ADVERTISEMENT

ಕಾರ್ಯಾಚರಣೆ: ಪುಂಡಾನೆ ಸೆರೆ

ಏಳನೇ ಹೊಸಕೋಟೆ ಸುತ್ತ ದಾಂದಲೆ ನಡೆಸುತ್ತಿದ್ದ ಕಾಡಾನೆ: ನಿಟ್ಟುಸಿರು ಬಿಟ್ಟ ಜನತೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 7:23 IST
Last Updated 18 ಜುಲೈ 2017, 7:23 IST
ಸುಂಟಿಕೊಪ್ಪ ಸಮೀಪದ ಆನೆಕಾಡುವಿನಲ್ಲಿ ಸೆರೆ ಸಿಕ್ಕ ಕಾಡಾನೆ
ಸುಂಟಿಕೊಪ್ಪ ಸಮೀಪದ ಆನೆಕಾಡುವಿನಲ್ಲಿ ಸೆರೆ ಸಿಕ್ಕ ಕಾಡಾನೆ   

ಸುಂಟಿಕೊಪ್ಪ/ ಕುಶಾಲನಗರ: ಉತ್ತರ ಕೊಡಗಿನ ಆನೆಕಾಡು ಮೀಸಲು ಅರಣ್ಯ ವಾಪ್ತಿ ಹಾಗೂ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಪುಂಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಯಶಸ್ವಿಯಾದರು.

ಹಲವು ದಿನಗಳಿಂದ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ದಾಂದಲೆ ನಡೆಸಿ, ಬೆಳೆ ನಾಶ ಹಾಗೂ ಮಹಿಳೆಯೊಬ್ಬರ ಸಾವಿಗೆ ಕಾರಣವಾಗಿದ್ದ ಪುಂಡಾನೆಯನ್ನು ಸಾಕಾನೆಗಳೊಂದಿಗೆ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಆನೆಕಾಡುವಿನಲ್ಲಿ ಸೆರೆ ಹಿಡಿದರು.

ಕುಶಾಲನಗರ– ಮಡಿಕೇರಿ ಹೆದ್ದಾರಿಯ ಆನೆಕಾಡು ಅರಣ್ಯದ ಬಳಿ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಒಂಟಿ ಸಲಗವು ಕಾರ್ಯಾಚರಣೆ ತಂಡದ ಕಣ್ಣಿಗೆ ಬಿದ್ದಿದೆ. ವೈದ್ಯ ಡಾ.ಉಮಾಶಂಕರ್ ಅವರ ನೇತೃತ್ವದ ತಂಡವು ಅರಿವಳಿಕೆ ಚುಚ್ಚುಮದ್ದು ತುಂಬಿದ ಗುಂಡು ಹಾರಿಸಿದರು. ಚುಚ್ಚುಮದ್ದು ದೇಹಕ್ಕೆ ಸ್ಪರ್ಶ ಆಗುತ್ತಿದಂತೆಯೇ ಕೋಪಗೊಂಡ ಆನೆ ಸುಮಾರು 2 ಕಿಲೋ ಮೀಟರ್ ದೂರ ಓಡಿ ಹೋಗಿ ಹಳ್ಳವೊಂದರಲ್ಲಿ ಬಿದ್ದಿತು. ಆಗ ಅಭಿಮನ್ಯು, ಕೃಷ್ಣ, ಧನಂಜಯ, ಈಶ್ವರ, ಅಜಯ್, ಕಂಚನ್, ಗಜೇಂದ್ರ ಹೆಸರಿನ ಸಾಕಾನೆಗಳಿಂದ ಕಾಡಾನೆಯನ್ನು ನಿಯಂತ್ರಣಕ್ಕೆ ತಂದು ಹಳ್ಳದಿಂದ ಎಳೆದು ತರಲಾಯಿತು.

ADVERTISEMENT

ಸೆರೆಗೆ ಸೆಣಬಿನ ಹಗ್ಗ ಬಳಕೆ:  ಕಾಡಾನೆಗಳನ್ನು ಪಳಗಿಸುವ ಉದ್ದೇಶದಿಂದ ಸೆರೆ ಹಿಡಿಯುವ ವೇಳೆ ಬಳಸುವ ಹಗ್ಗವನ್ನು ಸೆಣಬಿನಿಂದ ತಯಾರಿಸಿದ ಹಗ್ಗಗಳನ್ನೇ ಬಳಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಚಿನ್ನಪ್ಪ ಮಾಹಿತಿ ನೀಡಿದರು. ಸೆರೆ ಹಿಡಿಯಲ್ಪಟ್ಟ ಈ ಕಾಡಾನೆಯನ್ನು ಬಂಡೀಪುರ ಅರಣ್ಯಕ್ಕೆ ಬಿಡಲಾಗುವುದು ಎಂದು ಹೇಳಿದರು.

ಸೆರೆಯ ಹಿನ್ನೆಲೆ: ಹಲವು ತಿಂಗಳುಗಳಿಂದ ತೊಂಡೂರು, ಹೊಸಕೋಟೆ, ಮಿಟ್ಟ ಹಳ್ಳಸುತ್ತಲಿನಲ್ಲಿ ರಾತ್ರಿ ವೇಳೆ ಈ ಕಾಡಾನೆಯು ಮನೆಯ ಸುತ್ತಲಿನಲ್ಲಿ ಓಡಾಡುತ್ತಾ ದಾಳಿ ನಡೆಸುತ್ತಾ ನೀರಿನ ತೊಟ್ಟಿ, ಡ್ರಮ್‌ಗಳಲ್ಲಿ ತುಂಬಿಸಿದ ನೀರನ್ನು ಕುಡಿದು ಆ ತೊಟ್ಟಿಯನ್ನು ಧ್ವಂಸಗೊಳಿಸಿ ಹೋಗುತ್ತಿತ್ತು.

ಏಪ್ರಿಲ್ 9ರಂದು ಮಿಟ್ನಹಳ್ಳದ ನಿವಾಸಿ ದಿ. ಮಣಿಯವರ ಪತ್ನಿ ಸರೋಜಾ (45) ಅವರು ಬೆಳಗಿನ ಜಾವ ಮನೆಯಿಂದ ಹೊರಬಂದಾಗ ಅವರ ಮೇಲೆ ಏಕಾಏಕಿ ದಾಳಿ ನಡೆಸಿ ಕೊಂದುಹಾಕಿತ್ತು.

ಕಾಡಾನೆಯ ನಿರಂತರ ಪುಂಡಾಟದಿಂದ ರೋಸಿ ಹೋಗಿದ್ದ ಈ ಭಾಗದ ಜನರು ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು.

ಕಾರ್ಯಾಚರಣೆಯಲ್ಲಿ ಸಿಸಿಎಫ್ ಲಿಂಗರಾಜು, ಡಿಎಫ್ಒಗಳಾದ ಸೂರ್ಯಸೇನ್, ಕ್ರಿಸ್ತಕುಮಾರ್, ಡಿಆರ್‌ಎಫ್‌ಗಳಾದ ರಂಜನ್, ಶಿವರಾಮು, ದೇವಿಪ್ರಸಾದ್, ಆನೆಗಳ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.