ADVERTISEMENT

ಇಂದು ರೆಸಾರ್ಟ್‌ಗೆ ಟಿ.ಟಿ.ವಿ. ದಿನಕರನ್‌ ಭೇಟಿ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 7:08 IST
Last Updated 16 ಸೆಪ್ಟೆಂಬರ್ 2017, 7:08 IST
ತಂಗ ತಮಿಳ್‌ ಸೆಲ್ವಂ
ತಂಗ ತಮಿಳ್‌ ಸೆಲ್ವಂ   

ಮಡಿಕೇರಿ: ‘ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ರೆಸಾರ್ಟ್‌ಗೆ ಬಂದಿರುವ ಶಾಸಕರಲ್ಲಿ ಯಾವುದೇ ಗೊಂದಲಗಳಿಲ್ಲ’ ಎಂದು ತಮಿಳುನಾಡಿನ ಬಂಡಾಯ ಶಾಸಕರ ಉಸ್ತುವಾರಿ ವಹಿಸಿರುವ ತಂಗ ತಮಿಳ್ ಸೆಲ್ವಂ ಸ್ಪಷ್ಟಪಡಿಸಿದರು.

ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪ ಸಮೀಪದ ಪ್ಯಾಡಿಂಗ್‌ಟನ್‌ ರೆಸಾರ್ಟ್‌ ಸಮೀಪ ಶುಕ್ರವಾರ ಮಾತನಾಡಿದರು. ‘ಪೊಲೀಸರ ಮೂಲಕ ನಮ್ಮ ಒಗ್ಗಟ್ಟು ಒಡೆಯಲು ಸರ್ಕಾರ ಪ್ರಯತ್ನಿಸಿತ್ತು. ಆದರೆ, ಫಲಿಸಲಿಲ್ಲ. ಇದೀಗ 18 ಶಾಸಕರ ನಡುವೆಯೇ ಭಿನ್ನಾಭಿಪ್ರಾಯವಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಒಗ್ಗಟ್ಟು ಪ್ರದರ್ಶನಕ್ಕಾಗಿಯೇ ರೆಸಾರ್ಟ್‌ ವಾಸ್ತವ್ಯ ಮುಂದುವರಿದಿದೆ’ ಎಂದು ಸಮರ್ಥಿಸಿಕೊಂಡರು.

‘ಟಿ.ಟಿ.ವಿ. ದಿನಕರನ್‌ ಅವರ ಸೂಚನೆಯನ್ನು ಪಾಲಿಸುತ್ತಿದ್ದು, ಶನಿವಾರ ರೆಸಾರ್ಟ್‌ಗೆ ಅವರು ಭೇಟಿ ನೀಡಲಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಮಾಹಿತಿ ನೀಡಿದರು.

ADVERTISEMENT

ವಾಹಿನಿಗಳ ವಿರುದ್ಧ ಗರಂ: ‘ನಮ್ಮ ಯಾವುದೇ ಹೇಳಿಕೆ, ವಿಚಾರಗಳು ತಮಿಳುನಾಡಿನ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿಲ್ಲ. ಸರ್ಕಾರದ ಪರವಾಗಿಯೇ ಸುದ್ದಿ ಪ್ರಸಾರ ಮಾಡಲಾಗುತ್ತಿದೆ’ ಎಂದು ಸೆಲ್ವಂ ಗರಂಗೊಂಡರು.

ರೆಸಾರ್ಟ್‌ನಲ್ಲಿರುವ ಶಾಸಕರ ಸಂಭಾವನೆ ಕಡಿತಗೊಳಿಸುವಂತೆ ಚಿತ್ರನಟ ಕಮಲ್‌ ಹಾಸನ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಅವರು ರಾಜ್ಯದ ಜನರಿಗೆ ದ್ರೋಹ ಎಸಗುತ್ತಿರುವ ಕಾರಣ ರೆಸಾರ್ಟ್‌ಗೆ ಬಂದಿದ್ದೇವೆ. ನಾವು ಎಲ್ಲಿದ್ದರೂ ಕ್ಷೇತ್ರದ ಕೆಲಸಗಳನ್ನು ಮರೆತಿಲ್ಲ. ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ’ ಎಂದರು.

ಹೊರಬಂದ 8 ಮಂದಿ: ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಿಂದ ಸ್ವಲ್ಪ ವಿಚಲಿತರಾಗಿರುವ ಬಂಡಾಯ ಶಾಸಕರು, ಶುಕ್ರವಾರ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದರು. ಎಂಟು ದಿನಗಳ ಬಳಿಕ ಮೊದಲ ಬಾರಿಗೆ ಎಂಟು ಮಂದಿ ಶಾಸಕರು ರೆಸಾರ್ಟ್‌ನಿಂದ ಹೊರಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.