ADVERTISEMENT

ಆಮ್ಲಜನಕ ಕೊರತೆ; ಮೀನುಗಳ ಸ್ಥಳಾಂತರ

ಕಲುಷಿತ ನೀರಿನ ಪರಿಣಾಮ; ಕಾವೇರಿ ನಿಸರ್ಗಧಾಮದ ಬಳಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 10:25 IST
Last Updated 20 ಮಾರ್ಚ್ 2018, 10:25 IST

ಕುಶಾಲನಗರ: ಸಮೀಪದ ಕಾವೇರಿ ನಿಸರ್ಗಧಾಮದ ಬಳಿ ಕಾವೇರಿ ನದಿಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಬಳಲುತ್ತಿದ್ದ ನೂರಾರು ಮೀನುಗಳನ್ನು ಹಿಡಿದು ಸೋಮವಾರ ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ಬಿಡಲಾಯಿತು.

ಜಿಲ್ಲಾ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್ ನೇತೃತ್ವದಲ್ಲಿ, ಕಲುಷಿತ ನೀರಿನಲ್ಲಿದ್ದ ವಿವಿಧ ಜಾತಿಯ ಮೀನುಗಳನ್ನು ರಕ್ಷಿಸಲು ಬೆಳಗಿನಿಂದಲೇ ಕಾರ್ಯಾಚರಣೆ ನಡೆಯಿತು.

ಕಾವೇರಿ ಮೀನುಗಾರರ ಸಹಕಾರ ಸಂಘದ ಸಿಬ್ಬಂದಿಯ ಸಹಕಾರದಲ್ಲಿ ಬಲೆ ಬೀಸಿ ಮೀನುಗಳನ್ನು ಹಿಡಿದು ದೊಡ್ಡ ಟ್ಯಾಂಕರ್‌ಗಳ ಮೂಲಕ ಅವುಗಳ ಸ್ಥಳಾಂತರ ಕಾರ್ಯ ನಡೆಯಿತು.

ADVERTISEMENT

ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿದ ಕಾರಣ ಆಮ್ಲಜನಕದ ಕೊರತೆ ಉಂಟಾಗಿದ್ದು, ಮೀನುಗಳ ಸಾಯುತ್ತಿರುವುದು ಕಂಡುಬಂದಿತ್ತು. ಮೀನುಗಳ ರಕ್ಷಣೆ ಕ್ರಮವಾಗಿ ಮೀನುಗಾರಿಕಾ ಇಲಾಖೆಯು ಸ್ಥಳಾಂತರಕ್ಕೆ ಮುಂದಾಯಿತು.

ಇಲ್ಲಿ ಹಿಡಿದ ಮೀನುಗಳನ್ನು ಹಾರಂಗಿ ಜಲಾಶಯದ ಬಳಿ, ಮೀನುಮರಿ ಉತ್ಪಾದನಾ ಕೇಂದ್ರ ಹಾಗೂ ಹಾರಂಗಿ ಜಲಾಶಯ ಹಾಗೂ ಹಾರಂಗಿ ಸೇತುವೆಯಿಂದ ಕೂಡಿಗೆ ಸೇತುವೆ ತನಕದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಮಹಷೀರ್ ಮೀನು ಸಂರಕ್ಷಿತಾ ಪ್ರದೇಶದ ವ್ಯಾಪ್ತಿಯಲ್ಲಿ ಬಿಡಲಾಯಿತು.

ಈ ಪ್ರದೇಶದಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಸಾಧ್ಯವಾದಷ್ಟು ದೊಡ್ಡಮೀನುಗಳನ್ನು ಹಿಡಿದು, ನದಿಯಲ್ಲಿ ಮೀನುಗಳ ಸಾಂದ್ರತೆ ಕಡಿಮೆ ಮಾಡಿ ಆಮ್ಲಜನಕದ ಲಭ್ಯತೆ ಹೆಚ್ಚಿರುವ ಕಡೆಗೆ ಮೀನುಗಳನ್ನು ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮೀನುಗಾರಿಕಾ ಇಲಾಖೆಯ ಸೋಮವಾರಪೇಟೆ ತಾಲೂಕು ಸಹಾಯಕ ನಿರ್ದೇಶಕಿ ಮಿಲನಾ ಭರತ್, ಹಾರಂಗಿ ಮೀನು ಸಾಕಾಣಿಕಾ ಕೇಂದ್ರದ ಸಹಾಯಕ ನಿರ್ದೇಶಕ ಎಸ್.ಎಂ. ಸಚಿನ್, ಇಲಾಖೆಯ ಸಿಬ್ಬಂದಿ, ನಿಸರ್ಗಧಾಮದ ಸಹಾಯಕ ವಲಯ ಅರಣ್ಯಾಧಿಕಾರಿ ವಿಲಾಸ್, ಕಾವೇರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಶ್ರೀನಿವಾಸ್ ಇದ್ದರು.

ಶಿರಂಗಾಲ, ಜನಾರ್ದನಹಳ್ಳಿ ಹಾಗೂ ಹೇರೂರು ವ್ಯಾಪ್ತಿಯ ಮೀನುಗಾರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.