ADVERTISEMENT

ರಾಜ್ಯದಲ್ಲಿ ಸಮಾನ ಶಿಕ್ಷಣ ಕಡ್ಡಾಯವಾಗಲಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 9:20 IST
Last Updated 24 ಜನವರಿ 2018, 9:20 IST

ಆಳಂದ: ‘ಶ್ರೀಮಂತರ ಮಕ್ಕಳಿಗೆ ಒಂದು ಶಿಕ್ಷಣ, ಬಡ ಮಕ್ಕಳಿಗೆ ಇನ್ನೊಂದು ಶಿಕ್ಷಣ ದೊರೆಯುವ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಸರ್ಕಾರ ಪ್ರಾಥಮಿಕ ಹಂತದವರೆಗೆ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿ ಸಮಾನ ಶಿಕ್ಷಣ ನೀಡಬೇಕು’ ಎಂದು ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಎಚ್.ಎನ್.ದೀಪಕ ಒತ್ತಾಯಿಸಿದರು.

ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಭಾನುವಾರ ಜಯ ಕರ್ನಾಟಕ ಸಂಘಟನೆಯಿಂದ ಏರ್ಪಡಿಸಿದ್ದ ‘ಗಡಿನಾಡು ಕನ್ನಡ ಉತ್ಸವ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ತಮಿಳು, ಮರಾಠಿ, ಬಂಗಾಳಿ, ಮಲಯಾಳಿ ಭಾಷಿಕರಲ್ಲಿ ಇರುವ ಭಾಷಾ ಅಭಿಮಾನ ನಮ್ಮ ಪಾಲಕರಲ್ಲಿ ಬರಬೇಕು. ನಮ್ಮ ಸರ್ಕಾರ ನಾಡು ನುಡಿ, ಜಲ, ನೆಲದ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕನ್ನಡಪರ ಹೋರಾಡುವ ಕಾರ್ಯಕರ್ತರ ಮೇಲೆ ಪೊಲೀಸರ ಮೂಲಕ ಅನಗತ್ಯ ಪ್ರಕರಣ ದಾಖಲಿಸುವುದನ್ನು ನಿಲ್ಲಿಸಬೇಕು’ ಎಂದರು.

ADVERTISEMENT

ಮಾದನ ಹಿಪ್ಪರಗಾದ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ‘ಕನ್ನಡದ ಸಂಸ್ಕೃತಿ, ಪರಂಪರೆಯು ಶ್ರೀಮಂತವಾಗಿದೆ. ಇಲ್ಲಿಯ ಕಲೆ, ಸಾಹಿತ್ಯ, ಸಂಗೀತದ ಬಗೆಗೆ ನಮ್ಮಲ್ಲಿ ಅಭಿಮಾನ ಬೆಳೆದು ಅದನ್ನು ಬೆಳೆಸಲು ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಹೇಳಿದರು.

ಸಂಘಟನೆ ತಾಲ್ಲೂಕು ಅಧ್ಯಕ್ಷ ಬಸವರಾಜ ಕೊರಳ್ಳಿ ಮಾತನಾಡಿ, ‘ಜಯ ಸಂಘಟನೆಯು ತಾಲ್ಲೂಕಿನಲ್ಲಿ ನೂರು ಗ್ರಾಮ ಘಟಕಗಳನ್ನು ಸ್ಥಾಪಿಸಿದೆ. ಸ್ಥಳೀಯ ರೈತರ, ವಿದ್ಯಾರ್ಥಿಗಳ ಸಮಸ್ಯೆಗೆ ಧ್ವನಿಯಾಗಿ ಹೋರಾಟ ಮಾಡುತ್ತಿದೆ. ಇಲ್ಲಿಯ ಜನರ ಸೇವೆಗೆ ನಮ್ಮ ಕಾರ್ಯಕರ್ತರು ಸದಾ ಸಿದ್ಧ’ ಎಂದರು.

ಹಿರೇಮಠನ ಸಿದ್ದೇಶ್ವರ ಸ್ವಾಮೀಜಿ, ಕಿಣಿಸುಲ್ತಾನನ ಶಿವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ರಾಜ್ಯ ಉಪಾಧ್ಯಕ್ಷ ಅಣ್ಣಪ್ಪ ಓಲೇಕಾರ, ಕಾರ್ಯದರ್ಶಿ ಸುದೀಪಕುಮಾರ, ನವೀನ ಬತಲಿ, ಸಿಪಿಐ ಎಚ್.ಬಿ.ಸಣ್ಣಮನಿ, ಪಿಎಸ್ಐ ಸುರೇಶಬಾಬು, ಅರುಣಕುಮಾರ ಸಿ.ಪಾಟೀಲ, ಆರ್.ಡಿ.ಬಾಬು, ಶ್ರೀಶೈಲ ಸಿರವಾರ, ಗಣೇಶ ಫುಲಾರೆ, ವಿನೋದ ಪಾಟೀಲ, ಗುರು ಬಂಗರಗಿ, ಸಾಗರ ಪಾಟೀಲ, ಶರಣು ಪಾಟೀಲ, ವಿನಾಯಕ ಕಾಲೇಕಾರ, ಕುಮಾರ ಬಂಡೆ, ಮಹಾಲಿಂಗಪ್ಪ ಪಟ್ಟಣಶೆಟ್ಟಿ, ಅಮರ ಪುರಾಣೆ ಇದ್ದರು.

ಬೈಕ್‌ ರ್‍ಯಾಲಿ: ಸಭೆಗೂ ಮುನ್ನ ಲಾಡ ಚಿಂಚೋಳಿ ಕ್ರಾಸ್‌ ಮೂಲಕ ಶ್ರೀರಾಮ ಮಾರುಕಟ್ಟೆವರೆಗೂ ಅದ್ಧೂರಿ ಬೈಕ್ ರ್‍ಯಾಲಿ ನಡೆಯಿತು.

ಕಲಾವಿದರಾದ ಜ್ಯೂ.ಉಪೇಂದ್ರ, ಜ್ಯೂ.ಯಶ್‌ ಅವರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿನ ಗಾಯನ, ಮಿಮಿಕ್ರಿ, ಕುಣಿತ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ವಿವಿಧ ಗಣ್ಯರನ್ನು, ಸಂಘಟನೆ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.