ADVERTISEMENT

ಅಭಿವೃದ್ಧಿಗೆ ಕಾದಿರುವ ಮೈದಾನ...

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 7:21 IST
Last Updated 6 ನವೆಂಬರ್ 2017, 7:21 IST
ಸುಂಟಿಕೊಪ್ಪಲು ಜಿಎಂಪಿ ಶಾಲಾ ಮೈದಾನ
ಸುಂಟಿಕೊಪ್ಪಲು ಜಿಎಂಪಿ ಶಾಲಾ ಮೈದಾನ   

ಸುಂಟಿಕೊಪ್ಪ: ‘ಫುಟ್‌ಬಾಲ್‌ ತವರೂರು’ ಸುಂಟಿಕೊಪ್ಪದ ಮೈದಾನ ಯಾವುದೇ ಅಭಿವೃದ್ಧಿ ಕಾಣದಿರುವುದು ಕ್ರೀಡಾಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ ಈ ಮೈದಾನದಲ್ಲಿ ಶಾಲಾಮಟ್ಟದ ಕ್ರೀಡಾಕೂಟದಿಂದ ಹಿಡಿದು ಸಂಘ- ಸಂಸ್ಥೆಗಳು ಇದೇ ಮೈದಾನದಲ್ಲಿ ಫುಟ್‌ಬಾಲ್‌ ಟೂರ್ನಿ ಆಯೋಜಿಸುತ್ತವೆ.

ಈ ಹಿಂದೆ ಇದೇ ಮೈದಾನದಲ್ಲಿ ಅಭ್ಯಾಸ ನಡೆಸಿದ್ದ ಹಲವಾರು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡು ಸುಂಟಿಕೊಪ್ಪಕ್ಕೆ ಕೀರ್ತಿ ತಂದಿದ್ದಾರೆ. ಇಂತಹ ಮೈದಾನವು ಈಗ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಕ್ರೀಡಾಪಟುಗಳ ಅಭ್ಯಾಸಕ್ಕೆ ಅಡ್ಡಿ ಉಂಟಾಗಿದೆ.

1995ರಲ್ಲಿ ದಿ.ಬಿ.ಎಸ್. ಮುತ್ತಪ್ಪ ಅವರು ಮೈದಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ಈ ಮೈದಾನಕ್ಕೆ ತಡೆಗೋಡೆ ನಿರ್ಮಾಣಕ್ಕೆ ಚಾಲನೆ ದೊರಕಿತ್ತು. ನಂತರದ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ಸರ್ವ ಶಿಕ್ಷಣ ಇಲಾಖೆ, ಯುವಜನ ಸೇವಾ ಇಲಾಖೆಯ ಅನುದಾನದಲ್ಲಿ ತಡೆಗೋಡೆ, ಗ್ಯಾಲರಿ ಹಾಗೂ ವೇದಿಕೆಗಳು ನಿರ್ಮಾಣಗೊಂಡಿದ್ದರೂ ಅದರ ನಿರ್ವಹಣೆಯಿಲ್ಲದೇ ಸಂಪೂರ್ಣ ಹಾಳಾಗಿ ಹೋಗಿವೆ. ಅಲ್ಲದೇ, ಗ್ಯಾಲರಿ ನಿರ್ಮಾಣದ ಕಾಮಗಾರಿಯು ಅರ್ಧಕ್ಕೆ ನಿಂತಿದೆ.

ADVERTISEMENT

ಅವೈಜ್ಞಾನಿಕ ವೇದಿಕೆ: ಜಿಎಂಪಿ ಶಾಲಾ ಮೈದಾನದಲ್ಲಿ ನಿರ್ಮಾಣವಾಗಿರುವ ವೇದಿಕೆಯು ಸಂಪೂರ್ಣ ಅವೈಜ್ಞಾನಿಕವಾಗಿದೆ. ಗೋಲು ಕಂಬದ ಹಿಂಭಾಗದಲ್ಲಿ ದೊಡ್ಡದಾದ ವೇದಿಕೆ ನಿರ್ಮಿಸಿರುವುದು ಯಾವ ಕಾರಣಕ್ಕೆ ಎಂದು ಕ್ರೀಡಾಭಿಮಾನಿಗಳು ಪ್ರಶ್ನಿಸುತ್ತಾರೆ.

ಪಂದ್ಯಾವಳಿ ವೇಳೆ ಅತಿಥಿಗಳು ಹಾಗೂ ಕ್ರೀಡಾಭಿಮಾನಿಗಳು ಭಯದ ವಾತಾವರಣದಲ್ಲಿ ಆಸೀನರಾಗುವ ಸ್ಥಿತಿಯಿದೆ. ಅಲ್ಲದೇ ವೇದಿಕೆಯ ಗೋಡೆಗಳು ಕಿತ್ತುಹೋಗಿದ್ದು ಮಾತ್ರವಲ್ಲ, ಆಟಗಾರರಿಗೆ ಸಮವಸ್ತ್ರ ಬದಲಾಯಿಸುವುದು, ನೀರಿನ ಸೌಕರ್ಯ ಇನ್ನಿತರ ಯಾವುದೇ ಮೂಲ ಸೌಕರ್ಯಗಳೂ ಇಲ್ಲಿಲ್ಲ.

ಗ್ಯಾಲರಿ ಮತ್ತು ವೇದಿಕೆಯ ಸಮಸ್ಯೆ ಒಂದೆಡೆಯಾದರೆ ಮೈದಾನದ ಪರಿಸ್ಥಿತಿ ಅಧೋಗತಿಯಾಗಿದೆ. ಮೈದಾನದ ಒಂದು ಬದಿ ಮಣ್ಣು ಕಲ್ಲುಗಳಿಂದ ಕೂಡಿದೆ. ಗಿಡಗಂಟಿಗಳಿಂದ ಆವೃತ್ತವಾಗಿ ಆಟವಾಡುವುಕ್ಕೆ ಸಾಧ್ಯವಾಗದ ಪರಿಸ್ಥಿತಿ ಜಿಲ್ಲೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.