ADVERTISEMENT

ದಿಡ್ಡಳ್ಳಿಯಲ್ಲಿ ಗುಂಡಿನ ದಾಳಿಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 6:26 IST
Last Updated 13 ಏಪ್ರಿಲ್ 2017, 6:26 IST

ಮಡಿಕೇರಿ:  ದಿಡ್ಡಳ್ಳಿ ನಿರಾಶ್ರಿತರ ಗುಡಿಸಲಿನ ಮೇಲೆ ಗುಂಡಿನ ದಾಳಿ ನಡೆಸಿರುವುದು ಅತ್ಯಂತ ಖಂಡನೀಯ ವಾದದ್ದು. ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಎಸ್‌ಡಿ ಪಿಐ ಜಿಲ್ಲಾ ಅಧ್ಯಕ್ಷ ಅಮೀನ್‌ ಮೊಹಿಸಿನ್‌ ಎಚ್ಚರಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಹಿಂದೆಯೂ ದಿಡ್ಡಳ್ಳಿ ನಿರಾಶ್ರಿತರ ವಿರುದ್ಧ ತಟ್ಟಳ್ಳಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡ ಲಾಗಿತ್ತು. ಅದೇ ವಿರೋಧಿಗಳು ದಿಡ್ಡ ಳ್ಳಿಯ ನಿರಾಶ್ರಿತರು ಸ್ಥಳ ಬಿಟ್ಟು ಬೇರೆಡೆಗೆ ಹೋಗಲಿ ಎಂಬ ಕಾರಣಕ್ಕೆ ಗುಂಡು ಹಾರಿಸಿದ್ದಾರೆ. ಆಗದವರು ಇಂತಹ ಕೃತ್ಯ ನಡೆಸುತ್ತಿದ್ದಾರೆ. ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕು. ಕಾಫಿ ತೋಟ ಗಳಿಂದ ಸ್ವಾತಂತ್ರ್ಯ ಬಯಸಿ ಹೊರ ಬಂದವರ ಮೇಲೆ ಪದೇಪದೇ ದೌರ್ಜನ್ಯ ಎಸಗಲಾಗುತ್ತಿದೆ ಎಂದು ದೂರಿದರು.

ದಿಡ್ಡಳ್ಳಿ ಆದಿವಾಸಿಗಳ ಹೋರಾಟ ದಿನದಿಂದ ದಿನಕ್ಕೆ ಯಶಸ್ವಿ ಆಗುತ್ತಿದ್ದು, ಇದನ್ನು ಸಹಿಲಾಗದವರು ಇಂತಹ ಕೃತ್ಯಕ್ಕೆ ಕೈಹಾಕುತ್ತಿದ್ದಾರೆ. ಪೊಲೀಸರು ಕೂಡಲೇ ಸಮಗ್ರ ತನಿಖೆ ನೆಸಬೇಕು ಎಂದು ಆಗ್ರಹಿಸಿದರು.

ADVERTISEMENT

ಬೆಂಗಳೂರಿನಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖ ದಲ್ಲಿ ನಡೆದ ಸಭೆಯೂ ಯಶಸ್ವಿಯೂ ಆಗಿದೆ. ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಅರಣ್ಯ ಸಚಿವ ರಮಾನಾಥ್‌ ರೈ ಇದೇ 17 ಹಾಗೂ 18ರಂದು ಕೊಡಗು ಜಿಲ್ಲೆಗೆ ಆಗಮಿಸಿ ನಿರಾಶ್ರಿತರ ಸಮಸ್ಯೆ ಆಲಿಸಿ ಅಂತಿಮ ಪರಿಹಾರ ಹುಡುಕಲಿದ್ದಾರೆ. ನಮ್ಮ ಎಲ್ಲ ದಾಖಲೆಗಳನ್ನು ಮುಖ್ಯ ಮಂತ್ರಿಗೆ ಹಸ್ತಾಂತರ ಮಾಡಿದ್ದೇವೆ. ಅಧಿಕಾರಿಗಳು ಮೀಸಲು ಅರಣ್ಯ ಎಂಬುದನ್ನು ಸಾಬೀತು ಪಡಿಸಲು ವಿಫಲವಾಗಿದ್ದಾರೆ. ಪೈಸಾರಿ ಎಂಬುದಕ್ಕೆ ಎಲ್ಲ ದಾಖಲೆಗಳನ್ನು ನಾವು ಪ್ರಸ್ತುತ ಪಡಿಸಿದ್ದೇವೆ ಎಂದು ಅಮೀನ್‌ ಹೇಳಿದರು.

ಅರಣ್ಯ ಪ್ರದೇಶ ಅಲ್ಲದಿದ್ದರೆ 8 ದಿನಗಳ ಒಳಗಾಗಿ ಹಕ್ಕುಪತ್ರ ನೀಡುವು ದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದ್ದಾರೆ. ಅರಣ್ಯ ಪ್ರದೇಶವಾಗಿದ್ದರೆ ಬೇರೆಡೆ ಪ್ರತಿ ಕುಟುಂಬಕ್ಕೆ ಮೂರು ಎಕರೆ ಭೂಮಿ ನೀಡುವುದಾಗಿ ಹೇಳಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಬಣ್ಣಿಸಿದರು.

ಕೊಡಗು ಜಿಲ್ಲೆಯ ಕೆಲವು ಕಾಫಿ ತೋಟಗಳಲ್ಲಿ ಜೀತ ಪದ್ಧತಿ ಇರುವುದಾಗಿ ಸರ್ಕಾರದ ಗಮನ ಸೆಳೆಯಲಾಯಿತು. ಜೀತ ಪದ್ಧತಿ ನಾಚಿಕೆಗೇಡು ಎಂದು ಕಂದಾಯ ಸಚಿವರೇ ವಿಷಾದಿಸಿದ್ದಾರೆ. ಆದರೆ, ಶಾಸಕ ಕೆ.ಜಿ. ಬೋಪಯ್ಯ ಅವರು ಕೊಡಗಿನಲ್ಲಿ ಜೀತ ಪದ್ಧತಿಯೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ರೀತಿಯ ಹೇಳಿಕೆ ಕೊಟ್ಟರೆ ಬಡವರು ದೂರು ನೀಡಲು ಮುಂದೆ ಬರುವುದಿಲ್ಲ ಎಂದು ಹೇಳಿದರು.

ಕೊಡಗಿನಲ್ಲಿ 1 ಲಕ್ಷ ಎಕರೆಯನ್ನು ಅರಣ್ಯ ಬೆಳೆಸಲು ಸಿ ಅಂಡ್‌ ಡಿ ಭೂಮಿಯನ್ನು ಅರಣ್ಯ ಇಲಾಖೆ ಹಸ್ತಾಂತರ ಮಾಡಲಾಗಿತ್ತು. ಆದರೆ, ಇಲಾಖೆ ಅರಣ್ಯವನ್ನೇ ಬೆಳೆಸಿಲ್ಲ. ಇದನ್ನು ವಾಪಸ್‌ ಪಡೆದು ಭೂಮಿ ರಹಿತರಿಗೆ ಹಂಚಿಕೆ ಮಾಡಲು ಮನವಿ ಮಾಡ ಲಾಗಿದೆ ಎಂದು ಮಾಹಿತಿ ನೀಡಿದರು.

ಪಾಲೇಮಾಡು ಮೊಣ್ಣಪ್ಪ ಮಾತನಾಡಿ, ‘ರಾಜ್ಯ ಸರ್ಕಾರದ ಆದೇಶವನ್ನು ಕೊಡಗು ಜಿಲ್ಲಾಡಳಿತ ಪಾಲನೆ ಮಾಡುತ್ತಿಲ್ಲ. ಇದನ್ನೂ ಸಹ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ. ಕೊಡಗು ಜಿಲ್ಲಾಡಳಿತಕ್ಕೆ ಬಡವರ ಬಗ್ಗೆ ಕಾಳಜಿಯೇ ಇಲ್ಲ. ಮುಖ್ಯಮಂತ್ರಿ ಸಭೆ ನಡೆಸುವುದು ಗೊತ್ತಿದ್ದರೂ ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ರಜೆ ಮೇಲೆ ತೆರಳಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ ಅವರು ಸಭೆಗೆ ಬಂದಿರಲಿಲ್ಲ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಆದಿವಾಸಿ ಮುಖಂಡ ಸ್ವಾಮಿ, ಕೆ.ಎ.ಷರೀಫ್‌, ಬಿ.ಕೆ. ಅಪ್ಪು ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.