ADVERTISEMENT

ಗಮನಸೆಳೆದ ವೈವಿಧ್ಯಮಯ ಚಟುವಟಿಕೆ

ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಇಂಟರ್‍ಯಾಕ್ಟ್‌ ಕ್ಲಬ್‌ನಿಂದ ವಿವಿಧ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 7:16 IST
Last Updated 11 ಮಾರ್ಚ್ 2017, 7:16 IST
ನಾಪೋಕ್ಲು:  ಶಾಲಾ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ, ಆರೋಗ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಇಂಟರ್‍ಯಾಕ್ಟ್‌ ಕ್ಲಬ್‌ ಸ್ಥಳೀಯ ಶಾಲೆಯಲ್ಲಿ ಕಾರ್ಯೋನ್ಮುಖವಾಗಿದ್ದು ವೈವಿಧ್ಯಮಯ ಕಾರ್ಯಕ್ರಮಗಳಿಂದ ಗಮನಸೆಳೆದಿದೆ.
 
ಈ ಇಂಟರ್‍ಯಾಕ್ಟ್‌ ಕ್ಲಬ್‌ನ ಹತ್ತಾರು ಚಟುವಟಿಕೆಗಳು ಸಮಾಜಮುಖಿಯಾಗಿವೆ. ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಇಂಟರ್‍ಯಾಕ್ಟ್‌ ಕ್ಲಬ್‌ ಘಟಕಗಳಿದ್ದರೂ ಇಲ್ಲಿನ ಶ್ರೀರಾಮ ಟ್ರಸ್ಟ್‌ ವಿದ್ಯಾಸಂಸ್ಥೆಯಲ್ಲಿನ ಘಟಕ ಸಕ್ರಿಯವಾಗಿದ್ದು ಎಂಟು     ವರ್ಷಗಳಿಂದ ನಿರಂತರವಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಶಾಲೆಯ ಕನ್ನಡ ಅಧ್ಯಾಪಕಿ ಸುಬ್ಬಮ್ಮ ಸಂಚಾಲಕಿಯಾಗಿ ಕ್ಲಬ್‌ ನೇತೃತ್ವ ವಹಿಸಿದ್ದಾರೆ.
 
ಮಡಿಕೇರಿಯ ರೋಟರಿ ಮಿಸ್ಟಿಹಿಲ್ಸ್‌ನ ಅಂಗ ಸಂಸ್ಥೆಯಾದ ಇಂಟರ್‍ಯಾಕ್ಟ್‌ ಕ್ಲಬ್‌ನಲ್ಲಿ ಶಾಲೆಯ 14–16 ವಯಸ್ಸಿನ ವಿದ್ಯಾರ್ಥಿಗಳು ಸದಸ್ಯರಾಗಿದ್ದಾರೆ. ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳು ವಾರ್ಷಿಕ ₹ 50 ಪಾವತಿಸಿ ಹಾಗೂ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ₹ 40 ಪಾವತಿಸಿ ಸದಸ್ಯರಾಗಿದ್ದಾರೆ. ಆರಂಭದಲ್ಲಿ 30–40 ವಿದ್ಯಾರ್ಥಿಗಳು ಕ್ಲಬ್‌ ಸದಸ್ಯರಾಗಿದ್ದರೆ, ಪ್ರಸಕ್ತ ಆ ಸಂಖ್ಯೆ 84ಕ್ಕೆ ಏರಿದೆ.
 
ಈ ಸದಸ್ಯರನ್ನು ಇಂಟರ್‍ಯಾಕ್ಟರ್‌ ಎಂದು ಕರೆಯುತ್ತಾರೆ. ಸಾಂಸ್ಕೃತಿಕ ಆರೋಗ್ಯ ಕಾರ್ಯಕ್ರಮಗಳಲ್ಲದೆ ರೋಗಿಗಳಿಗೆ ನೆರವು, ಸಾಧಕರಿಗೆ ಪುರಸ್ಕಾರ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಮಾರ್ಗದರ್ಶನ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸದಸ್ಯರಿಂದ ಸದಸ್ಯತ್ವ ಶುಲ್ಕವಲ್ಲದೆ ಸಾಧನೆ ಮಾಡಿದ ವಿದ್ಯಾರ್ಥಿಗಳು ಅಥವಾ ಅವರ ಕುಟುಂಬದವರು ನೀಡಿದ ದೇಣಿಗೆಯನ್ನು ಸನ್‌ಶೈನ್‌ ಸಂಗ್ರಹ ಎಂದು ಪರಿಗಣಿಸಿ ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.
 
ಇಂಟರ್‍ಯಾಕ್ಟ್‌ ಕ್ಲಬ್‌ಗೆ ಮಿಸ್ಟಿಹಿಲ್ಸ್‌ನ ವತಿಯಿಂದಲೂ ಆರ್ಥಿಕ ನೆರವು ಲಭ್ಯ. ರೋಟರಿ ಮಿಸ್ಟಿ ಹಿಲ್ಸ್‌ನ ಹಿಂದಿನ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಶಾಲೆಗೆ ಇಂಟರ್‍ಯಾಕ್ಟ್‌ ಕ್ಲಬ್‌ನ ಚಟುವಟಿಕೆಗಳನ್ನು ಪರಿಚಯಿಸಿದ್ದು ಮತ್ತೋರ್ವ ಅಧ್ಯಕ್ಷ ಡಾ.ಪ್ರಶಾಂತ್‌ ಸಾಕಷ್ಟು ನೆರವನ್ನು ನೀಡಿದ್ದಾರೆ ಎಂದು ಸಂಚಾಲಕಿ ಸುಬ್ಬಮ್ಮ ಸ್ಮರಿಸಿಕೊಳ್ಳುತ್ತಾರೆ. 
 
ಮಿಸ್ಟಿ ಹಿಲ್ಸ್‌ನ ವತಿಯಿಂದ ಶಾಲೆಗೂ ಅಧಿಕ ಪ್ರಮಾಣದ ನೆರವು ಲಭಿಸಿದೆ. ಸದಸ್ಯರು ಗ್ರೀಟಿಂಗ್‌ ಕಾರ್ಡ್‌, ಕವರ್‍ಸ್‌  ತಯಾರಿಸಿ ಮಾರಾಟ ಮಾಡಿ ಕ್ಲಬ್‌ನ ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸಿದ್ದಾರೆ. 
 
ರೋಟರಿ ಮಿಸ್ಟಿ ಹಿಲ್ಸ್‌ ಇಂಟರ್‍ಯಾಕ್ಟ್‌ ಕ್ಲಬ್‌ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಮುಳಿಯ ಫೌಂಡೇಷನ್‌ ವತಿಯಿಂದ ಮಾರ್ಚ್‌ 13ರಂದು ಸಚ್ಛ ಭಾರತ ಅಭಿಯಾನ ಕುರಿತ ಸ್ವಚ್ಛ ನಾಪೋಕ್ಲು ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.

ಸ್ಥಳೀಯ ಶಾಲೆಗಳ ಸಹಯೋಗದೊಂದಿಗೆ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್‌ ಪುನರ್‌ಬಳಕೆ, ಮಕ್ಕಳಲ್ಲಿ ಸ್ವಚ್ಛ ಭಾರತ ಅರಿವು, ಶೇ 100 ಘನತ್ಯಾಜ್ಯ ನಿರ್ವಹಣೆ, ಕುರಿತು ಮಾಹಿತಿ, ಭೂತಾಯಿಯನ್ನು ಕಸದಿಂದ ಕಾಪಾಡುವ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
 
ಮನರಂಜನೀಯ ಸ್ಪರ್ಧೆಗಳು
ನಾಪೋಕ್ಲು:
  ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ, ಆರೋಗ್ಯ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜತೆಗೆ ಇಂಟರ್‍ಯಾಕ್ಟರ್‌ಗಳಿಗೆ ಮನರಂಜನಾ ಆಟಗಳು ಹಾಗೂ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕ್ಲಬ್‌ನ ಲೆಕ್ಕಪತ್ರಗಳನ್ನು ಸಂಪೂರ್ಣವಾಗಿ ಮಕ್ಕಳೇ ನಿರ್ವಹಿಸುತ್ತಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಮಕ್ಕಳನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಸಂಸ್ಥೆ ಇದಾಗಿದೆ ಎಂದು ಇಂಟರ್‍ಯಾಕ್ಟ್‌ ಕ್ಲಬ್ ಸಂಚಾಲಕಿ ಟಿ.ಆರ್‌. ಸುಬ್ಬಮ್ಮ ಸ್ಮರಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.