ADVERTISEMENT

ವಿವಿಧ ಬೇಡಿಕೆ: ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 8:43 IST
Last Updated 23 ಜನವರಿ 2018, 8:43 IST

ಕಲಬುರ್ಗಿ: ಬಿಸಿಎಂ ವಸತಿ ನಿಲಯಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಅಲ್ಲಿನ ವಿದ್ಯಾರ್ಥಿಗಳು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೋಮವಾರ ಘೋಷಣೆ ಕೂಗಿದರು.

ನೀರಿನ ಸಮಸ್ಯೆ ಬಗೆಹರಿಸಬೇಕು. ಶೌಚಾಲಯ, ಸ್ನಾನದ ಕೋಣೆಯ ಬಾಗಿಲು, ಕಿಟಕಿಗಳನ್ನು ದುರಸ್ತಿ ಪಡಿಸಬೇಕು. ಗ್ರಂಥಾಲಯಕ್ಕೆ ಪುಸ್ತಕ, ಕ್ರೀಡಾ ಸಾಮಗ್ರಿಗಳನ್ನು ಒದಗಿಸಬೇಕು ಮತ್ತು ಬಿಸಿ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಗುರುನಾಥ ರೆಡ್ಡಿ, ಗುರುರಾಜ ಆಲ್ದಾಳ, ಪರಮಣ್ಣ ಕಕ್ಕೇರಾ, ಭೀಮೇಶ, ಅಂಬಾದಾಸ, ಮಲ್ಲಿಕಾರ್ಜುನ ಇದ್ದರು.

ಪೌರ ಕಾರ್ಮಿಕರ ಕಾಯಂಗೆ ಒತ್ತಾಯ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಶ್ರಮಜೀವಿಗಳ ವೇದಿಕೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಮಾಡಲಾಯಿತು.

ADVERTISEMENT

ಗುತ್ತಿಗೆ ಪದ್ಧತಿಯಿಂದ ಪೌರ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ. ಬೆಂಗಳೂರು, ಮೈಸೂರಿನಲ್ಲಿ ಗುತ್ತಿಗೆ ಪೌರ ಕಾರ್ಮಿಕರನ್ನು ಈಗಾಗಲೇ ಕಾಯಂಗೊಳಿಸಲಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಮುತ್ತಣ್ಣ ಭಂಡಾರಿ, ಸಂತೋಷ ಚಲವಾದಿ, ಗುರುಲಿಂಗಪ್ಪ ಸೋಲೆಕಾರ, ಲಕ್ಷ್ಮಣ ದೊಡ್ಡಮನಿ, ಉಮೇಶ ದೊಡ್ಡಮನಿ ಇದ್ದರು.

ಮದ್ಯದಂಗಡಿ ಸ್ಥಳಾಂತರಕ್ಕೆ ಆಗ್ರಹ: ನಗರದ ರಾಮಮಂದಿರ ಎದುರುಗಡೆ ಇರುವ ವಿನಾಯಕ ಮದ್ಯದಂಗಡಿ ಹಾಗೂ ಪಾಲಿಕೆಯ ಟೌನ್ ಹಾಲ್ ಮುಂಭಾಗದ ಅಪ್ನಾ ಬಾರ್ ಸ್ಥಳಾಂತರಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಮದ್ಯದಂಗಡಿ ಮತ್ತು ಬಾರ್ ಸ್ಥಳಾಂತರಕ್ಕೆ ಒತ್ತಾಯಿಸಿ ಅನೇಕ ಬಾರಿ ಪ್ರತಿಭಟನೆ ಮಾಡಲಾಗಿದೆ. ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗಿದೆ. ಆದಾಗ್ಯೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಈಗಲಾದರೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶ್ರೀರಾಮ ಸೇನೆ ಗೌರವ ಅಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿ, ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ಮೃತ್ಯುಂಜಯ, ಮಧುಕರ ನಾಯಕ್, ಸಂತೋಷ, ಮಲ್ಲಿಕಾರ್ಜುನ ಸಾರವಾಡ, ಪ್ರಹ್ಲಾದ ಮಠವಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.