ADVERTISEMENT

ಎಚ್‌1ಎನ್‌1: ರಾಜ್ಯದಲ್ಲಿ 50 ಸಾವು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 11:02 IST
Last Updated 6 ಮಾರ್ಚ್ 2015, 11:02 IST

ಮಡಿಕೇರಿ:  ರಾಜ್ಯದಲ್ಲಿ ಸುಮಾರು 1300 ಮಂದಿಗೆ ಎಚ್1ಎನ್1 ಸೋಂಕು ತಗುಲಿದೆ. ಇವರಲ್ಲಿ 964 ಮಂದಿ ಗುಣವಾಗಿದ್ದಾರೆ. 50 ಮಂದಿ ಸಾವನ್ನಪ್ಪಿದ್ದು, 25 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಮಾಹಿತಿ ನೀಡಿದರು.
ಇಲ್ಲಿನ ಜಿಲ್ಲಾಸ್ಪತ್ರೆಗೆ ಗುರುವಾರ ಭೇಟಿ ನೀಡಿದ ನಂತರ ಸಚಿವರು ಸುದ್ದಿಗಾರರೊಂದಿಗೆ   ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ 5 ಜನರಿಗೆ ಎಚ್‌1ಎನ್‌1 ಸೋಂಕು ತಗುಲಿತ್ತು. ಇವರಲ್ಲಿ 4 ಮಂದಿ ಗುಣವಾಗಿದ್ದಾರೆ. ಒಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾರಾದರೂ ತೀವ್ರ ಜ್ವರದಿಂದ ಬಳಲುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯಿರಿ. ಔಷಧಿಗಳ ಕೊರತೆಯಿಲ್ಲ ಎಂದು ಹೇಳಿದರು.

ವೈದ್ಯರ ಭರ್ತಿ:   ರಾಜ್ಯದಲ್ಲಿ 963 ಸ್ನಾತಕೋತ್ತರ ವೈದ್ಯರು, 323 ಎಂಬಿಬಿಎಸ್ ವೈದ್ಯರು ಹಾಗೂ 4 ಸಾವಿರಕ್ಕೂ ಹೆಚ್ಚು ಪ್ಯಾರಾಮೆಡಿಸಿನ್, ನರ್ಸ್‌ಗಳು ಸೇರಿದಂತೆ ಹಲವರನ್ನು ನೇಮಕ ಮಾಡಲಾಗಿದೆ. ಇನ್ನೂ 1,600 ಸ್ನಾತಕೋತ್ತರ ವೈದ್ಯರು ಮತ್ತು 300 ಎಂಬಿಬಿಎಸ್ ವೈದ್ಯರ ಕೊರತೆ ಇದೆ. ಪ್ರತಿವರ್ಷ 50 ಮಂದಿ ವೈದ್ಯರು ನಿವೃತ್ತಿ ಹೊಂದುವುದರಿಂದ ಖಾಲಿ ಉಳಿದಿದೆ. ಹಾಗೆಯೇ ಕಳೆದ ಹತ್ತು ವರ್ಷದಿಂದ ಸ್ನಾತಕೋತ್ತರ ವೈದ್ಯರನ್ನು ನಿಯೋಜಿಸಿಲ್ಲ. ಆದ್ದರಿಂದ ವೈದ್ಯರ ಕೊರತೆ ಉಂಟಾಗಿದೆ. ಆದರೆ, ಸರ್ಕಾರ ವೈದ್ಯರನ್ನು ಕಾಲ ಕಾಲಕ್ಕೆ ನೇಮಕ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು. 

ಬಡತನ ರೇಖೆಗಿಂತ ಮೇಲಿರುವವರಿಗೂ ಆರೋಗ್ಯ ಸೇವೆ ಕಲ್ಪಿಸಲು ರಾಜೀವ್ ಗಾಂಧಿ ಆರೋಗ್ಯ ಭಾಗ್ಯ ಯೋಜನೆ ಜಾರಿ ತರಲಾಗಿದೆ. ಈ ಯೋಜನೆಯಡಿ ಶೇ 70ರಷ್ಟು ಹಣವನ್ನು ಸರ್ಕಾರ ಭರಿಸಲಿದೆ. ಹಾಗೆಯೇ ಶೇ 30ರಷ್ಟು ಹಣವನ್ನು ವಿಮಾ ಕಂಪೆನಿ ಭರಿಸಲಿದೆ ಎಂದು ತಿಳಿಸಿದರು.   ಜಿ. ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಬಿ. ಭಾರತೀಶ್, ನಗರಸಭೆ ಅಧ್ಯಕ್ಷೆ ಜುಲೇಕಾಬಿ, ಸುರಯ್ಯಾ ಅಬ್ರಾರ್‌, ಯಾಕೂಬ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.