ADVERTISEMENT

ಕೊಡಗಿನಲ್ಲೂ ಮುಂಗಾರಿನ ಅನುಭವ

ಭಾಗಮಂಡಲ ವ್ಯಾಪ್ತಿಯಲ್ಲಿ ಜೋರು ಮಳೆ, ಗಾಳಿ

​ಪ್ರಜಾವಾಣಿ ವಾರ್ತೆ
Published 30 ಮೇ 2018, 12:20 IST
Last Updated 30 ಮೇ 2018, 12:20 IST

ಮಡಿಕೇರಿ: ರಾಜ್ಯಕ್ಕೆ ಮುಂಗಾರು ಪ್ರವೇಶಿಸುತ್ತಿದ್ದಂತೆಯೇ ಮಲೆನಾಡು, ಕಾಫಿ ನಾಡು ಕೊಡಗಿನಲ್ಲೂ ಮಳೆಗಾಲದ ಅನುಭವ ಉಂಟಾಗುತ್ತಿದೆ.

ಮಂಗಳವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 12 ಗಂಟೆಯಿಂದ ಸೋನೆ ಮಳೆ ಆರಂಭಗೊಂಡಿದೆ. ಶೀತ ಗಾಳಿಯು ಮುಂಗಾರು ಮಳೆಯ ಅನುಭವ ನೀಡುತ್ತಿದೆ.

ನಾಪೋಕ್ಲು, ಭಾಗಮಂಡಲ ಹಾಗೂ ತಲಕಾವೇರಿಯಲ್ಲೂ ಬೆಳಿಗ್ಗೆ ಮೋಡ ಕವಿದ ವಾತಾವರಣ ಇತ್ತು. ಬಳಿಕ ಗಾಳಿಯೊಂದಿಗೆ ಮಳೆಯೂ ಬಿರುಸು ಪಡೆಯಿತು. ಮಡಿಕೇರಿ, ಗಾಳಿಬೀಡು, ಮಾದಲ್‌ಪಟ್ಟಿ, ಅಪ್ಪಂಗಳ, ಉಡೋತ್‌ ಮೊಟ್ಟೆ, ತಾಳತ್‌ಮನೆ ವ್ಯಾಪ್ತಿಯಲ್ಲೂ ಜಡಿಮಳೆ ಸುರಿಯಿತು.

ADVERTISEMENT

ಜೂನ್‌ ಮೊದಲ ವಾರದಲ್ಲಿ ಮುಂಗಾರು ರಾಜ್ಯಕ್ಕೆ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಮೇ ಅಂತ್ಯಕ್ಕೆ ಪ್ರವೇಶ ಪಡೆದಿದ್ದು ಭಾರಿ ಮಳೆ ಮುನ್ಸೂಚನೆ ನೀಡಿದೆ.

ಕಳೆದ ಮಳೆಗಾಲ ಮುಗಿದ ಬಳಿಕ ಮೂಲೆ ಸೇರಿದ್ದ ಕೊಡೆ, ರೇನ್‌ಕೋಟ್‌ಗಳು ಮೊದಲ ದಿನ ಮಳೆಗೆ ಹೊರಬಂದಿವೆ. ಮಂಗಳವಾರ ಸಂಜೆಯೂ ನಗರದಲ್ಲಿ ಜಿಟಿಜಿಟಿ ಮಳೆ ಸುರಿದ ಪರಿಣಾಮವಾಗಿ, ಶಾಲಾ ಮಕ್ಕಳು ತೊಯ್ದುಕೊಂಡೇ ಮನೆಯತ್ತ ಹೆಜ್ಜೆ ಹಾಕಿದರು. ರಾಜಾಸೀಟ್‌, ಅಬ್ಬಿ ಜಲಪಾತದಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗಿತ್ತು. ಜಿಟಿಜಿಟಿ ಮಳೆ, ಮಳೆಯ ಬಳಿಕ ಆವರಿಸುತ್ತಿದ್ದ ಮಂಜಿನ ಮಜಾವನ್ನು ಸಾವಿರಾರು ಸಂಖ್ಯೆಯ ಪ್ರವಾಸಿಗರು ಅನುಭವಿಸಿದರು.

ರೈತಾಪಿ ವರ್ಗದಲ್ಲಿ ಹರ್ಷ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯೇ ಈ ಬಾರಿ ಅಬ್ಬರಿಸಿತ್ತು. ಮುಂಗಾರು ಮಳೆಯು ಉತ್ತಮವಾಗಿ ಸುರಿದರೆ ಕಾಫಿ ತೋಟಕ್ಕೆ ಅನುಕೂಲವಾಗಲಿದೆ ಎಂದು ರೈತರು ಹರ್ಷದಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.