ADVERTISEMENT

ಕಾಂಪೌಂಡ್‌ಗೆ ಡಿಕ್ಕಿ: ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:21 IST
Last Updated 15 ಮೇ 2017, 7:21 IST
ಮೈಸೂರು: ಇಲ್ಲಿನ ಎಸ್‌ಜೆಸಿಇ ಕಾಲೇಜು ಮುಂಭಾಗ ಅತಿ ವೇಗವಾಗಿ ಸಾಗುತ್ತಿದ್ದ ದ್ವಿಚಕ್ರ ವಾಹನ ನಿಯಂತ್ರಣ ಕಳೆದುಕೊಂಡು ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಸವಾರ ರತ್ನಾಕರ ಅಲಿಯಾಸ್‌ ರತನ್‌ (23) ಎಂಬುವರು ಮೃತಪಟ್ಟಿದ್ದಾರೆ.
 
ಕೊಡಗು ಜಿಲ್ಲೆಯ ಕಡಗದಾಳು ನಿವಾಸಿ ಕೊರಗಪ್ಪ ಮತ್ತು ಹೇಮಾ ದಂಪತಿಯ ಪುತ್ರ ರತನ್‌ ಮಡಿಕೇರಿಯ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಮಡಿಕೇರಿಯಿಂದ ದ್ವಿಚಕ್ರ ವಾಹನ ದಲ್ಲಿ ಶನಿವಾರ ತಡರಾತ್ರಿ ಮೈಸೂರಿಗೆ ಬಂದ ಇವರು ಸರಸ್ವತಿಪುರಂನಲ್ಲಿದ್ದ ಸ್ನೇಹಿತನ ಮನೆಗೆ  ಹೊರಟಿದ್ದರು.

ಸವಾರನ ನಿಯಂತ್ರಣ ಕಳೆದುಕೊಂಡ ದ್ವಿಚಕ್ರ ವಾಹನ ಎಸ್‌ಜೆಸಿಇ ಕಾಲೇಜು ಮುಂಭಾಗದ ಬಸ್‌ ತಂಗುದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ವಿ.ವಿ.ಪುರಂ ಸಂಚಾರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
 
ಸರಣಿ ಅಪಘಾತ: ಚಾಲಕ ಸಾವು
ಇಲ್ಲಿನ ರಿಂಗ್‌ ರಸ್ತೆಯ ಭಾರತ್‌ ಕ್ಯಾನ್ಸರ್‌ ಆಸ್ಪತ್ರೆಯ ಬಳಿ ಲಾರಿ–ಟಾಟಾ ಯಸ್‌–ಟಿಪ್ಪರ್‌ ನಡುವೆ ಭಾನುವಾರ ಸಂಜೆ ಸಂಭವಿಸಿದ ಸರಣಿ ಅಪಘಾತದಲ್ಲಿ ನವೀನಕುಮಾರ್‌ (30) ಎಂಬುವರು ಮೃತಪಟ್ಟಿದ್ದಾರೆ.

ಗಾಯಗೊಂಡಿರುವ ಭೋಗಾದಿಯ ರವಿ ಹಾಗೂ ನಾಗಸುಂದರ ಎಂಬುವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕಿನ ಗೌಡಹಳ್ಳಿಯ ನವೀನ ಕುಮಾರ್‌ ಲಾರಿ ಚಾಲಕರಾಗಿದ್ದರು.
 
‘ರೋಡ್‌ ರೋಲರ್‌ ತುಂಬಿಕೊಂಡ ಲಾರಿಯೊಂದು ಹಿನಕಲ್‌ ಜಂಕ್ಷನ್‌ನಿಂದ ಭಾರತ್‌ ಕ್ಯಾನ್ಸರ್‌ ಆಸ್ಪತ್ರೆಯತ್ತ ರಿಂಗ್‌ ರಸ್ತೆಯಲ್ಲಿ  ಸಾಗುತ್ತಿತ್ತು. ಚಾಲಕ ನವೀನ ಕುಮಾರ್ ಅವರ ನಿಯಂತ್ರಣ ಕಳೆದು ಕೊಂಡ ಲಾರಿ ಮುಂದೆ ಹೋಗುತ್ತಿದ್ದ ಟಾಟಾ ಏಸ್‌ ಹಾಗೂ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಅಪ್ಪಳಿಸಿದೆ. 
 
ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ’ ಎಂದು ವಿ.ವಿ.ಪುರಂ ಸಂಚಾರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತ: ನಾಲ್ವರಿಗೆ ಗಾಯ: ಹುಣಸೂರು ರಸ್ತೆಯ ಸೇಂಟ್‌ ಜೋಸೆಫ್‌ ಕಾಲೇಜು ವೃತ್ತದ ಬಳಿ ಟಾಟಾ ಸುಮೊ–ನ್ಯಾನೊ ಕಾರು–ಸ್ವಿಫ್ಟ್‌ ಕಾರಿನ ನಡುವೆ ಭಾನುವಾರ ಸಂಭವಿಸಿದ ಸರಣಿ ಅಪ ಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
 
ಹಿನಕಲ್‌ನ ಶಿವಶಂಕರ್‌, ಕವಿತಾ, ಮಹೇಶ್‌ ಮತ್ತು ಅರ್ಪಿತಾ ಗಾಯ ಗೊಂಡವರು. ಬ್ರೇಕ್‌ ವಿಫಲಗೊಂಡ ಟಾಟಾ ಸುಮೊವೊಂದು ಸಿಗ್ನಲ್‌ನಲ್ಲಿ ನಿಂತಿದ್ದ ನ್ಯಾನೊ ಕಾರಿಗೆ ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ನ್ಯಾನೊ ಕಾರು ಸ್ವಿಫ್ಟ್‌ ಕಾರಿಗೆ ಗುದ್ದಿದೆ. ನ್ಯಾನೊ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿ ದ್ದಾರೆ. ಅಪಘಾತಕ್ಕೆ ಕಾರಣನಾದ ಚಾಲಕ ವಾಹನ ಬಿಟ್ಟು ಪರಾರಿ ಯಾಗಿದ್ದಾನೆ ಎಂದು ವಿ.ವಿ.ಪುರಂ ಸಂಚಾರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.