ADVERTISEMENT

ಶೇ100 ಗುರಿ ಸಾಧನೆಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:41 IST
Last Updated 22 ಮೇ 2017, 5:41 IST

ಚಿಂಚೋಳಿ: ‘ನಗರ ಹಾಗೂ ಗ್ರಾಮೀಣ ಪ್ರದೇಶದ ನಿರುದ್ಯೋಗಿ ವಿದ್ಯಾವಂತ ಹಾಗೂ ಅವಿದ್ಯಾವಂತ ಯುವಜನರಿಗೆ ಸರ್ಕಾರ ತರಬೇತಿ ನೀಡಿ ಉದ್ಯೋಗ ಕಲ್ಪಿಸಲು ಯೋಜನೆ ರೂಪಿಸುತ್ತಿದೆ. ಉದ್ಯೋಗ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಬೇಕು’ ಎಂದು ತಹಶೀಲ್ದಾರ್ ದಯಾನಂದ ಪಾಟೀಲ ತಿಳಿಸಿದರು.

ಇಲ್ಲಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ನಿರುದ್ಯೋಗಿ ಯುವಕರನ್ನು ಗುರುತಿಸಿ ಹಾಗೂ ಅವರ ಸಾಮರ್ಥ್ಯ ಅರಿಯಲು ಸರ್ಕಾರ ಮಹತ್ವದ ಹೆಜ್ಜೆಯಿ ಟ್ಟಿದೆ. ಇದನ್ನು ಪಡೆದು ಸರ್ಕಾರ ನಿಮಗೆ ಅರ್ಹವಾದ ತರಬೇತಿ ನೀಡಿ ಉದ್ಯೋಗ ಅವಕಾಶ ನೀಡಲಿದೆ’ ಎಂದರು.

‘ತಾಲ್ಲೂಕಿನಲ್ಲಿರುವ 18ರಿಂದ 35ವರ್ಷ ವಯೋಮಿತಿಯ ಎಲ್ಲ ಯುವಕರು ಹಾಗೂ ಯುವತಿಯರು ತಪ್ಪದೆ ತಮ್ಮ ಹೆಸರು ನೋಂದಣಿ ಮಾಡಿಸಬೇಕು. ನೋಂದಣಿ ಕೇಂದ್ರಗಳಿಗೆ ತೆರಳುವಾಗ ಯುವಕರು ಮೊಬೈಲ್‌ ಹಾಗೂ ಆಧಾರ್ ಕಾರ್ಡ್‌ ಜತೆಯಲ್ಲಿ ಇಟ್ಟುಕೊಳ್ಳಬೇಕು’ ಎಂದರು.

ADVERTISEMENT

‘ಚಿಂಚೋಳಿಯ ಚಂದಾಪುರದ ಮಿನಿ ವಿಧಾನಸೌಧ, ತಾಲ್ಲೂಕು ಪಂಚಾ ಯಿತಿ ಕಚೇರಿ, ಮಹಾತ್ಮ ಗಾಂಧೀಜಿ ವೃತ್ತದ ಹಾಗೂ ಪಂಚಾಯತ್ ರಾಜ್‌ ತಾಂತ್ರಿಕ ಉಪ ವಿಭಾಗ (ಜಿ.ಪಂ.) ಕಚೇರಿಯಲ್ಲಿ ನೋಂದಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪಟ್ಟಣದ ಪುರಸಭೆ ಕಾರ್ಯಾಲಯ, ಎಲ್ಲ ಗ್ರಾಮ ಪಂಚಾಯಿತಿ ಕಚೇರಿಗಳು ಹಾಗೂ ನಾಡ ಕಚೇರಿಗಳಲ್ಲಿ ಉಚಿತವಾಗಿ ನೋಂದಣಿ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ವಿವರಿಸಿದರು.

ಕಾರ್ಯನಿರ್ವಹಣಾಧಿಕಾರಿ ಅನಿಲ ರಾಠೋಡ ಮಾತನಾಡಿ, ಎಲ್ಲ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ನಿರುದ್ಯೋಗಿ ಯುವಕರ ನೋಂದಣಿಯನ್ನು ಕಂಪ್ಯೂಟರ್ ಆಪರೇಟರ್‌ ಉಚಿತವಾಗಿ ನಡೆಸಬೇಕು. ಇಂಟರ್‌ನೆಟ್‌ ಸೌಲಭ್ಯ ಇಲ್ಲದ ಗ್ರಾಮ ಪಂಚಾಯಿತಿಗಳು ನೆರೆಯ ಗ್ರಾಮ ಪಂಚಾಯಿತಿಗೆ ತೆರಳಿ ಅಲ್ಲಿಗೆ ಜನರನ್ನು ಕರೆಸಿ ನೋಂದಣಿ ಮಾಡಬೇಕು’ ಎಂದರು.

ನೀರಸ ಪ್ರತಿಕ್ರಿಯೆ:  ಕಳೆದ 5 ದಿನಗಳಲ್ಲಿ ತಾಲ್ಲೂಕಿನಲ್ಲಿ ಕೇವಲ 451 ಜನರ ನೋಂದಣಿ ಆಗಿದೆ. ಇದು ಅತ್ಯಲ್ಪ ಸಾಧನೆಯಾಗಿದ್ದು, ಯುವಜನರಿಂದ ನಿರೀಕ್ಷಿತ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ವ್ಯಾಪಕ ಪ್ರಚಾರ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

‘ಮೇ 25 ನೋಂದಣಿಗೆ ಕೊನೆಯ ದಿನವಾಗಿದೆ. ಪ್ರತಿಕೇಂದ್ರದ ಎದುರು ಕಡ್ಡಾಯವಾಗಿ ಬ್ಯಾನರ್‌ ಕಟ್ಟಬೇಕು, ಬೆಳಿಗ್ಗೆ 10ರಿಂದ ಸಂಜೆ 7ರ ವರೆಗೆ ನೋಂದಣಿ ಮಾಡಬೇಕು, ಪ್ರತಿಯೊಂದು ಗ್ರಾಮ ಮತ್ತು ತಾಂಡಾದಲ್ಲಿ ಡಂಗೂರ ಸಾರಬೇಕು’ ಎಂದು ತಹಶೀಲ್ದಾರ್ ಸೂಚಿಸಿದರು.

ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಗ್ರೇಡ್‌–2 ತಹಶೀಲ್ದಾರ್ ವೆಂಕಟೇಶ ದುಗ್ಗನ್‌, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಲಿಂಗ್‌ ಆರ್‌.ಎಂ, ಧೇನುಸಿಂಗ್‌ ಚವಾಣ ಇದ್ದರು. ಹೆಸರು ನೋಂದಣಿಗೆ www.kaushalkar.com ವೆಬ್‌ಸೈಟ್‌ ವೀಕ್ಷಿಸಬಹುದು.

* * 

ಚಿಂಚೋಳಿ ಪಟ್ಟಣದಲ್ಲಿ  ಶನಿವಾರ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಆದರೂ ಜನರೇಟರ್‌ ಬಳಸಿ ಹೆಸರು ನೋಂದಣಿಗೆ ಕ್ರಮ ಕೈಗೊಳ್ಳಲಾಗಿದೆ
ಮನೋಜಕುಮಾರ ಗುರಿಕಾರ ಮುಖ್ಯಾಧಿಕಾರಿ, ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.