ADVERTISEMENT

ಕಾವೇರಿ ನದಿ ನೀರಿನಮಟ್ಟ ಏರಿಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 6:43 IST
Last Updated 19 ಸೆಪ್ಟೆಂಬರ್ 2017, 6:43 IST
ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿರುವ ದೃಶ್ಯ ಭಾನುವಾರ ಕಂಡುಬಂತು
ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿರುವ ದೃಶ್ಯ ಭಾನುವಾರ ಕಂಡುಬಂತು   

ಮಡಿಕೇರಿ: ಜಿಲ್ಲೆಯಲ್ಲಿ ಮತ್ತೆ ಮುಂಗಾರು ಆರಂಭವಾದ ವಾತಾವರಣ ಉಂಟಾಗಿದೆ. ಜಿಲ್ಲೆಯ ವಿವಿಧೆಡೆ ಭಾರೀ ಮಳೆ ಸುರಿಯುತ್ತಿದೆ. ವಿರಾಜಪೇಟೆ, ಗೋಣಿಕೊಪ್ಪಲಿನಲ್ಲಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹಲವು ಹಳ್ಳಕೊಳ್ಳಗಳು ಭೋರ್ಗರೆಯುತ್ತಿವೆ. ನದಿಪಾತ್ರದಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಮಡಿಕೇರಿ ಸುತ್ತಮುತ್ತಲೂ ಧಾರಾಕಾರ ಮಳೆಯಾಗುತ್ತಿದೆ. ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 42.56 ಮಿ.ಮೀ ಮಳೆಯ ಪ್ರಮಾಣ ದಾಖಲಾಗಿದೆ.

ಜನವರಿಯಿಂದ ಇಲ್ಲಿಯವರೆಗೆ 1,951.65 ಮಿ.ಮೀ ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,609.26 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ 60.35 ಮಿ.ಮೀ, ವಿರಾಜಪೇಟೆಯಲ್ಲಿ 104.4, ಸೋಮವಾರಪೇಟೆ ತಾಲ್ಲೂಕಿನಲ್ಲಿ 18.8 ಮಿ.ಮೀ ಮಳೆಯಾಗಿದೆ.

ADVERTISEMENT

ಸಿದ್ದಾಪುರ ವರದಿ: ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಕಾವೇರಿ ನದಿ ನೀರಿನಮಟ್ಟ ಪ್ರತಿ ಕ್ಷಣವೂ ಏರಿಕೆ ಆಗುತ್ತಿದೆ. ಭಾನುವಾರ ರಾತ್ರಿ ಕರಡಿಗೋಡು ವ್ಯಾಪ್ತಿಯಲ್ಲಿ ನದಿ ನೀರಿನಲ್ಲಿ ನಾಲ್ಕು ಅಡಿಗಳಷ್ಟು ಹೆಚ್ಚಳ ಕಂಡುಬಂದಿದೆ.

ಸಿದ್ದಾಪುರ, ಪುಲಿಯೇರಿ, ಕಣ್ಣಂಗಾಲ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಪ್ರವಾಹದ ಅಪಾಯವನ್ನು ತಪ್ಪಿಸುವ ಉದ್ದೇಶದಿಂದ ಕರಡಿಗೋಡು ಪ್ರದೇಶಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ರಸ್ತೆಗಿಂತ 3 ಅಡಿ ಅಂತರದಲ್ಲಿ ನದಿ ನೀರು ಹರಿಯುತಿದ್ದು ಭಾಗಮಂಡಲ ವ್ಯಾಪ್ತಿಯಲ್ಲಿ ಹೆಚ್ಚಿಗೆ ಮಳೆಯಾದರೆ ನದಿ ದಡದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಅಧಿಕಾರಿ ಅನಿಲ್‌ ಸೂಚಿಸಿದರು. ಗ್ರಾಮ ಲೆಕ್ಕಿಗ ಮಂಜುನಾಥ್, ಸಹಾಯಕ ಕೃಷ್ಣನ್‌ ಕುಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.