ADVERTISEMENT

371(ಜೆ)ಸಮರ್ಪಕ ಅನುಷ್ಠಾನಕ್ಕೆ ಕೈಜೋಡಿಸಿ’

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 7:23 IST
Last Updated 18 ಸೆಪ್ಟೆಂಬರ್ 2017, 7:23 IST

ಕಲಬುರ್ಗಿ: ‘ಹಿಂದುಳಿದ ಭಾಗಕ್ಕೆ ಸಾಂವಿಧಾನಿಕವಾಗಿ ದೊರೆತಿರುವ 371(ಜೆ) ಕಲಂ ಸಮರ್ಪಕ ಅನುಷ್ಠಾನಕ್ಕೆ ಎಲ್ಲ ಪಕ್ಷಗಳ ಮುಖಂಡರು ಕೈಜೋಡಿಸಬೇಕು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಇಲ್ಲಿನ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಭಾನುವಾರ ನಡೆದ ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘371(ಜೆ) ಸಮರ್ಪಕವಾಗಿ ಅನುಷ್ಠಾನ ಆಗಿಲ್ಲ. ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸರ್ಕಾರ ಹಣ ನೀಡುತ್ತಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಧೋರಣೆ ಸರಿಯಲ್ಲ. ಎಲ್ಲ ಪಕ್ಷಗಳ ಜನಪ್ರತಿನಿಧಿಗಳು, ಹೋರಾಟಗಾರರು, ಸಂಘಟನೆಗಳು ಒಟ್ಟಾಗಿ 371(ಜೆ) ಅನುಷ್ಠಾನಕ್ಕೆ ಶ್ರಮಿಸಬೇಕು. ಸಲಹೆ, ಸೂಚನೆಗಳಿದ್ದರೆ ಖುದ್ದಾಗಿ ಭೇಟಿಯಾಗಿ ತಿಳಿಸಬಹುದು’ ಎಂದರು.

ADVERTISEMENT

‘317(ಜೆ) ಅನುಷ್ಠಾನಗೊಂಡ ನಂತರ ಈ ಭಾಗದವರಿಗೆ ಸಾಕಷ್ಟು ಅನುಕೂಲಗಳಾಗಿವೆ. 700 ವೈದ್ಯಕೀಯ, 6,000 ಎಂಜಿನಿಯರಿಂಗ್‌ ಸೀಟುಗಳು ಇಲ್ಲಿನವರಿಗೆ ದೊರೆತಿವೆ’ ಎಂದು ಮಾಹಿತಿ ನೀಡಿದರು.

‘ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಹಿಂದಿನ ಸರ್ಕಾರಗಳು ಕೇವಲ ₹40– ₹50 ಕೋಟಿ ನೀಡುತ್ತಿದ್ದವು. ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಪ್ರತಿ ವರ್ಷ ₹500 ಕೋಟಿ ನೀಡಿತು. ಈ ವರ್ಷ ₹1,500 ಕೋಟಿ ನೀಡಲಾಗಿದೆ. ಈ ಹಣದಲ್ಲಿ ಭಾಗದ ಶೇ 80ರಷ್ಟು ಗ್ರಾಮೀಣ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗುವುದು.

ತಾಂಡಾಗಳಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದರು. ‘ಜಿಲ್ಲಾಸ್ಪತ್ರೆಯಲ್ಲಿ ಜಯದೇವ ಆಸ್ಪತ್ರೆಯಲ್ಲಿ ಘಟಕ ಆರಂಭವಾಗಿದೆ. ಡಿಸೆಂಬರ್‌ ಅಂತ್ಯದೊಳಗೆ ಟ್ರಾಮಾ ಸೆಂಟರ್‌ ಕಾರ್ಯಾರಂಭ ಮಾಡಲಿದೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಆಗುತ್ತಿದೆ. ಕಳೆದ 30 ವರ್ಷಗಳಲ್ಲಿ ಈ ಭಾಗ ಸಾಕಷ್ಟು ಪ್ರಗತಿಯಾಗಿದೆ’ ಎಂದರು.

ಮೇಯರ್‌ ಶರಣಕುಮಾರ್‌ ಮೋದಿ, ಶಾಸಕ ಅಮರನಾಥ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ,ಸಿಇಒ ಹೆಪ್ಸಿಬಾರಾಣಿ ಕೊರ್ಲಪಾಟಿ, ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಮುಖಂಡ ಶಶೀಲ್‌ ನಮೋಶಿ, ಪ್ರಾದೇಶಿಕ ಆಯುಕ್ತ ಹರ್ಷಗುಪ್ತ, ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್‌, ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್, ಎಸ್ಪಿ ಎನ್‌.ಶಶಿಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಪಿ.ಸುನೀಲ್‌ಕುಮಾರ್‌, ಸಾಹಿತಿ ವಸಂತ ಕುಷ್ಟಗಿ, ಲಕ್ಷ್ಮಣ ದಸ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.