ADVERTISEMENT

ಜಿಲ್ಲೆಯ ವಿವಿಧೆಡೆ ‘ಕೈಲ್‌ ಪೊಳ್ದ್‌’ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 7:25 IST
Last Updated 2 ಸೆಪ್ಟೆಂಬರ್ 2017, 7:25 IST

ಮಡಿಕೇರಿ: ಜಿಲ್ಲೆಯ ವಿವಿಧೆಡೆಗಳಲ್ಲಿ ಶುಕ್ರವಾರವೇ ಕೊಡಗಿನ ಸಾಂಪ್ರದಾ ಯಿಕ ಹಬ್ಬಗಳಲ್ಲಿ ಒಂದಾಗಿರುವ ‘ಕೈಲ್‌ ಪೊಳ್ದ್’ ಅನ್ನು ಆಚರಿಸಲಾಯಿತು. ಕಾಲೂರು, ಗಾಳಿಬೀಡು, ಭಾಗಮಂಡಲ, ಕಕ್ಕಬ್ಬೆ, ನಾಪೋಕ್ಲು ಭಾಗದಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತು. ನಗರದಲ್ಲಿ ಕೊಡವ ನ್ಯಾಷನಲ್‌ ಕೌನ್ಸಿಲ್‌ ವತಿಯಿಂದ ಹಬ್ಬವನ್ನು ಆಚರಿಸಲಾಯಿತು.

ಉಳಿದ ಭಾಗಗಳಲ್ಲಿ ಶನಿವಾರ ಹಾಗೂ ಭಾನುವಾರ ‘ಕೈಲ್‌ ಪೊಳ್ದ್‌’ ನಡೆಯಲಿದೆ. ಸಿಎನ್‌ಸಿ ಆಶ್ರಯದಲ್ಲಿ ನಡೆದ 22ನೇ ವರ್ಷದ ಆಚರಣೆಯಲ್ಲಿ ವಾಹನ ರ್‍ಯಾಲಿ, ಪರಿಕರಗಳಿಗೆ ಪೂಜೆ, ತೆಂಗಿನಕಾಯಿಗೆ ಬಂದೂಕಿನಿಂದ ಗುಂಡು ಹೊಡೆಯಲಾಯಿತು.

ನಗರದ ಜೂನಿಯರ್ ಕಾಲೇಜು ಬಳಿಯ ಮಂದ್‌ನಲ್ಲಿ ಕೃಷಿ ಉಪಕರಣಗಳಾದ ನೇಂಗಿ ನೊಗ, ತಮಿ ತಾವೆ, ಬೊಳ್ಳಂಗಿ ಮತ್ತು ಆಯುಧಗಳಾದ ಒಡಿ ಕತ್ತಿ– -ಪೀಚೆ ಕತ್ತಿ, ತೋಕ್ (ಬಂದೂಕ)ಗಳಿಗೆ ಸಾರ್ವತ್ರಿಕ ಪೂಜೆ ಸಲ್ಲಿಸಿದರು. ಜನಪದೀಯ ಕ್ರೀಡೆಗಳನ್ನು ನಡೆಸಿ, ಸಾಮೂಹಿಕ ಭೋಜನ ಸವಿಯಲಾಯಿತು.

ADVERTISEMENT

ಕೌನ್ಸಿಲ್‌ ಅಧ್ಯಕ್ಷ ಎನ್‌.ಯು. ನಾಚಪ್ಪ, ‘ಕೊಡವರಿಗೆ ಬುಟ್ಟಕಟ್ಟು ಮಾನ್ಯತೆ ನೀಡಬೇಕು. ಜಿಲ್ಲೆಯಲ್ಲಿ ಶ್ರೀಮಂತ ನಾಗರಿಕತೆ, ಸಮೃದ್ಧ ಇತಿಹಾಸವಿದೆ. ಕೊಡಗಿನ ಜನಪದೀಯ ಕ್ರೀಡೆ ಹಾಗೂ ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೂ ಉಳಿಸಬೇಕು’ ಎಂದು ಕರೆ ನೀಡಿದರು.

ಕಾರೋಣ ಪಾಟನ್ನು ನಂದಿನೆರ ವಂಡ ನಿಶ ಅಚ್ಚಯ್ಯ ನೆರವೇರಿಸಿದರು. ಕಲಿಯಂಡ ಪ್ರಕಾಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಕಾಟುಮಣಿಯಂಡ ಉಮೇಶ್, ಮದ್ರಿರ ಕರುಂಬಯ್ಯ, ಜಮ್ಮಡ ಮೋಹನ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಅರೆಯಡ ರತ್ನ, ಚಂಬಂಡ ಜನತ್, ಪುಲ್ಲೆರ ಕಾಳಪ್ಪ, ಪುಲ್ಲೆರ ಸ್ವಾತಿ, ಅಪ್ಪಚ್ಚಿರ ರೀನಾ ಬಲ್ಲಚಂಡ ಟಿಟ್ಟು, ಬಲ್ಲಚಂಡ ಸುನಿಲ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.