ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯದಿಂದ ನಷ್ಟ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 6:58 IST
Last Updated 12 ಜುಲೈ 2017, 6:58 IST

ಸೋಮವಾರಪೇಟೆ: ‘ಕಾಫಿ ಮಂಡಳಿಯ ಅಧಿಕಾರಿಗಳ  ನಿರ್ಲಕ್ಷ್ಯ ದಿಂದಾಗಿ ಕಾಫಿ ಬೆಳೆಗಾರರು ನಷ್ಟ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ’ ಎಂದು ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ಆರೋಪಿಸಿದರು.

ತಾಲ್ಲೂಕು ಕಾಫಿ ಬೆಳೆಗಾರರ ಸಂಘದಿಂದ ಮಂಗಳವಾರ ಇಲ್ಲಿನ ಮಹಿಳಾ ಸಮಾಜದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಫಿ ಮಂಡಳಿಯ ಅಧಿಕಾರಿಗಳು ಕಚೇರಿಯಿಂದ ಹೊರಬಾರದೆ, ಅಲ್ಲಿಯೇ ಕುಳಿತು ಕೇಂದ್ರಕ್ಕೆ ವರದಿ ನೀಡುತ್ತಿರುವುದರಿಂದ ಕೇಂದ್ರ ಸರ್ಕಾರಕ್ಕೆ ಇಲ್ಲಿನ ಬೆಳೆಗಾರರ ಕಷ್ಟ ತಿಳಿಯುತ್ತಿಲ್ಲ. ಹವಾಮಾನ ವೈಪರೀತ್ಯ ಸೇರಿದಂತೆ ಅರೇಬಿಕಾ ಕಾಫಿ ಬೆಳೆಗೆ ಹೆಚ್ಚಿನ ಖರ್ಚು ಬರುತ್ತಿದ್ದು, ಇದನ್ನು ನಿಭಾಯಿಸಲಾಗದೇ ಶೇ 40ರಷ್ಟು ಅರೇಬಿಕಾ ಕಾಫಿ ತೋಟವನ್ನು ರೊಬಸ್ಟಾ ಕಾಫಿ ತೋಟವನ್ನಾಗಿ ಪರಿವರ್ತನೆ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರಿದಲ್ಲಿ ಇಲ್ಲಿ ಅರೇಬಿಕಾ ಕಾಫಿ ಸಂಪೂರ್ಣ ನಶಿಸಿಹೋಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಕಾಫಿ ಬೆಳೆಗಾರರ ಬದುಕು ಇಂದು ಶೋಚನೀಯವಾಗಿದ್ದು, ಬೆಳೆಗಾರರು ತಮಗೆ ದೊರಕಬೇಕಾದ ಸವಲತ್ತುಗಳಿಗೆ ಕಾಫಿ ಮಂಡಳಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಹಾಯಧನವನ್ನು ದೊಡ್ಡ ಉದ್ಯಮಿಗಳಿಗೆ ನೀಡುವ ಬದಲು ಸಣ್ಣ ಬೆಳೆಗಾರರಿಗೆ ನೀಡುವಂತಾಗಬೇಕು. ಕಾಫಿ ಬೆಳೆಗಾರರಿಗೆ ಮಾರಕವಾಗಿರುವ ಬಿಳಿಕಾಂಡ ಕೊರಕ ರೋಗವನ್ನು ನಿಯಂತ್ರಿಸಲು ಕಾಫಿ ಮಂಡಳಿ ಅಧಿಕಾರಿಗಳು ತೋಟ ಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದರು.

ಜಿಲ್ಲೆಯ  ತೋಟಗಳಲ್ಲಿ ಮಣ್ಣು ಪರೀಕ್ಷೆಗೆ ಸಂಚಾರ ಮಣ್ಣು ಪರೀಕ್ಷಾ ಘಟಕ ನಿಯೋಜನೆ ಮಾಡ ಬೇಕು ಎಂದು ಕೆ.ಎಂ.ಲಕ್ಷ್ಮಣ್ ಒತ್ತಾಯಿಸಿದರು. ಸೋಮವಾರಪೇಟೆ ಪಟ್ಟಣದಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತಿದ್ದು ವಾರಕೊಮ್ಮೆ ಪಟ್ಟಣಕ್ಕೆ ಬರುವ ಬೆಳೆಗಾರರಿಗೆ ವಾಹನ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ವಾಹನ ನಿಲುಗಡೆಗೆ ಪಟ್ಟಣ ಪಂಚಾಯಿತಿಯ ತರಕಾರಿ ಮಾರುಕಟ್ಟೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದು ಕಾಫಿ ಎಸ್.ಬಿ.ಭರತ್ ಕುಮಾರ್ ಮನವಿ ಮಾಡಿದರು.

ಕಾಫಿ ಮಂಡಳಿಯಿಂದ ಬೆಳೆಗಾರರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಖಡ್ಡಾಯ ವಿಮೆಯಿಂದ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಶಾಂತಳ್ಳಿ  ರಾಜಪ್ಪ ದೂರಿದರು. ಸೋಮವಾರಪೇಟೆ ತಾಲ್ಲೂಕಿನ ಬೆಳೆಗಾರರಿಗೆ ಪರಿಹಾರ ನೀಡಲು ಸುಮಾರು ₹ 4 ಕೋಟಿ ಅನುದಾನ ಬೇಕಾಗಿದೆ ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರುಳಿಧರ್  ತಿಳಿಸಿದರು.

ಕಾಫಿ ಬೆಳೆಗಾರರಿಗೆ ಸಂಬಂಧಿಸಿ ದಂತೆ ಬಹುತೇಕ ಪ್ರಕರಣದಲ್ಲಿ ಮೂಲ ಕಡತಗಳೇ ಲಭ್ಯವಿರುವುದಿಲ್ಲ. ಇದರಿಂದ ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗುತ್ತಿದೆ ಎಂದು ತಹಶೀಲ್ದಾರ್ ಮಹೇಶ್ ಹೇಳಿದರು.

ಕೃಷಿ ಇಲಾಖೆ ಅಧಿಕಾರಿ ಮುಕುಂದ್, ಡಿವೈಎಸ್‌ಪಿ ಸಂಪತ್ ಕುಮಾರ್, ಸಂಬಾರ ಮಂಡಳಿ ಅಧಿಕಾರಿ ವಾಸು, ವಲಯಾರಣ್ಯಧಿಕಾರಿ ಮೊಹಸ್ಸೀನ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಬೆಳೆಗಾರರಿಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿಜಯಲಕ್ಷ್ಮಿ ಸುರೇಶ್, ಸಿಪಿಐ ಪರಶಿವಮೂರ್ತಿ, ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಎಡದಂಟೆ ಲವ, ತಾಕೇರಿ ಪ್ರಕಾಶ್, ಬಸಪ್ಪ, ಲಕ್ಷ್ಮಣ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.