ADVERTISEMENT

‘ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 6:40 IST
Last Updated 5 ಡಿಸೆಂಬರ್ 2017, 6:40 IST

ಮಡಿಕೇರಿ: ‘ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮುಖ್ಯವಾಗಿದ್ದು, ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆ ಅಡಿ ಕುಗ್ರಾಮ ಮುಕ್ಕೋಡ್ಲು ಗ್ರಾಮವನ್ನು ಸೇರ್ಪಡೆ ಮಾಡಲಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದರು.

ಸಮೀಪದ ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಕ್ಕೋಡ್ಲುವಿನಿಂದ ಮಕ್ಕಂದೂರುವಿಗೆ ಸಂಪರ್ಕ ಕಲ್ಪಿಸುವ ಮುಕ್ಕೋಡ್ಲು– ತಂತಿಪಾಲ– ಕಲ್ಲುಕೊಟ್ಟು ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘₹ 7 ಲಕ್ಷ ಅನುದಾನ ಒದಗಿಸಿದ್ದು, ಈ ಅನುದಾನದಲ್ಲಿ ರಸ್ತೆ ದುರಸ್ತಿ ಮಾಡಲಾಗುವುದು. ಈಗ ಮಳೆ ಹಾನಿ ಪರಿಹಾರ ನಿಧಿಯಡಿ ₹ 50 ಲಕ್ಷ ಬಿಡುಗಡೆಯಾಗಿದ್ದು, ಅದರಲ್ಲಿ ಹಟ್ಟಿಹೊಳೆಯಿಂದ ಮಕ್ಕಂದೂ ರುವರೆಗೆ ರಸ್ತೆ ವಿಸ್ತರಣೆ ಮಾಡಲಾಗುವುದು. ಇದೀಗ ವಿಶೇಷ ಪ್ಯಾಕೇಜ್‌ನಡಿ ₹ 70 ವೆಚ್ಚದಲ್ಲಿ ಮುಕ್ಕೋಡ್ಲುವಿನಿಂದ ಮಕ್ಕಂದೂರುವರೆಗೆ ಡಾಂಬರೀಕರಣ ಮಾಡಲಾಗುತ್ತಿದೆ. ಇನ್ನು ₹ 20 ಅನುದಾನ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಕಾಮಗಾರಿ ಕಳಪೆ ನಡೆಯದಂತೆ ಗ್ರಾಮ ಸ್ಥರು ಎಚ್ಚರಿಕೆ ವಹಿಸಬೇಕು ಎಂದರು.

ADVERTISEMENT

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಪ್ರಧಾನ ಮಂತ್ರಿ ‘ನಮ್ಮ ಗ್ರಾಮ, ನಮ್ಮ ರಸ್ತೆ’ ಯೋಜನೆ ಅಡಿ ಹಟ್ಟಿ- ಹಮ್ಮಿಯಾಲ ರಸ್ತೆ ಅಭಿವೃದ್ಧಿಗೆ ₹ 10.4 ಕೋಟಿ ಬಿಡುಗಡೆ ಆಗಿದೆ. ಈ ರಸ್ತೆಯನ್ನು 5 ವರ್ಷಗಳ ಕಾಲ ಗುತ್ತಿಗೆದಾರರೇ ನಿರ್ವಹಣೆ ಮಾಡಲಿದ್ದಾರೆ ಎಂದು ಹೇಳಿದರು.

ಅಭಿವೃದ್ಧಿ ಕಾರ್ಯದಲ್ಲಿ ಎಲ್ಲರೂ ರಾಜಕೀಯ ಮರೆತು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಎಚ್ಚರಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ವಿಮಲಾ ರವಿ, ಬಿ.ಎನ್. ರಮೇಶ್, ಅಣ್ಣೆಚ್ಚಿರ ಸತೀಶ್, ಕುಂಬಗೌಡನ ಪ್ರಸನ್ನ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಾಂತೆಯಂಡ ಅಚ್ಚಯ್ಯ, ಗುತ್ತಿಗೆದಾರ ಸುರೇಶ್ ರೈ, ಚೆನ್ನಪಂಡ ಪೊನ್ನುಕಟ್ಟಿ, ಹಂಚೆಟ್ಟಿರ ಮನುಮುದ್ದಪ್ಪ, ಸುಧಾಕರ ಹೂವಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.