ADVERTISEMENT

ಸೌಲಭ್ಯ ವಂಚಿತ 100 ಹಾಸಿಗೆಯ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 8:36 IST
Last Updated 18 ನವೆಂಬರ್ 2017, 8:36 IST
ಸಾರ್ವಜನಿಕ ಆಸ್ಪತ್ರೆ ಎದುರು ಶುಕ್ರವಾರ ಕಸ ಬಿದ್ದಿರುವುದು
ಸಾರ್ವಜನಿಕ ಆಸ್ಪತ್ರೆ ಎದುರು ಶುಕ್ರವಾರ ಕಸ ಬಿದ್ದಿರುವುದು   

ಅಫಜಲಪುರ: ಒಂದು ಕಾಲದಲ್ಲಿ ಪಟ್ಟಣದ 100 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ‘ಡಿ’ ಗ್ರೂಪ್‌ ನೌಕರರು ಇಲ್ಲದೇ ರೋಗಿಗಳು ಪರದಾಡುತ್ತಿದ್ದರೆ ಸರ್ಕಾರ ಸದ್ಯಕ್ಕೆ ಸಾರ್ವಜನಿಕ ಆಸ್ಪತ್ರೆಗೆ 11 ವಿವಿಧ ತಜ್ಞ ವೈದ್ಯರು ಮತ್ತು 50 ‘ಡಿ’ ಗ್ರೂಪ್‌ ನೌಕರರನ್ನು ನೇಮಕ ಮಾಡಿದೆ. ಆದರೂ, ರೋಗಿಗಳ ಪರದಾಟ ತಪ್ಪಿಲ್ಲ.

‘ಒಬ್ಬ ವೈದ್ಯರಿಗೆ ತಿಂಗಳಿಗೆ ₹1.20 ಲಕ್ಷ ಸಂಬಳವಿದೆ. ಆದರೆ, ಆ ವೈದ್ಯರು ಆಸ್ಪತ್ರೆಗೆ ಸರತಿಯ ಮೇಲೆ ತಮ್ಮ ತಮ್ಮಲೇ ಮಾತನಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ, ರೋಗಿಗಳಿಗೆ ವೈದ್ಯರ ಚಿಕಿತ್ಸೆ ದೊರೆಯುತ್ತಿಲ್ಲ. ಸರ್ಕಾರದಿಂದ ಸಂಬಳ ಮಾತ್ರ ಖರ್ಚಾಗುತ್ತಿದೆ’ ಎಂದು ಹೇಳಲಾಗುತ್ತಿದೆ.

ಆಸ್ಪತ್ರೆಯನ್ನು ಸ್ವಚ್ಛವಾಗಿಡಲು ಮತ್ತು ಆಸ್ಪತ್ರೆ ಮುಂದಿರುವ ಮಿನಿ ಗಾರ್ಡನ್‌ ನೋಡಿಕೊಳ್ಳಲು ಸುಮಾರು 50 ‘ಡಿ’ ಗ್ರೂಪ್‌ ನೌಕರರು ಇದ್ದಾರೆ. ಆದರೆ, ಗಾರ್ಡನ್‌ ಸ್ಥಳ ನೀರಿಲ್ಲದೇ ಒಣಗುತ್ತಿದೆ. ಆಸ್ಪತ್ರೆ ಅಲ್ಲಲ್ಲಿ ರೋಗಿಗಳು ತಿಂದು ಬಿಸಾಕಿದ ತ್ಯಾಜ್ಯ ವಸ್ತುಗಳು ಬಿದ್ದಿವೆ. ಅದನ್ನು ತೆಗೆಯುವವರಿಲ್ಲ. ಶೌಚಾಲಯಗಳು ಗಬ್ಬು ನಾರುತ್ತಿವೆ. ಸ್ವಚ್ಛ ಮಾಡುವವರು ಇಲ್ಲ ಶುದ್ಧ ಕುಡಿಯುವ ನೀರಿಲ್ಲ. ಹೀಗಾಗಿ, ರೋಗಿಗಳು ಮೂಲ ಸೌಲಭ್ಯಕ್ಕಾಗಿ ಪರದಾಡುವಂತಾಗಿದೆ.

ADVERTISEMENT

ತಾಲ್ಲೂಕು ಬಿಜೆಪಿ ಕಾರ್ಯದರ್ಶಿ ಶರಣು ಕುಂಬಾರ, ಯುವಮೋರ್ಚಾ ಅಧ್ಯಕ್ಷ ಅಂಬರೀಷ್ ಬುರಲಿ ಮಾಹಿತಿ ನೀಡಿ, ‘ಸರ್ಕಾರ ಸಾಕಷ್ಟು ಹಣ ಖರ್ಚು ಮಾಡಿ 100 ಹಾಸಿಗೆಯ ಆಸ್ಪತ್ರೆ ನಿರ್ಮಾಣ ಮಾಡಿದೆ. ಅದಕ್ಕೆ ತಕ್ಕಂತೆ ವೈದ್ಯರನ್ನು ಮತ್ತು ವಿವಿಧ ಹಂತದ ಸಿಬ್ಬಂದಿಯನ್ನು ನೇಮಕ ಮಾಡಿದೆ. ಸರಿಯಾಗಿ ಕೆಲಸ ಮಾಡದ ಕಾರಣ ಸರ್ಕಾರದ ಸೌಲಭ್ಯಗಳು ರೋಗಿಗಳಿಗೆ ತಲುಪುತ್ತಿಲ್ಲ’ ಎಂದು ಹೇಳಿದ್ದಾರೆ.ಈ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.