ADVERTISEMENT

ಅಕ್ಷರದ ಅಂಗಳದಲ್ಲಿ ಪರಿಸರ ಪ್ರೀತಿ

ಗೋಣಿಮರೂರು ಗ್ರಾಮೀಣ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 7:36 IST
Last Updated 11 ಫೆಬ್ರುವರಿ 2017, 7:36 IST
ಸೋಮವಾರಪೇಟೆ ಬಳಿ ಗೋಣಿಮರೂರು ಹಿರಿಯ ಪ್ರಾಥಮಿಕ ಶಾಲೆ ಹೊರನೋಟ
ಸೋಮವಾರಪೇಟೆ ಬಳಿ ಗೋಣಿಮರೂರು ಹಿರಿಯ ಪ್ರಾಥಮಿಕ ಶಾಲೆ ಹೊರನೋಟ   

ಸೋಮವಾರಪೇಟೆ: ಗ್ರಾಮೀಣ ಭಾಗದಲ್ಲಿಯೂ ಪಟ್ಟಣದ ಖಾಸಗಿ ಶಾಲೆಗಳಂತೆ ಅನುಕೂಲ ಕಲ್ಪಿಸಿ, ಹಚ್ಚ ಹಸಿರಿನ ನಡುವೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಾತಾವರಣ ರೂಪಿಸಿರುವ ಶಾಲೆ ಇದು.

ಸಮೀಪದ ಗೋಣಿಮರೂರು ಗ್ರಾಮೀಣ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಥದೊಂದು ಚಿತ್ರಣ ಕಾಣಬಹುದಾಗಿದೆ.
1968ರಲ್ಲಿ ಪ್ರಾರಂಭವಾದ ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ 55 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರಿಸರದೆಡೆಗೆ ಹೆಚ್ಚಿನ ಕಾಳಜಿ ಹೊಂದಿದ್ದು, ಶಾಲಾ ಆವರಣದಲ್ಲಿ ಗುಲಾಬಿ ಸೇರಿದಂತೆ 50 ವಿವಿಧ ಬಗೆಯ ಹೂವಿನ, ಅಲಂಕಾರಿಕ, ಔಷಧೀಯ ಗಿಡಗಳನ್ನು ಬೆಳೆಸಲಾಗಿದೆ. ಇಲ್ಲಿ ಬೆಳೆದಿರುವ ಒಂದೊಂದು ಹೂವಿನ ಗಿಡವನ್ನೂ ಒಬ್ಬೊಬ್ಬ ವಿದ್ಯಾರ್ಥಿ ಆಸಕ್ತಿಯಿಂದ ಬೆಳೆಸುವ ಮೂಲಕ, ಸಂಬಂಧಿಸಿದ ಗಿಡದ ಸಂಪೂರ್ಣ ನಿರ್ವಹಣೆಯನ್ನು ವಿದ್ಯಾರ್ಥಿಗಳೇ ಮಾಡುತ್ತಾರೆ.

ADVERTISEMENT

ಕುಡಿಯಲು, ಗಿಡಗಳಿಗೆ ನೀರೆರೆಯಲು ತೆರೆದ ಬಾವಿಗೆ ಮೋಟಾರ್‌ ಅಳವಡಿಸಿ ಅದಕ್ಕೆ ಕಾರಂಜಿ ಮಾದರಿಯಲ್ಲಿ ನೀರನ್ನು ಹಾಯಿಸುತ್ತಾರೆ. ದೈನಂದಿನ ಬಿಸಿ ಊಟಕ್ಕೆ ಸಾವಯವ ಕೃಷಿಯಲ್ಲಿ ವಿವಿಧ ತರಕಾರಿಗಳನ್ನು ತಾವೇ ಬೆಳೆಯುತ್ತಾರೆ.

ಶಾಲೆ ಮತ್ತು ಮೈದಾನದ ಸುತ್ತಾ ಕಳೆದ 7ವರ್ಷಗಳಿಂದ ವಿದ್ಯಾರ್ಥಿಗಳೇ ನೆಟ್ಟು ಬೆಳೆಸಿದ ಸುಮಾರು 101 ಮಾವು, ಹಲಸು, ನೆಲ್ಲಿ, ಬೇವು ಸೇರಿದಂತೆ ವಿವಿಧ ಕಾಡು ಜಾತಿಯ ಮರಗಳಿವೆ.

ಇದರಿಂದ ಬೀಳುವ ತರಗೆಲೆ ಸೇರಿದಂತೆ ತ್ಯಾಜ್ಯವನ್ನು ಪ್ರತಿ ನಿತ್ಯ ಮಕ್ಕಳು ಸಂಗ್ರಹಿಸಿ ತಂದು ಶತ್ರು ಕಸ ಮತ್ತು ಮಿತ್ರ ಕಸ ಎಂಬ ಮೂರು ಗುಂಪುಗಳಾಗಿ ವಿಂಗಡಿಸಿ ಅದರಿಂದ ಗೊಬ್ಬರವನ್ನು ತಯಾರಿಸಲಾಗುತ್ತಿದೆ. ಹಾಗೆಯೇ ಇಲ್ಲಿ ಔಷಧೀಯ ಅಲೋವೆರಾ, ತುಳಸಿ, ಒಂದೆಲಗ ಸೇರಿದಂತೆ ಹಲವು ಸಸ್ಯಗಳನ್ನು ಬೆಳೆಯಲಾಗಿದೆ.

ಮಕ್ಕಳೇ ನಿರ್ವಹಿಸುವ ಗ್ರಂಥಾಲಯ, ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳ ಚಿತ್ರ ಹಾಗೂ 8 ಕಂಪ್ಯೂಟರ್‌ ವ್ಯವಸ್ಥೆ , ಎಂಎಚ್‌ಆರ್‌ಡಿ ಯೋಜನೆಯಡಿ ಇಲ್ಲಿ ಸ್ಮಾರ್ಟ್‌ ಕ್ಲಾಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜತೆಗೆ ಉತ್ತಮ ಶೌಚಾಲಯದ ವ್ಯಸ್ಥೆಯೂ ಸಹ ಇದೆ.

ತ್ಯಾಜ್ಯ ನೀರು ಬಾಳೆ ತೋಟಕ್ಕೆ ಹರಿಸುವ ಮೂಲಕ ನೀರನ್ನು ವ್ಯರ್ಥವಾಗಲು ಅವಕಾಶ ನೀಡಿಲ್ಲ. ಇದರೊಂದಿಗೆ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿದೇಶಿ ಕರೆನ್ಸಿಗಳನ್ನು ಸಹ ಸಂಗ್ರಹಿಸಿಟ್ಟಿರುವುದನ್ನು ಕಾಣಬಹುದಾಗಿದೆ.

ವಿದ್ಯಾರ್ಥಿಗಳಲ್ಲಿ ಪರಿಸರದ ಅರಿವು ಮೂಡಿಸಲು ನಡೆಸುವ ಕಾರ್ಯಕ್ರಮದಲ್ಲಿ ಪರಿಸರ ಮಿತ್ರ ಶಾಲಾ 2014–15 ನೇ ಸಾಲಿನಲ್ಲಿ ಗೋಣಿಮರೂರು ಶಾಲೆ ಜಿಲ್ಲಾ ಪ್ರಶಸ್ತಿಗೆ ಭಾಜನವಾಗಿದ್ದು, ₹ 10 ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕವನ್ನು ಪಡೆದಿತ್ತು.

ಮೊದಲೇ ಜಿಲ್ಲಾ ಮಟ್ಟದ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ವಿಜ್ಞಾನ ಮಾಧರಿ ಸ್ಪರ್ಧೆಯಲ್ಲಿ ಎರಡು ಭಾರಿ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಶಾಲಾ ಸರ್ವತೋಮುಖ ಅಭಿವೃದ್ದಿಗೆ 13 ಮಂದಿ ನೇತೃತ್ವದ ಶಾಲಾಭಿವೃದ್ದಿ  ಸಮಿತಿ ಇದೆ. ಇವರು ಮಕ್ಕಳಿಗೆ ಶಾಲಾ ಮುಂಭಾಗದಲ್ಲಿ ಆಟವಾಡಲು ಪರಿಕರ ಅಳವಡಿಸಿಕೊಟ್ಟಿದ್ದಾರೆ. ಶಾಲೆಗೆ ಮುಖ್ಯ ಶಿಕ್ಷಕಿ ಎನ್‌.ಪಿ.ಮರೀನಾ ಕಾರ್ಯನಿರ್ವಹಿಸುತ್ತಿದ್ದು, ಉಳಿದಂತೆ    4 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ.

ಶಾಲಾ ವಾರ್ಷಿಕೋತ್ಸವ ಸಂದರ್ಭ ಶಾಲೆಯ ಮುಂಭಾಗದಲ್ಲಿ ಶಾಲಾ ಹಳೆಯ ವಿದ್ಯಾರ್ಥಿಗಳಾದ ಮುತ್ತಪ್ಪ ಮತ್ತು ಮುದ್ದಪ್ಪ ಚಿಕ್ಕ ಉದ್ಯಾನವನ ಹಾಗೂ ಕಾವೇರಿ ಪ್ರತಿಮೆಯೊಂದಿಗೆ ಕಾರಂಜಿ ವ್ಯವಸ್ಥೆ ಕಲ್ಪಿಸಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಒಟ್ಟಿನಲ್ಲಿ ಉತ್ತಮ ವಿದ್ಯಾರ್ಥಿ ತಂಡ,  ಶಿಕ್ಷಕರ ವೃಂದ ಹಾಗೂ ಎಲ್ಲಾ ಅಭಿವೃಧ್ದಿ ಕಾರ್ಯಗಳಿಗೆ ಸಹಕಾರ ನೀಡುವ ಅಭಿವೃದ್ದಿ ಮಂಡಳಿ   ಯಿಂದಾಗಿ ನಮ್ಮ ಶಾಲೆಯು ಈ ಭಾರಿಯ ಪರಿಸರ ಮಿತ್ರ ಶಾಲೆಯಾಗಿ ಆಯ್ಕೆಗೆ ಅರ್ಜಿ ಸಲ್ಲಿಸಿದ್ದು, ಈ ಬಾರಿಯೂ ಪ್ರಶಸ್ತಿ ಎದುರು ನೀಡುತ್ತಿದ್ದೇವೆ ಎಂದು ಎನ್ನುತ್ತಾರೆ ಶಿಕ್ಷಕ ಎಚ್‌.ಎಸ್‌.ರಾಜಪ್ಪ. 

-ಡಿ.ಪಿ. ಲೋಕೇಶ್‌

* ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸಲು  ಮುಂದಿನ ವರ್ಷ ಶಾಲಾ ಸುತ್ತಲೂ ಹಣ್ಣಿನ ಗಿಡಗಳೊಂದಿಗೆ ಔಷಧೀಯ ವನ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ

–ಎನ್‌.ಪಿ. ಮರೀನಾ, ಮುಖ್ಯ ಶಿಕ್ಷಕಿ

* ಈ ಶಾಲೆಯಲ್ಲಿ ನಾವು ಶಿಕ್ಷಣವನ್ನು ಪಡೆದಿದ್ದೇನೆ. ಅಣ್ಣ ಮುದ್ದಪ್ಪ ಜತೆಗೂಡಿ ಶಾಲೆ ದತ್ತು ಪಡೆಯಲು ಚರ್ಚಿಸಲಾಗಿದೆ. ಮುಂದಿನ ದಿನ ಶಾಲೆ ಪ್ರಗತಿಗೆ ಶ್ರಮಿಸಲಾಗುವುದು
–ಮುತ್ತಪ್ಪ, ಹಳೆಯ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.