ADVERTISEMENT

ಚಿತ್ತಾಪುರ: ವಿದ್ಯಾರ್ಥಿಗಳ ಶೌಚಕ್ಕೆ ಬಯಲೇ ಗತಿ

ವಸತಿ ನಿಲಯದಲ್ಲಿ ಅಗತ್ಯ ಮೂಲ ಸೌಲಭ್ಯ ಕೊರತೆ

ಮಲ್ಲಿಕಾರ್ಜುನ ಎಚ್.ಮುಡಬೂಳಕರ್
Published 9 ಆಗಸ್ಟ್ 2023, 6:32 IST
Last Updated 9 ಆಗಸ್ಟ್ 2023, 6:32 IST
ಚಿತ್ತಾಪುರ ಪಟ್ಟಣದ ನಾಗಾವಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದ ಶೌಚಾಲಯ ಕಟ್ಟಡ  ಹಾಳಾಗಿರುವುದು
ಚಿತ್ತಾಪುರ ಪಟ್ಟಣದ ನಾಗಾವಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದ ಶೌಚಾಲಯ ಕಟ್ಟಡ  ಹಾಳಾಗಿರುವುದು   

ಚಿತ್ತಾಪುರ: ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದೆ.

ಪಟ್ಟಣದ ನಾಗಾವಿಯಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಸೌಲಭ್ಯವಿಲ್ಲ. ಪಠ್ಯೇತರ ಚಟುವಟಿಕೆಗೆ ಕ್ರೀಡಾ ಮೈದಾನಗಳಿಲ್ಲ. ಶುದ್ಧ ಕುಡಿಯುವ ನೀರಿಲ್ಲ. ಹಾಸಿಕೊಳ್ಳಲು ಬೆಡ್ ಶೀಟ್ ಇಲ್ಲ. ಶೌಚಾಲಯಕ್ಕೆ ಒಳಚರಂಡಿ ವ್ಯವಸ್ಥೆ ಸಮರ್ಕಪವಾಗಿಲ್ಲದ ಕಾರಣ ಬಳಸುತ್ತಿಲ್ಲ. ವಿದ್ಯಾರ್ಥಿಗಳು ಶೌಚಕ್ಕೆ ವಸತಿ ನಿಲಯದ ಸುತ್ತಲಿನ ಬಯಲನ್ನೇ ಅವಲಂಬಿಸಿದ್ದಾರೆ.

ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಶುದ್ಧ ಕುಡಿಯುವ ನೀರಿನ ಆರ್.ಒ. ದುರಸ್ತಿಗಾಗಿ ಕಾಯುತ್ತಿದೆ. ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಬಿಸಿ ನೀರಿನ ಗೀಜರ್ ದುರಸ್ತಿ ಕಾಣದೆ ಹಾಳು ಬಿದ್ದಿವೆ. ಮೂರು ವರ್ಷಗಳಿಂದ ಬೆಡ್ ಶೀಟ್ ಪೂರೈಕೆಯಾಗಿಲ್ಲ. ಹೊಸ ಮಂಚ ಬಂದರೂ ವಿದ್ಯಾರ್ಥಿಗಳಿಗೆ ನೀಡಿಲ್ಲ. ಮಲಿನವಾದ ಬೆಡ್ಡಿನ ಮೇಲೆ ವಿದ್ಯಾರ್ಥಿಗಳು ನಿದ್ದೆ ಮಾಡುವ ಅನಿವಾರ್ಯತೆಯಿದೆ. ಸೊಳ್ಳೆ ಪರದೆಯಿಲ್ಲದೆ ವಿದ್ಯಾರ್ಥಿಗಳು ಸರಿಯಾಗಿ ನಿದ್ರೆ ಮಾಡಲಾಗದ ಪರಿಸ್ಥಿತಿಯಿದೆ.

ADVERTISEMENT

ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಅಧೀನದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಶೌಚಾಲಯ, ಸ್ನಾನದ ಕೋಣೆಗಳ ಬಾಗಿಲು ಕಿತ್ತುಹೋಗಿವೆ. ಕಿಟಕಿಗಳ ಗಾಜು ಒಡೆದಿವೆ. ಬೆಡ್ ಹಳೆಯದಾಗಿವೆ ಮತ್ತು ಬೆಡ್ ಶೀಟ್‌ ನೀಡಿಲ್ಲ. ಹೊಸ ಮಂಚಗಳು ಬಂದರೂ ಕೋಣೆಗಳಲ್ಲಿ ಅಳವಡಿಸಿಲ್ಲ. ವಿದ್ಯಾರ್ಥಿಗಳು ನೆಲದಲ್ಲಿ ಹರಿದ ಬೆಡ್ ಹಾಸಿಕೊಂಡು ಮಲಗುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಯಂತ್ರ ಕೆಟ್ಟಿದ್ದು, ದುರಸ್ತಿ ಮಾಡಿಸದೇ ಹೊರಗಿನಿಂದ ನೀರು ತರಿಸಲಾಗುತ್ತಿದೆ. ಊಟ ಮಾಡಲು ಆಸನಗಳ ವ್ಯವಸ್ಥೆ ಇಲ್ಲದೆ ನೆಲದಲ್ಲಿ ಕುಳಿತು ಊಟ ಮಾಡುವ ಸ್ಥಿತಿಯಿದೆ.

ಸಮಾಜ ಕಲ್ಯಾಣ ಇಲಾಖೆಯಡಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ-11, ಬಾಲಕಿಯರ-3 ಹೀಗೆ ಒಟ್ಟು 14 ವಸತಿ ನಿಲಯಗಳಿವೆ. ಮೆಟ್ರಿಕ್ ನಂತರ ಬಾಲಕರ-1, ಬಾಲಕಿಯರ-1, ಒಟ್ಟು 2 ವಸತಿ ನಿಲಯಗಳಿವೆ. ಒಂದು ಆಶ್ರಮ ಶಾಲೆಯಿದೆ. 16 ವಸತಿ ನಿಲಯಗಳಿಗೆ ಸ್ವಂತ ಕಟ್ಟಡವಿದ್ದು, ಒಂದು ವಸತಿ ನಿಲಯ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. 5 ವಸತಿ ನಿಲಯಗಳ ವಾರ್ಡನ್ ಹುದ್ದೆ ಖಾಲಿಯಿವೆ ಎಂದು ತಿಳಿದು ಬಂದಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಒಟ್ಟು 18 ವಸತಿ ನಿಲಯಗಳಿವೆ. ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ-12, ಮೆಟ್ರಿಕ್ ನಂತರದ ಬಾಲಕರ-6 ವಸತಿ ನಿಲಯಗಳಿವೆ. ಅವುಗಳ ಪೈಕಿ ಬಾಲಕಿಯರ-2 (ಚಿತ್ತಾಪುರ-ವಾಡಿ) ವಸತಿ ನಿಲಯಗಳಿವೆ. 12 ವಸತಿ ನಿಲಯಗಳಿಗೆ ಸ್ವಂತ ಕಟ್ಟಡಗಳಿವೆ. ವಾಡಿ, ನಿಪ್ಪಾಣಿ, ರೇವಗ್ಗಿ, ಕಾಳಗಿ, ಹೆಬ್ಬಾಳ, ನಾಲವಾರ ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿವೆ.

18 ವಸತಿ ನಿಲಯಗಳ ಪೈಕಿ 12 ವಸತಿ ನಿಲಯಗಳಿಗೆ ವಾರ್ಡನ್ ಹುದ್ದೆ ಭರ್ತಿಯಿವೆ. ಕಾಳಗಿ, ನಾಲವಾರ, ಚಿತ್ತಾಪುರ, ಭೀಮನಹಳ್ಳಿ, ಅಳ್ಳೊಳ್ಳಿ ಹೀಗೆ ಒಟ್ಟು 5 ವಸತಿ ನಿಲಯಗಳ ವಾರ್ಡನ್ ಹುದ್ದೆಗಳು ಖಾಲಿ ಇವೆ. ಕೆಲವು ವಾರ್ಡನ್‌ಗಳಿಗೆ ಬೇರೆ ಬೇರೆ ವಸತಿ ನಿಲಯಗಳ ಹೆಚ್ಚುವರಿ ಪ್ರಭಾರ ವಹಿಸಲಾಗಿದೆ.

ಚಿತ್ತಾಪುರ ಪಟ್ಟಣದಲ್ಲಿರುವ ವಸತಿ ನಿಲಯಗಳ ಸ್ಥಿತಿ ಹೀಗಿರುವಾಗ ಗ್ರಾಮೀಣ ಭಾಗದ ವಸತಿ ನಿಲಯಗಳ ಕಥೆ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳ ಪಾಲಕರು ಬೇಸರ ವ್ಯಕ್ತಪಡಿಸುತ್ತಾರೆ.

ಚಿತ್ತಾಪುರ ಪಟ್ಟಣದ ನಾಗಾವಿಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಿಲ್ಲದ ನಿರುಪಯುಕ್ತವಾಗಿರುವ ಶೌಚಾಲಯ
ಚಿತ್ತಾಪುರ ಪಟ್ಟಣದ ನಾಗಾವಿಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಬೆಡ್ ಶೀಟ್‌ ನೀಡಿಲ್ಲ
ಕಾಳಗಿ ತಾಲ್ಲೂಕಿನ ಮಂಗಲಗಿ ಗ್ರಾಮದ ವಸತಿ ನಿಲಯ ಕಡಬೂರ ಗ್ರಾಮಕ್ಕೆ ಸ್ಥಳಾಂತರಿಸಲು ಆದೇಶವಾಗಿದೆ. ಶೀಘ್ರ ಸ್ಥಳಾಂತರ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಸೌಲಭ್ಯದ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತದೆ
ಶಿವಶರಣಪ್ಪ ವಾಗ್ಮೋರೆ ಹಿಂದುಳಿದ ವರ್ಗಗಳ ಅಧಿಕಾರಿ ಚಿತ್ತಾಪುರ
ಪಟ್ಟಣದಲ್ಲಿನ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಶೀಘ್ರ ಮಾಡುತ್ತೇವೆ. ಓದುವ ಸಲುವಾಗಿ ತಾತ್ಕಾಲಿಕ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ
ಚೇತನ್ ಗುರಿಕಾರ ಸಮಾಜ ಕಲ್ಯಾಣಾಧಿಕಾರಿ ಚಿತ್ತಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.