ADVERTISEMENT

ಸ್ವಚ್ಛ ಭಾರತ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು

ಗಮನ ಸೆಳೆದ ‘ಗಾಂಧಿ ಬಂದ’ ಕಿರುನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 4:31 IST
Last Updated 22 ಏಪ್ರಿಲ್ 2017, 4:31 IST
ಸೇಡಂ: ಮಾನವ ಜೀವನದ ಯಶಸ್ಸಿಗೆ ಗುರುವಿನ ಮಾರ್ಗದರ್ಶನ ಹಾಗೂ ಸತತ ಪ್ರಯತ್ನ ಅಗತ್ಯ. ಗುರುವಿಲ್ಲದೆ ಯಾವುದೇ ಸಾಧನೆ ಅಸಾಧ್ಯ ಎಂದು ಹಿರಿಯ ಮುಖಂಡ ಧನಶೆಟ್ಟಿ ಸಕ್ರಿ ಹೇಳಿದರು. 
 
ಇಲ್ಲಿನ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಜಾತ್ರೆ ನಿಮಿತ್ತ ಜಾಕನಪಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ‘ನಾನು ನಮ್ಮೂರು ಶಾಲಾ ವೇದಿಕೆ’ ವಿದ್ಯಾರ್ಥಿಗಳು ಗುರುವಾರ ಪ್ರದರ್ಶಿಸಿದ ಸ್ವಚ್ಛ ಭಾರತ ಕಲ್ಪನೆಯ ‘ಗಾಂಧಿ ಬಂದ’ ಕಿರು ನಾಟಕ ಪ್ರದರ್ಶನದಲ್ಲಿ ಮಾತನಾಡಿದರು. 
 
ಕಲಿಕೆಯ ವಯಸ್ಸಿನಲ್ಲಿ ಮಕ್ಕಳು ರಂಗಕಲೆಯತ್ತ ಆಸಕ್ತಿ ತೋರಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವುದು ಶ್ಲಾಘನೀಯ. ಜನರು ಕಿರುನಾಟಕವನ್ನು ನೋಡಿ ನಾಟಕದಲ್ಲಿನ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳು ಮುಂಬರುವ ದಿನಗಳಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಆಶಿಸಿದರು. 
 
ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ ಮಾಸ್ತರ ಮೈಲ್ವಾರ ಮಾತನಾಡಿ, ‘ಕೇವಲ ಭಾಷಣ ಮಾಡುವುದರಿಂದ ಹಾಗೂ ಓದುವುದರಿಂದ ಸ್ವಚ್ಛತೆಯ ಕಲ್ಪನೆ ಈಡೇರುವುದಿಲ್ಲ. ಬದಲಾಗಿ ಪ್ರತಿಯೊಬ್ಬರು ಎಚ್ಚೆತ್ತುಕೊಂಡು ತಮ್ಮ ಸುತ್ತಲಿನ ಪ್ರದೇಶಗಳನ್ನು ಶುಚಿಗೊಳಿಸಿದಾಗ ಮಾತ್ರ ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗುತ್ತದೆ’ ಎಂದು ತಿಳಿಸಿದರು. 
 
ನಾಟಕದಿಂದ ಜಾಗೃತಿ:  ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಸ್ವಚ್ಛ ಭಾರತ ಕಲ್ಪನೆ ಹೊತ್ತ ‘ಗಾಂಧಿ ಬಂದ’ ನಾಟಕದಲ್ಲಿ ಪ್ರಸ್ತುತ ದಿನಗಳಲ್ಲಿ ಮಾನವ ಯಾವ ರೀತಿ  ಪರಿಸರವನ್ನು ಹೊಲಸು ಮಾಡುತ್ತಿದ್ದಾನೆ, ನೈಸರ್ಗಿಕ ಸಂಪತ್ತನ್ನು ಹಾಳು ಮಾಡುತ್ತಿದ್ದಾನೆ, ಅವುಗಳನ್ನು ರಕ್ಷಿಸುವುದು ಹೇಗೆ ಎನ್ನುವ ಸಂದೇಶ ಇತ್ತು.
 
‘ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡುತ್ತಿದ್ದರೂ ಜನರು ನಿಷ್ಕಾಳಜಿ ತೋರುತ್ತಿರುವುದು ಸಲ್ಲ. ಗಾಂಧಿಯ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ನಾಟಕದ ಮೂಲಕ ವಿದ್ಯಾರ್ಥಿಗಳು ಮನವಿ ಮಾಡಿದರು.
 
ನಾಟಕ ಶಿಕ್ಷಕ ಹಾಗೂ ನಿರ್ದೇಶಕ ಅಶೋಕ ತೊಟ್ನಳ್ಳಿ ನಾಟಕದ ಪರಿಚಯ ಮಾಡಿದರು. ನಿವೃತ್ತ ಶಿಕ್ಷಣ ಸಂಯೋಜಕ ವಿಠ್ಠಲ ಬರಮಕರ್, ವೀರಸಂಗಪ್ಪ ತಡಕಲ್, ಮುರಿಗೆಣ್ಣ ಕೋಳ್ಕೂರ, ಶ್ರೀಶೈಲ ಬಿರಾದಾರ ಇದ್ದರು. ಶ್ರೀಶೈಲ ರುದ್ನೂರು ಸ್ವಾಗತಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.