ADVERTISEMENT

‘ಹೆಮ್ಮೆ ಇರಲಿ ಅಹಂ ಬೇಡ’

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 5:50 IST
Last Updated 11 ಜನವರಿ 2017, 5:50 IST

ಕಲಬುರ್ಗಿ: ವಿದ್ಯಾರ್ಥಿಗಳು ಜೀವನದಲ್ಲಿ ತಾವು ಮಾಡಿದ ಸಾಧನೆ ಬಗ್ಗೆ ಹೆಮ್ಮೆ ಪಡಬೇಕು. ಆದರೆ ಅಹಂ ಇರಬಾರದು ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ಜಗನ್ನಾಥ ರಾವ್ ಹೇಳಿದರು.

ನಗರದ ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾ ವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಎರಡು ದಿನಗಳ ಕಾರ್ಯಗಾರದಲ್ಲಿ ಮಾತನಾಡಿದರು.

ವ್ಯಕ್ತಿಗತ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಇಂದಿನ ವಿದ್ಯಾರ್ಥಿಗಳ ತುರ್ತು ಅಗತ್ಯವಾಗಿದೆ. ಅದಕ್ಕಾಗಿ ನಿರಂತರ ಓದು, ಬರಹ, ಸಾಮಾಜಿಕ ಚಟುವಟಿಕೆಗಳಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.

ತಂದೆ ತಾಯಿಗಳ, ವಿದ್ಯೆ ಕಲಿಸಿದ ಗುರುಗಳ ಹಾಗೂ ಅವಕಾಶ ಕೊಟ್ಟ ಸಮಾಜದ ಋಣವನ್ನು ಯಾವತ್ತು ಮರೆಯಬಾರದು. ಏಕೆಂದರೆ ನಮ್ಮೆಲ್ಲರ ಅಸ್ತಿತ್ವದ ಕುರುಹು ಇರುವುದು ಅವರಲ್ಲಿಯೆ. ಹೀಗಾಗಿ ನಮ್ಮ ಮೇಲೆ ಬಹು ದೊಡ್ಡ ಜವಾಬ್ದಾರಿ ಇದ್ದು ಅದನ್ನು ಯಾವ ರೂಪದಲ್ಲಿಯಾದರೂ ಸಮಾಜಕ್ಕೆ ಕೊಡುವ ಮೂಲಕ ಅವರಿಗೆ ಚಿಕ್ಕದೊಂದು ಗೌರವ ಸಲ್ಲಿಸಬೇಕು. ಇದನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅರ್ಥಮಾಡಿಕೊಳ್ಳಬೇಕು ಎಂದರು.

ವಿದ್ಯಾರ್ಥಿ ಸಮೂಹ ಎಂತಹ ಸಂದರ್ಭ ಬಂದರೂ ತಾಳ್ಮೆ ಕಳೆದುಕೊಳ್ಳಬಾರದು. ತಾಳ್ಮೆಯು ಸಹನಶಕ್ತಿ, ಔದಾರ್ಯದಂತಹ ಮಹೋನ್ನತ ಗುಣಗಳನ್ನು ಬೆಳೆಸುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ತಾವು ಮಾಡಿರುವ ಕೋರ್ಸ್ ಮತ್ತು ಈಗಿರುವ ಪರಿಸ್ಥಿತಿ ಬಗ್ಗೆ ಕೀಳರಿಮೆ ಇಟ್ಟುಕೊಳ್ಳಬಾರದು. ಅದು ನಮ್ಮೊಳಗಿನ ಅಂತಃಶಕ್ತಿಯನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿ ಇನ್ನೊಬ್ಬರಿಗಿಂತ ಭಿನ್ನವಾಗಿ ಆಲೋಚಿಸಲು, ಕ್ರಿಯೆ ಮಾಡಲು ಸಿದ್ಧರಾಗಿ. ಅದಕ್ಕೆ ತಕ್ಕಂತೆ ಕಠಿಣ ಪರಿಶ್ರಮ ಪಟ್ಟು ಜೀವನದಲ್ಲಿ ಮುಂದೆ ಬರಲು ಪ್ರಯತ್ನಿಸಬೇಕು ಎಂದು ನುಡಿದರು.

ವಿದ್ಯಾರ್ಥಿನಿ ಸೌಮ್ಯ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಸಂಯೋಜಕಿ ಡಾ. ಇಂದಿರಾ ಶೆಟಕಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಪ್ರೊ.ಶಾಂತಲಾ ನಿಷ್ಟಿ ಅಧ್ಯಕ್ಷತೆ ವಹಿಸಿದ್ದರು. ಕಲಾವಾಣಿ ಬಳಗದ ಸಂಯೋಜಕ ಪ್ರೊ. ಎನ್.ಎಸ್. ಹೂಗಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.