ರವಾಗಿದ್ದ ಅರಲು 300 (ಇಂದಿನ ಅಲ್ಲೂರು.ಬಿ) ವ್ಯಾಪ್ತಿಗೆ ಹಲಕರ್ಟಿ ಗ್ರಾಮವು ಒಳಪಟ್ಟಿತ್ತು. ವೀರಶೈವ ಮತ್ತು ಮೈಲಾರ ಸಂಪ್ರದಾಯಗಳ ಆಚರಣೆಯ ಮುಖ್ಯ ಕೇಂದ್ರವಾಗಿತ್ತು ಎಂದು ಶಿಲಾ ಶಾಸನಗಳು ಹೇಳುತ್ತವೆ.

ಪ್ರಾಚೀನ ಶಾಸನಗಳಲ್ಲಿ ಪಲ್ಲಕರಂಟ, ಭತ್ತಗಾಮ, ಪಲ್ಲಕರಂಟಿ, ಹಲಕರಟೆ, ಹಲಕರಟಿ ಎಂದು ಉಲ್ಲೇಖವಾಗಿರುವ ಹಲಕರ್ಟಿ ಗ್ರಾಮವು ಚಾರಿತ್ರಿಕವಾಗಿ ಮಹತ್ವ ಪಡೆದುಕೊಂಡಿದೆ. ಶಾಸನಗಳ ಪ್ರಕಾರ, ಹಲಕರ್ಟಿ ಗ್ರಾಮದ ಉಸ್ತುವಾರಿ ಚಾಲುಕ್ಯರ ಮಹಾಮಂಡಳೇಶ್ವರ ಲೋಕರಸಗೆ ವಹಿಸಲಾಗಿತ್ತು. ಲೋಕ ರಸ ಹಾಗೂ ಗ್ರಾಮ ಘಟಕಗಳ ಅಧಿಕಾ ರಿಗಳು ಗ್ರಾಮದಲ್ಲಿನ ದೇವಾಲಯಗಳಿಗೆ ದಾನ ದತ್ತಿ ನೀಡಿದ್ದರು.

ADVERTISEMENT

ಗ್ರಾಮದಲ್ಲಿ ಕ್ರಿ.ಶ 1096ರಲ್ಲಿ ದೊರೆತ ಶಾಸನ ಪ್ರಾಚೀನವಾದದ್ದು. ಗ್ರಾಮದಲ್ಲಿ ಈವರೆಗೆ ಒಟ್ಟು ಆರು ಶಿಲಾಶಾಸನಗಳು ಸಿಕ್ಕಿವೆ. ವೀರಭದ್ರೇಶ್ವರ ದೇವಸ್ಥಾನದಲ್ಲಿನ ಶಾಸನದ ಪ್ರಕಾರ, ನೂರ್ಮಡಿ ತೈಲಪನ ಆಳ್ವಿಕೆಯಲ್ಲಿ ಮಹಾಮಂಡಳೇಶ್ವರ ಆನೆಮರಸ, ವ್ಯಾಪಾರಿಗಳು ಗ್ರಾಮದ ಬಿಜ್ಜೇಶ್ವರ ದೇವಾಲಯಕ್ಕೆ ಹೊಲ, ತೋಟ, ಬೆಳ್ಳಿ ಮತ್ತು ನಾಣ್ಯಗಳನ್ನು ದಾನವಾಗಿ ಕೊಟ್ಟಿದ್ದರು.

ವೀರಭದ್ರೇಶ್ವರ ದೇವಾಲಯದಲ್ಲಿನ ಕ್ರಿ.ಶ 1154ರ ಶಾಸನದಂತೆ ಮುಮ್ಮರಿದಂಡ, ಶೆಟ್ಟಿ, ಪಂಚಮಠ ಮಹಾಜನ ಉಲ್ಲೇಖವಿದೆ. ಅವರು ಗ್ರಾಮದ ಪ್ರಭಾವಿ ಮುಖಂಡರಾಗಿದ್ದರು. ಕೇತಿಶೆಟ್ಟಿ, ಕೇಶವಶೆಟ್ಟಿ ಎಂಬ ಹೆಸರುಗಳು ಗ್ರಾಮದ ಧಾರ್ಮಿಕ ಪರಂಪರೆ, ಆಡಳಿತದ ಹುದ್ದೆಗಳ ಹಾಗೂ ವ್ಯಾಪಾರದ ಮಹತ್ವದ ಕುರಿತು ಮಾಹಿತಿ ನೀಡುತ್ತವೆ.

ಅರಲು 300 ಘಟಕದ ಆಡಳಿತ ನಡೆಸುತ್ತಿದ್ದ ಆನೆಮರಸನು ಈ ಗ್ರಾಮದ ನಿಗಾ ವಹಿಸುತ್ತ ದಾನದತ್ತಿ ಬಿಟ್ಟಿದ್ದ ಎಂದು ಶಾಸನವೊಂದು ಹೇಳುತ್ತದೆ. ಹಲಕರ್ಟಿ ಗ್ರಾಮವು ವೀರಶೈವ ಸಂಪ್ರದಾಯ ಆಚರಣೆಯ ಪರಂಪರೆ ಮತ್ತು ಪುರವಂತರ ಆರಾಧ್ಯದೈವವಾದ ವೀರಭದ್ರೇಶ್ವರ ದೇವರ ಭಕ್ತಿಗೆ ನೆಲೆಯಾಗಿತ್ತು.

ದೇವಾಲಯದ ಗರ್ಭಗುಡಿಯ ಪಕ್ಕದಲ್ಲಿರುವ ಕ್ರಿ.ಶ 1600 ಶಾಸನದಲ್ಲಿ ಕಂಡು ಬರುವ ನಂದಿನಾಥ, ಭೃಂಗಿನಾಥ, ವೀರಭದ್ರ ದೇವರು, ಚನ್ನವೀರ ಒಡೆಯರ ಶಿಷ್ಯರು, ಪರಸಿಯ ಸಿದ್ದಯ್ಯ ದೇವರು, ವೀರಯ್ಯ ದೇವರು ಎಂಬ ಉಲ್ಲೇಖ ಗ್ರಾಮದಲ್ಲಿ ಪರಸಿ ಮಠದ ಪರಂಪರೆ ಹಾಗೂ ವೀರಶೈವ ಸಂಪ್ರದಾಯ ಆಚರಣೆ ಪ್ರಚಲಿತದಲ್ಲಿತ್ತು ಎನ್ನುವುದಕ್ಕೆ ಪುಷ್ಟಿ ನೀಡುತ್ತವೆ.

ಗ್ರಾಮದಲ್ಲಿ ಮಠ ಪರಂಪರೆ ಮುಂದುವರೆದಿದೆ. ಕಟ್ಟಿಮನಿ ಹಿರೇಮಠವು ಅಧ್ಯಾತ್ಮ, ಧಾರ್ಮಿಕ ಮಾರ್ಗದರ್ಶನ ನೀಡುತ್ತದೆ. ಮಠಾಧಿಪತಿ ಷ.ಬ್ರ ಮುನೀಂದ್ರ ಶಿವಾಚಾರ್ಯರು ಮಠದ ಪರಂಪರೆ ಮುನ್ನೆಡೆಸಿದ್ದಾರೆ. ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿ ಪತ್ತೆಯಾದ ಕ್ರಿ.ಶ 1328 ಶಿಲಾಶಾಸನವು ಗ್ರಾಮದಲ್ಲಿ ಮೈಲಾರ ಸಂಪ್ರದಾಯ ಅನುಸರಿಸಲಾಗುತ್ತಿತ್ತು ಎಂಬುವುದಕ್ಕೆ ಪ್ರಮುಖ ಸಾಕ್ಷಿಯಾಗಿದೆ.

ಜಮಖಂಡಿಯ ಮಹಾ ಮಂಡಳೇಶ್ವರ ಜಕ್ಕಣರಸನ ಮಗ ಬ್ರಹ್ಮದೇವನು 1250ರಲ್ಲಿ ವಿಭವ ಸಂವತ್ಸರದ ಭಾದ್ರಪದ ಮಾಸದಲ್ಲಿ ಗ್ರಾಮದ ಮೈಲಾರೇಶ್ವರ ದೇವರಿಗೆ ಪಡಶಾಲೆ ಹಾಗೂ ಶಿವಾಲಯ ಕಟ್ಟಿಸಿದ ಎಂದು ಶಾಸನ ಹೇಳುತ್ತದೆ.

ದೇವಾಲಯಗಳು: ಮಲ್ಲಿಕಾರ್ಜುನ ದೇವಾಲಯ, ವೀರಭದ್ರೇಶ್ವರ ದೇವಸ್ಥಾನ ಮತ್ತು ಪಕ್ಕದಲ್ಲೇ ಇರುವ ಕತ್ತಲಗುಡಿಯೇ ಚಾರಿತ್ರಿಕವಾದ ಬಿಜ್ಜೇಶ್ವರ ದೇವಸ್ಥಾನವಿರಬಹುದು ಎಂದು ಇತಿಹಾಸತಜ್ಞರು ಹೇಳುತ್ತಾರೆ.

ತಗ್ಗಿನಲ್ಲಿರುವ ಶಂಭುಲಿಂಗೇಶ್ವರ ದೇವಾಲಯ ಶಿಥಿಲಾವಸ್ಥೆಯಲ್ಲಿದೆ. ಒಂದೇ ಸಾಲಿನಲ್ಲಿ ಮೂರು ಗರ್ಭಗುಡಿಗಳಿದ್ದು, ಶಿವಲಿಂಗಗಳಿವೆ. ತೆರೆದ ಅಂತರಾಳದಲ್ಲಿ ದಶಾವತಾರ ಕೆತ್ತನೆಯ ಪ್ರಭಾವಳಿ ಇರುವ ವಿಷ್ಣುವಿನ ಮುಕ್ಕಾದ ಸುಂದರ ಶಿಲ್ಪಕಲಾಕೃತಿಯಿದೆ.ಕಿರಿದಾದ ಗಣಪತಿ ದೇವಾಲಯದ ನವರಂಗದ ಮೇಲೆ ರಸ್ತೆ ನಿರ್ಮಿಸಲಾಗಿದೆ.

ಕುಂಬಾರ ಸಾಲಿಗುಡಿ ಮತ್ತೊಂದು ಪ್ರಾಚೀನ ದೇವಾಲಯ. ಕುಂಬಾರ ಓಣಿಯಲ್ಲಿ ನೆಲದಲ್ಲಿ ಹೂತು ಹೋಗಿದ್ದ ಅಂಬಿಗರ ಚೌಡಯ್ಯ ಗುಡಿ ಪತ್ತೆಯಾಗಿದೆ. ಗ್ರಾಮದ ರಕ್ಷಣೆಗಾಗಿ ಅಂದು ನಿರ್ಮಿಸ ಲಾಗಿದ್ದ ಕೋಟೆಗೋಡೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ವೀರಭದ್ರೇಶ್ವರ ದೇವಸ್ಥಾನ ಹಿಂಬಾಗದ ತೆರೆದ ಬಾವಿ ಮಲಿನವಾಗಿದೆ.

ಸುರಂಗ ಪತ್ತೆ: ಗ್ರಾಮದಲ್ಲಿ ಈಚೆಗೆ ವಿದ್ಯುತ್ ಕಂಬ ಅಳವಡಿಸುವ ವೇಳೆ ಬೃಹತ್ ಸುರಂಗ ಪತ್ತೆಯಾಗಿದೆ, ವೀರಭದ್ರೇಶ್ವರ ದೇವಸ್ಥಾನದ ಹಿಂಬಾಗ ಸುಮಾರು 150 ಮೀಟರ್ ಅಂತರದಲ್ಲಿ ಈ ಸುರಂಗ ಪತ್ತೆಯಾಗಿದೆ.

ಈ ಸುರಂಗ ಮಾರ್ಗ ಎಲ್ಲಿಂದ ಪ್ರಾರಂಭವಾಗಿ ಎಲ್ಲಿಗೆ ಮುಕ್ತಾಯ ವಾಗಿದೆ ಎನ್ನುವ ಕುತೂಹಲ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಇದರ ಕುರಿತು ಸಂಶೋಧನೆ ಮಾಡಿ, ಇದರ ವಿಶೇಷತೆ ಕುರಿತು ಮಾಹಿತಿ ನೀಡಲು ಗ್ರಾಮಸ್ಥರು ಕೋರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.