ADVERTISEMENT

ಆದಿವಾಸಿಗಳು ಕಾಡಿನ ಅವಿಭಾಜ್ಯ ಅಂಗ

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಬಿ. ಮಲ್ಲೇಶ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 11:15 IST
Last Updated 27 ಮಾರ್ಚ್ 2015, 11:15 IST

ಕುಶಾಲನಗರ: ತಲೆತಲಾಂತರಗಳಿಂದ ಕಾಡಿನಲ್ಲಿ ಹುಟ್ಟಿ ಬೆಳೆದು ಇಂದಿಗೂ ಕಾಡಿನಲ್ಲೇ ಬದುಕುತ್ತಿರುವ ಆದಿವಾಸಿ ಬುಡಕಟ್ಟು ಜನರು ಕಾಡಿನ ಅವಿಭಾಜ್ಯ ಅಂಗ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಬಿ. ಮಲ್ಲೇಶ್‌ ಅವರು ಅಭಿಪ್ರಾಯಿಸಿದರು.

ಅರಣ್ಯ ಇಲಾಖೆಯು ಕಾಂಪಾ ಯೋಜನೆ ಅಡಿಯಲ್ಲಿ ಗುರುವಾರ ಏರ್ಪಡಿಸಿದ್ದ 2014 – 15ನೇ ಸಾಲಿನ ಅರಣ್ಯ, ಜಲ ಮತ್ತು ಪರಿಸರ ಸಂರಕ್ಷಣೆ ಕುರಿತ ಮಡಿಕೇರಿ ವಿಭಾಗ ಮಟ್ಟದ ಜನಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕೊಡಗು ಜಿಲ್ಲೆಯು ಪ್ರಪಂಚದಲ್ಲಿ ಅರಣ್ಯ ಜೀವ ವೈವಿಧ್ಯತೆಗೆ ಹೆಸರುವಾಸಿ­ಯಾಗಿದ್ದು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವಷ್ಟರ ಮಟ್ಟಿಗೆ ಅರಣ್ಯ ಸಂಪತ್ತು ಹೊಂದಿದೆ. ಪ್ರತೀ ನದಿ ಹರಿಯುವಿಕೆಯೊಂದಿಗೆ ಒಂದೊಂದು ಸಂಸ್ಕೃತಿಯೇ ನಿರಂತರವಾಗಿ ಹರಿದು ಬಂದಿದೆ. ಅದರಲ್ಲಿ ಬುಡಕಟ್ಟು ಸಂಸ್ಕೃತಿ ಕೂಡ ಒಂದು. ಸಂಸ್ಕೃತಿಗಳು ರಕ್ಷಣೆ­ಯಾಗಬೇಕಾದರೆ ನದಿ ಸಂರಕ್ಷಣೆ­ಯಾಗಬೇಕು. ಅದಕ್ಕಾಗಿ ಅರಣ್ಯದ ರಕ್ಷಣೆಯೂ ಆಗಬೇಕಾದ ತುರ್ತು ಅಗತ್ಯವಿದೆ ಎಂದರು.

ಪಟ್ಟಣದ ಎಪಿಸಿಎಂಎಸ್‌ಸಿ ಸಭಾಂಗಣದಲ್ಲಿ ನಡೆದ ಸಭಾ ಸಮಾರಂಭಕ್ಕೂ ಮೊದಲು ಪಟ್ಟಣದ ಕಾವೇರಿ ನದಿ ಬಳಿಯಿಂದ ವಿವಿಧ ವಲಯ ಅರಣ್ಯ ಸಮಿತಿಗಳು, ಗ್ರಾಮ ಅರಣ್ಯ ಸಮಿತಿಗಳ ವತಿಯಿಂದ ಆರಂಭವಾದ ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಸಿ. ಸುಲೋಚನಾ ಅವರು ಕಾವೇರಿ ನದಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಬಳಿಕ ಕಾವೇರಿ ದಡದಲ್ಲಿ ಮಾವಿನ ಗಿಡವೊಂದನ್ನು ನೆಡಲಾಯಿತು. ಮೆರವಣಿಗೆಯುದ್ದಕ್ಕೂ ವಿವಿಧ ಅರಣ್ಯ ಸಮಿತಿಯಿಂದ ಭಾಗವಹಿಸಿದ್ದ ಜನರು ಅರಣ್ಯ ರಕ್ಷಿಸುವಂತೆ ಘೋಷಣೆಗಳನ್ನು ಕೂಗಿದರು. ಸಭಾ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆ ಹಳೇಬೀಡಿನ ಶಿವಣ್ಣ ಮತ್ತು ತಂಡದವರು ಪರಿಸರ ಗೀತೆಗಳನ್ನು ಹಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ಏಡುಕೂಂಡಲು, ಕುಶಾಲನಗರ ವಲಯ ಅರಣ್ಯ ಅಧಿಕಾರಿ ಚಿಣ್ಣಪ್ಪ ಮುಂತಾದವರು ಇದ್ದರು.
*
ಕೊಡಗಿನ ಅರಣ್ಯವನ್ನು ಜನರೇ ಸಂರಕ್ಷಿಸುತ್ತಿದ್ದಾರೆ. ಆದರೆ, ಮತ್ತೊಂದು ಸಂಸ್ಥೆ ಇಲ್ಲಿನ ಜನರನ್ನು ನಿರ್ಬಂಧಿಸಿ, ಅವರಿಗೆ ತೊಂದರೆ ನೀಡಿ ಕಾಡನ್ನು ಸಂರಕ್ಷಿಸುತ್ತಾರೆ ಎನ್ನುವ ಹಠ ಬೇಡ.
- ಎಸ್‌.ಎನ್‌. ರಾಜಾರಾವ್‌,
ಜಿಲ್ಲಾ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.