ADVERTISEMENT

ದಾರಿ ಬಂದ್‌: ಹಾಡಿ ವಾಸಿಗಳಿಗೆ ಗೋಳು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 10:12 IST
Last Updated 23 ಏಪ್ರಿಲ್ 2017, 10:12 IST

ಮಡಿಕೇರಿ:  ತಾಲ್ಲೂಕಿನ ಕುಂಜಿಲ– ಕಕ್ಕಬ್ಬೆ ಬಳಿಯ ನಿರ್ಮಾಣಗೊಂಡಿರುವ ಪ್ರತಿಷ್ಠಿತ ರೆಸಾರ್ಟ್‌ ಆಡಳಿತ ಮಂಡಳಿಯು ದಾರಿ ಬಂದ್‌ ಮಾಡಿ ಅಲ್ಲಿನ ಮೂಲ ಹಾಡಿ ನಿವಾಸಿಗಳಿಗೆ ತೊಂದರೆ ನೀಡುತ್ತಿದೆ ಎಂದು ಕೊಡಗು ಜಿಲ್ಲಾ ಕಾವೇರಿ ಸೇನೆಯ ಸಂಚಾಲಕ ಕೆ.ಎ. ರವಿಚೆಂಗಪ್ಪ ಆರೋಪಿಸಿದರು.ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲ್ಲೂಕಿನ ಕುಂಜಿಲ–ಕಕ್ಕಬೆ ಗ್ರಾಮ ಪಂಚಾಯಿತಿ ಬಳಿಯಲ್ಲಿ ಖಾಸಗಿ ರೆಸಾರ್ಟ್ ಹತ್ತಿರದ ಯವಹಪಾಡಿ ಬೆಟ್ಟದಲ್ಲಿ ಸಾಕಷ್ಟು ವರ್ಷಗಳಿಂದ ವಾಸವಾಗಿರುವ ಹಾಡಿ ಜನರು ನೂರಾರು ವರ್ಷಗಳಿಂದ ನಿತ್ಯವು ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಆದರೆ, ಕೆಲವು ವರ್ಷಗಳ ಹಿಂದೆ ಈ ದಾರಿಯನ್ನೇ ರೆಸಾರ್ಟ್‌ ಆಡಳಿತ ಮಂಡಳಿ ಬಂದ್ ಮಾಡುವ ಮೂಲಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದರು.

ಈ ಹಾಡಿಯಲ್ಲಿ ಅಂದಾಜು 300 ಕುಟುಂಬಗಳ ನೆಲೆಸಿವೆ. ಹಾಡಿ ನಿವಾಸಿಗಗಳು ನೂರಾರು ವರ್ಷಗಳಿಂದ ಕೂಲಿ ಕೆಲಸ, ನಗರದ ಪ್ರದೇಶಕ್ಕೆ ತೆರಳಲು, ತೋಟ, ಗದ್ದೆಗೆ ತೆರಳಲು ಅದೇ ರಸ್ತೆಯನ್ನು ಅವಲಂಬಿಸಿದ್ದರು. ಶಾಲಾ ಮಕ್ಕಳು ಶಾಲೆಗೆ ತೆರಳಲು ಇದೇ ಮಾರ್ಗದಲ್ಲಿ ಹೋಗುತ್ತಿದ್ದರು. ಆದರೆ, ಕಳೆದ ವರ್ಷ ಬೇಲಿ ಹಾಕಿ ರಸ್ತೆ ಬಂದ್‌ ಮಾಡುವ ಮೂಲಕ ರೆಸಾರ್ಟ್‌ ದ್ರೋಹ ಎಸಗಿದೆ. ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿ, ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ ಎಂದು ದೂರಿದರು.

ಬದಲಾದ ನಕ್ಷೆ: ಈ ಹಿಂದೆ ಜಿಲ್ಲಾಡಳಿತವು ಸರ್ವೇ ನಡೆಸಿ ಬೇಲು ತೆರವು ಮಾಡಲು ಮುಂದಾಗಿತ್ತು. ಆ ವೇಳೆಗೆ ರೆಸಾರ್ಟ್‌ ಆಡಳಿತ ಮಂಡಳಿಯವರು ನಕ್ಷೆಯನ್ನೇ ಬದಲಾವಣೆ ಮಾಡಿದ್ದರು. ಐದು ವರ್ಷದಲ್ಲಿ ಮೂರು ಬಾರಿ ಸರ್ವೇ ಕಾರ್ಯ ಮಾಡಲಾಗಿದೆ. ಈ ವೇಳೆ ನಕ್ಷೆಯನ್ನೇ ಬದಲಾವಣೆ ಮಾಡಿ ಆಡಳಿತ ಮಂಡಳಿ ತೋರಿಸಲು ಯಶಸ್ವಿಯಾಗಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದರು.

ADVERTISEMENT

ಸತ್ಯಾನ್ವೇಷಣೆ ಸಮಿತಿಯ ಮುಖಂಡ ಕೇಟೋಳಿರ ಸನ್ನಿ ಸೋಮಣ್ಣ ಮಾತನಾಡಿ, ಮೂಲ ನಿವಾಸಿಗಳಾದ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಸುಮಾರು 6 ತಿಂಗಳಿನಿಂದ ದಾರಿಯನ್ನು ತಡೆಗಟ್ಟಿದ್ದಾರೆ. ಈ ಬಗ್ಗೆ ಹಾಡಿ ಜನರು ಪ್ರಶ್ನಿಸಿದ್ದಲ್ಲಿ ಬೆದರಿಕೆ ಹಾಕಲಾಗುತ್ತಿದೆ. ದಾರಿಯ ಮಧ್ಯದಲ್ಲೇ ರೆಸಾರ್ಟ್‌ನವರು ಕಟ್ಟಡ, ಗೇಟ್‌ ನಿರ್ಮಿಸಿರುವುದು ದುರಂತ. ಅವರನ್ನು ಯಾರೂ ಪ್ರಶ್ನಿಸುವಂತಿಲ್ಲ. ಹಾಡಿ ಜನರೇ ಹೆಚ್ಚಾಗಿ ನೆಲೆಸಿರುವ ಕಾರಣ ತೀವ್ರ ತೊಂದರೆ ಉಂಟಾಗಿದೆ. ಮುಗ್ಧ ಜನರು ಪ್ರಶ್ನೆ ಮಾಡದೇ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ನೋವು ತೋಡಿಕೊಂಡರು.

ಈ ಹಿಂದೆ ಗ್ರಾಮ ಪಂಚಾಯಿತಿಗೆ ರಸ್ತೆ ಅಭಿವೃದ್ಧಿಗೆ ಬಂದ ಅನುದಾನವನ್ನು ಬಳಕೆ ಮಾಡಿಕೊಳ್ಳಲು ವಿಫಲವಾಗಿರುವುದೇ ಈ ಸಮಸ್ಯೆ ಉದ್ಭವಿಸಲು ಕಾರಣವಾಗಿದೆ. ಜಿಲ್ಲಾಡಳಿತ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ ಹಾಡಿ ಜನರಿಗೆ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.ಹಾಡಿಯ ನಿವಾಸಿ ಚಾತ ಮಾತನಾಡಿ, ಹಾಡಿಯ ಜನರು ಸಂಚರಿಸುವ ಮಾರ್ಗದಲ್ಲಿ  ನಿತ್ಯವೂ ಶೋಷಣೆ ಉಂಟಾಗುತ್ತಿದೆ. ಕಾನೂನು ಬಾಹಿರವಾಗಿ ನಮ್ಮನ್ನು ಗೇಟ್‌ನಲ್ಲೇ ತಡೆಯಲಾಗುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಹಾಡಿಯರ ಮಣಿ, ಸುಂದರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.