ADVERTISEMENT

ಕಲಬುರಗಿ: ಅಪಾಯಕ್ಕೆ ಆಹ್ವಾನಿಸುವ ಒಳಚರಂಡಿ ಹೊಂಡಗಳು

ಸಿಸಿ, ಡಾಂಬರು ರಸ್ತೆಗಳ ಮಧ್ಯದಲ್ಲಿಯೇ ಅಪಾಯ

ಅವಿನಾಶ ಬೋರಂಚಿ
Published 13 ಜೂನ್ 2023, 23:30 IST
Last Updated 13 ಜೂನ್ 2023, 23:30 IST
ಸೇಡಂ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಒಳಚರಂಡಿಯ ತೆರೆದ ಹೊಂಡಗಳು
ಸೇಡಂ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಒಳಚರಂಡಿಯ ತೆರೆದ ಹೊಂಡಗಳು   

ಸೇಡಂ:ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಒಳಚರಂಡಿ ಕಾಮಗಾರಿಯ ತೆರೆದ ಹೊಂಡಗಳು ಅಪಾಯಕ್ಕೆ ಆಹ್ವಾನಿಸುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಪಟ್ಟಣದ ಗಣೇಶ ನಗರ, ಶಾಸ್ತ್ರಿ ನಗರ, ಆಶ್ರಯ ಕಾಲೊನಿ, ಊಡಗಿ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸುಮಾರು 40ಕ್ಕೂ ಅಧಿಕ ಒಳಚರಂಡಿಯ ತೆರೆದ ಹೊಂಡಗಳು ತೆರೆದಿರುವುದು ಕಂಡು ಬರುತ್ತಿವೆ. ಇದರಿಂದ ಸಾರ್ವಜನಿಕರು ಆತಂಕದಿಂದ ಸಂಚರಿಸುತ್ತಿದ್ದಾರೆ. ಸಿಸಿ ಮತ್ತು ಡಾಂಬರು ರಸ್ತೆಗಳ ಮಧ್ಯದಲ್ಲಿಯೇ ಒಳಚರಂಡಿಯ ಹೊಂಡ ಇರುವುದರಿಂದ ಬೈಕ್ ಸವಾರರು, ಕಾರು ಚಾಲಕರು, ಮಕ್ಕಳು ಮತ್ತು ಮಹಿಳೆಯರು ಎಚ್ಚರಿಕೆಯಿಂದ ಸಂಚರಿಸುವ ಅನಿವಾರ್ಯತೆ ಇದೆ.  ರಾತ್ರಿಯ ವೇಳೆಯಲ್ಲಿ ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದುಂಟು. ಚಿಕ್ಕ ಮಕ್ಕಳು ತೆರಳಿದರಂತೂ ಒಳಚರಂಡಿ ಒಳಗೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಿದೆ’ ಎನ್ನುತ್ತಾರೆ ಗಣೇಶ ನಗರ ನಿವಾಸಿ ಬಸವರಾಜ.

‘ಒಳಚರಂಡಿ ಕಾಮಗಾರಿಯ ಹೊಂಡಗಳ ಮುಚ್ಚಳವನ್ನು ತೆಗೆದಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ದುರಸ್ತಿಗೊಳಿಸಿ ಎಂದು ಪುರಸಭೆ ಮತ್ತು ಒಳಚರಂಡಿ ಮಂಡಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ’ ಎಂದು ಮುಖಂಡ ಗೋಪಾಲ ರಾಠೋಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಸೇಡಂ ಪಟ್ಟಣದಲ್ಲಿ 2017-18ರಲ್ಲಿಯೇ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಇದಾದ ನಂತರ ಭೂ ಸೇನಾ, ಪುರಸಭೆ ಸೇರಿದಂತೆ ವಿವಿಧ ಇಲಾಖೆಗಳಿಂದ ರಸ್ತೆ ಅಭಿವೃದ್ಧಿ ಕೆಲಸಗಳು ನಡೆದಿವೆ. ಅಂತಹ ಸಂದರ್ಭದಲ್ಲಿ ಒಳಚರಂಡಿಯ ಫ್ರೇಮ್ ಮತ್ತು ಕವರ್ ಚೆನ್ನಾಗಿ ಅಳವಡಿಕೆಯಾಗಿಲ್ಲ. ಕೆಲವು ಕಡೆಗಳಲ್ಲಿ ಒಳಚರಂಡಿ ಮತ್ತು ರಸ್ತೆಯ ಎತ್ತರ ಪ್ರಮಾಣ ಹೊಂದಾಣಿಕೆ ಆಗದಿರುವುದರಿಂದ ವಿವಿಧ ತಾಂತ್ರಿಕ ತೊಂದರೆಗಳಾಗಿವೆ. ಇದರ ಕುರಿತು ಇಲಾಖೆಯ ಗಮನಕ್ಕಿದೆ. ತೆರೆದಿರುವ ಒಳಚರಂಡಿಯ ಮುಚ್ಚಳಗಳನ್ನು ಸರಿಪಡಿಸುವ ಕೆಲಸ ಕೆಲವೇ ದಿನಗಳಲ್ಲಿ ನಡೆಯಲಿದೆ’ ಎಂದು ಒಳಚರಂಡಿ ಮಂಡಳಿಯ ಅಧಿಕಾರಿ ಸಂಜೀವಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಸೇಡಂ ಪಟ್ಟಣದ ಗಣೇಶ ನಗರದಲ್ಲಿರುವ ಒಳಚರಂಡಿಯ ತೆರೆದ ಹೊಂಡಗಳು

ಸೇಡಂ ಪಟ್ಟಣದಲ್ಲಿರುವ ಒಳಚರಂಡಿಯ ತೆರೆದ ಹೊಂಡಗಳನ್ನು ಮುಚ್ಚಲು ಮುಚ್ಚಳಗಳನ್ನು ತರಿಸಲಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ. ಸಂಜೀವಕುಮಾರ ಅಧಿಕಾರಿ ಒಳಚರಂಡಿ ಮಂಡಳಿ

ರಸ್ತೆ ಮಧ್ಯದಲ್ಲಿರುವ ತೆರೆದ ಹೊಂಡಗಳನ್ನು ಆದಷ್ಟು ಶೀಘ್ರದಲ್ಲಿ ಸಂಬಂಧಪಟ್ಟ ಇಲಾಖೆಯವರು ಮುಚ್ಚುವ ಕೆಲಸ ಮಾಡಬೇಕು. ಗೋಪಾಲ ರಾಠೋಡ ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.