ADVERTISEMENT

ವೈನ್: ರೈತ, ವಿದ್ಯಾರ್ಥಿಗಳಿಗೆ ಜಾಗೃತಿ

ಹೈದರಾಬಾದ್‌ ಕರ್ನಾಟಕದಲ್ಲಿ ಮೊದಲ ಬಾರಿಗೆ ಡಿಸೆಂಬರ್‌ನಲ್ಲಿ ವೈನ್‌ ಮೇಳ

ಚಂದ್ರಕಾಂತ ಮಸಾನಿ
Published 25 ನವೆಂಬರ್ 2015, 6:06 IST
Last Updated 25 ನವೆಂಬರ್ 2015, 6:06 IST

ಬೀದರ್: ದ್ರಾಕ್ಷಿ ಬೆಳೆಗಾರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ದ್ರಾಕ್ಷಾರಸ ಮಂಡಳಿಯು ಹೈದರಾಬಾದ್‌ ಕರ್ನಾಟಕದಲ್ಲಿ ಮೊದಲ ಬಾರಿಗೆ  ನಗರದ ನೆಹರೂ ಕ್ರೀಡಾಂಗಣದಲ್ಲಿ  ಡಿಸೆಂಬರ್ 3 ರಿಂದ 5 ರ ವರೆಗೆ ಬೃಹತ್‌ ವೈನ್‌ ಮೇಳ ಆಯೋಜಿಸಲು ನಿರ್ಧರಿಸಿದೆ.

ವೈನ್‌ ಮೇಳದಲ್ಲಿ ಸೂಲಾ, ಎಲೈಟ್, ಹೆರಿಟೇಜ್, ರಿಕೋ, ನೇಸರ, ಬ್ಲಾಕ್‌ ಬಗ್, ಮಧುಲೋಕ, ಎನೋಟಿಕಾ ಮಧುಲೋಕ ಸೇರಿದಂತೆ ಒಟ್ಟು 10 ಪ್ರಮುಖ ವೈನ್‌ ಕಂಪೆನಿಗಳು ಪಾಲ್ಗೊಳ್ಳಲಿವೆ. ಮದ್ಯ ಪ್ರಿಯರಿಗೆ ಮೇಳದಲ್ಲಿ ಒಟ್ಟು 10 ದೇಶಗಳ ಸ್ಪೆಷಲ್ ವೈನ್‌ ಸವಿಯಲು ಅವಕಾಶ ದೊರೆಯಲಿದೆ.

2007ರಲ್ಲಿ ಕರ್ನಾಟಕ ದ್ರಾಕ್ಷಾರಸ ಮಂಡಳಿ ಆರಂಭವಾದಾಗಿನಿಂದ ರಾಜ್ಯದಲ್ಲಿ ಒಟ್ಟು ಎಂಟು ಬಾರಿ ವೈನ್‌ ಮೇಳ ನಡೆದಿವೆ. ಬೆಂಗಳೂರಲ್ಲಿ ಮೂರು ಬಾರಿ ಅಂತರರಾಷ್ಟ್ರೀಯ ಮಟ್ಟದ ವೈನ್‌ ಮೇಳ ನಡೆದರೆ, ಬೆಳಗಾವಿ, ಮೈಸೂರಲ್ಲಿ ತಲಾ ಎರಡು ಬಾರಿ ಹಾಗೂ ಹುಬ್ಬಳ್ಳಿಯಲ್ಲಿ ಒಂದು ಬಾರಿ ವೈನ್‌ ಮೇಳವನ್ನು ಆಯೋಜಿಸಿ ಉತ್ತಮ ಆದಾಯ ಪಡೆದಿದೆ.

‘ಆರೋಗ್ಯ ವೃದ್ಧಿಗೆ ಪೂರಕವಾಗಿರುವ ವೈನ್‌ ಸೇವನೆಗೆ ಉತ್ತೇಜಿಸುವುದು, ದ್ರಾಕ್ಷಿ ಬೆಳೆಯ ಮಹತ್ವ ಹಾಗೂ ಅದರಿಂದ ಬರುವ ಆದಾಯ ಕುರಿತು ರೈತರಿಗೆ ಮಾಹಿತಿ ನೀಡುವುದು, ಬಿಸಿನೆಸ್‌ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ವ್ಯಾವಹಾರಿಕ ತಿಳಿವಳಿಕೆ ಹಾಗೂ ಗ್ರಾಹಕರಿಗೆ ವೈನ್‌ ಹಾಕಿಕೊಡುವ ಬಗೆಗೆ ಹೋಟೆಲ್‌ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು ಮೇಳದ ಉದ್ದೇಶವಾಗಿದೆ’ ಎಂದು ಕರ್ನಾಟಕ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಬಕ್ಕಪ್ಪ ಕೋಟೆ  ‘ಪ್ರಜಾವಾಣಿ’ಗೆ  ತಿಳಿಸಿದರು.

ದ್ರಾಕ್ಷಾರಸ ಸೇವನೆಯ ಬಗೆಗೆ ಜನರಲ್ಲಿ ತಪ್ಪು ತಿಳಿವಳಿಕೆ ಇದೆ. ಕಾರ್ಯಾಗಾರದ ಮೂಲಕ ಅದನ್ನು ದೂರ ಮಾಡಲಾಗುವುದು. ಬೆಂಗಳೂರು, ಬೆಳಗಾವಿ, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ವೈನ್‌ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇಳದ ಸಂದರ್ಭದಲ್ಲಿ ವಹಿವಾಟಿನಲ್ಲೂ ಶೇ 20ರಿಂದ 30ರಷ್ಟು ವೃದ್ಧಿಯಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ನಾಲ್ಕು ಕಡೆ ವೈನ್‌ ತಯಾರಿಕೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಅತ್ಯಂತ ಕಡಿಮೆ ದರದಲ್ಲಿ ವೈನ್‌ ಮಾರಾಟ ಮಾಡಲಾಗುತ್ತಿದೆ. ಒಂದು ಲೀಟರ್ ವೈನ್‌ಗೆ ₹ 100 ಮಾತ್ರ ನಿಗದಿಪಡಿಸಲಾಗಿದೆ.

‘ವೈನ್‌ ಸೇವನೆಯಿಂದ ಹೃದಯ ರೋಗ ಸಾಧ್ಯತೆ ಕಡಿಮೆಗೊಳಿಸಬಹುದು. ಮಧುಮೇಹ ರೋಗ ಬರದಂತೆ ತಡೆಯಬಹುದು. ಮಾನಸಿಕ ಒತ್ತಡ ಕಡಿಮೆ ಮಾಡಬಹುದು. ಕ್ಯಾನ್ಸರ್‌ ತಡೆಯಬಹುದು. ನರಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ರಕ್ಷಿಸಬಹುದು. ಮಲಬದ್ಧತೆಯಾಗದಂತೆ ನೋಡಿಕೊಳ್ಳಬಹುದು. ಊಟದ ಜೊತೆ ಸೇವಿಸಿದಾಗ ಪಚನಕ್ರಿಯೆ ಉತ್ತಮಗೊಳ್ಳಲಿದೆ’ ಎಂದು ಕೋಟೆ ತಿಳಿಸಿದರು.

‘ಮದ್ಯ ಸೇವನೆ ಆರೋಗ್ಯಕ್ಕೆ ಮಾರಕ. ಆದರೆ ವೈನ್‌ ಆರೋಗ್ಯಕ್ಕೆ ಒಳ್ಳೆಯದು. ಬೀದರ್‌ ನಗರದಲ್ಲೂ ವೈನ್‌ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ಇದೆ. ಈಗಾಗಲೇ ಫ್ಲೆಕ್ಸ್, ಬ್ಯಾನರ್‌ ಹಾಗೂ ಕರಪತ್ರಗಳನ್ನು ಮುದ್ರಸಲಾಗಿದೆ. ಮೇಳಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.