ADVERTISEMENT

ನಾನು ಅಪ್ಪಟ ಬಂಗಾರ: ರೇವು ನಾಯಕ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 9:19 IST
Last Updated 24 ಜನವರಿ 2018, 9:19 IST

ಕಮಲಾಪುರ: ‘ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಜನರಿಗೆ ನಾನು ಒರೆ ಹಚ್ಚಲಾರದ ಶುದ್ಧ ಬಂಗಾರದಂತಿದ್ದೇನೆ’ ಎಂದು ಮಾಜಿ ಸಚಿವ ರೇವು ನಾಯಕ ಬೆಳಮಗಿ ತಿಳಿಸಿದರು.

ಸಮೀಪದ ಮರಗುತ್ತಿ ಕ್ರಾಸ್‌ನಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ಎಸ್‌4 ಸೋಷಿಯಲ್‌ ವೆಲ್ಫೇರ್‌ ಅಸೋಸಿಯೇಷನ್‌ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ಗ್ರಾಮೀಣ ಕ್ರೀಡಾ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ನಡೆಯಲಾರದ ನಾಣ್ಯ ಎಂದಿದ್ದಕ್ಕೆ ಕೆಲವು ರಾಜಕೀಯ ವೈರಿಗಳು ಬೇರೆ ಅರ್ಥ ಕಲ್ಪಿಸಿದ್ದಾರೆ. ಅಧಿಕಾರ ಇಲ್ಲದಾಗ ಎಲ್ಲರೂ ನಡೆಯಲಾರದ ನಾಣ್ಯಗಳೆ. ಆದರೆ, ನಾನು ಅಧಿಕಾರ ಕಳೆದುಕೊಂಡರೂ ಜನರಿಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಕ್ಕೂ ನನ್ನನ್ನು ಆಹ್ವಾನಿಸುತ್ತಾರೆ. ಆ ಮೂಲಕ ಜನ ನನ್ನನ್ನು ಇಂದು ಸಹ ಚಲಾವಣೆಯಲ್ಲಿ ಇಟ್ಟಿದ್ದಾರೆ. ಇದು ನನ್ನ ರಾಜಕೀಯ ವೈರಿಗಳಿಗೆ ಸಹಿಸಲು ಆಗುತ್ತಿಲ್ಲ’ ಎಂದು ಅವರು ಕಿಚಾಯಿಸಿದರು.

ADVERTISEMENT

‘ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ನೀಡಿದ ಕೊಡುಗೆ ಜನರಿಗೆ ಗೊತ್ತಿದೆ. ಬಡವರ ಪರ, ರೈತ ಪರ ಅನೇಕ ಕಾರ್ಯ ಮಾಡಿದ್ದೇನೆ’ ಎಂದು ಹೇಳಿದರು. ನಂತರ ಹಗ್ಗ ಜಗ್ಗಾಟದ ಮೂಲಕ ಕ್ರೀಡಾ ಉತ್ಸವಕ್ಕೆ ಚಾಲನೆ ನೀಡಿದರು.

ಬಿಜೆಪಿ ಮುಖಂಡ, ಸೇವಾಲಾಲ್ ಉತ್ಸವ ಸಮಿತಿ ಅಧ್ಯಕ್ಷ ಸುರೇಶ ರಾಠೋಡ್‌, ಕಾಂಗ್ರೆಸ್‌ ಮುಖಂಡ ಬಾಬು ಚೌವಾಣ್‌, ಎಸ್‌4 ಸೋಷಿಯಲ್‌ ವೆಲ್ಫೇರ್‌ ಅಸೋಸಿಯೇಷನ್‌ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಎಸ್‌.ತಾವಡೆ, ಪ್ರಕಾಶ ಪಾಟೀಲ, ಗ್ರಾ.ಪಂ ಅಧ್ಯಕ್ಷ ನವರಂಗ ಜಾಧವ, ಅಬ್ದುಲ್‌ ಸತ್ತಾರ, ಸದಸ್ಯ ಮಕ್ಬುಲ್‌ ಖಾಜಿ, ತಯ್ಯಬ್‌ ಚೌದ್ರಿ, ಪ್ರಶಾಂತ ಮಾನಕಾರ, ಸೋಮಶೇಖರ ರಾಠೋಡ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.