ADVERTISEMENT

ದುಬೈನಲ್ಲಿ ಕೊಡಗಿನ ಕ್ರೀಡಾಪಟುಗಳ ಪಾರಮ್ಯ

ದುಬೈ– ಕೂರ್ಗ್ ಸ್ಪೋರ್ಟ್ಸ್ ಕ್ಲಬ್‌ ಆಶ್ರಯದಲ್ಲಿ ನಡೆದ ಈದ್ ಮೀಟ್ ಕ್ರೀಡಾಕೂಟ

ಹೇಮಂತಕುಮಾರ್ ಎಂ.ಎನ್‌
Published 20 ಜುಲೈ 2017, 9:52 IST
Last Updated 20 ಜುಲೈ 2017, 9:52 IST

ವಿರಾಜಪೇಟೆ: ಜಾತಿ– ಧರ್ಮದ ಹಂಗು ತೊರೆದ ಕೊಡಗಿನವರಾದ ಅನಿವಾಸಿ ಭಾರತೀಯರು ಪರಸ್ಪರ ಒಂದಾಗಿ ಬೆರೆತು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದುಬೈನಲ್ಲಿ ತಾಯ್ನಾಡಿನ ಕಂಪು ಪಸರಿಸಿದರು.

ಹೌದು... ಉದ್ಯೋಗ ನಿಮಿತ್ತ ದುಬೈ ಯಲ್ಲಿ ನೆಲೆಸಿರುವ ಜಿಲ್ಲೆಯ ಅನಿವಾಸಿ ಭಾರತೀಯರು ರಂಜಾನ್ ಅಂಗವಾಗಿ ಈಚೆಗೆ ಈದ್ ಮೀಟ್ ಕೊಡಗು ಕ್ರೀಡಾಕೂಟ ನಡೆಸಿದರು. ದುಬೈ ಕೂರ್ಗ್ ಸ್ಪೋರ್ಟ್ಸ್ ಕ್ಲಬ್‌ ಆಶ್ರಯದಲ್ಲಿ ಯುಎಇ ಕೊಡಗು ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ದುಬೈಯ ಶೇಕ್ ಜಾಹೇದ್ ರಸ್ತೆಯಲ್ಲಿರುವ ಅಲ್ಕೂಸ್ ಡೆಲ್ಕೊ ಹೊನಲು– ಬೆಳಕಿನ ಕ್ರೀಡಾಕೂಟ ನಡೆಯಿತು.

ಕ್ರೀಡಾಕೂಟಕ್ಕೆ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ ಕೊಡಗಿನವರು ದೂರದ ದುಬೈನಲ್ಲಿ ತಾಯ್ನಾಡಿನ ಸ್ನೇಹಿತರನ್ನು ಕಂಡು ಸಂಭ್ರಮಿಸಿದರು.

ADVERTISEMENT

ಹಲವು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಪರಸ್ಪರ ಭೇಟಿಯಾಗಿದ್ದ ಒಡನಾಡಿಗಳು ಪರದೇಶದಲ್ಲಿ ಭೇಟಿಯಾದರು. ದಿನನಿತ್ಯ ಜಂಜಾಟದ ನಡುವೆ ಭೇಟಿಯಾದ ಕೊಡಗಿನವರು ಜಾತಿ– ಧರ್ಮ ಮರೆತು ಪರಸ್ಪರ ಬಾಂಧವ್ಯ ವೃದ್ಧಿಸಿಕೊಂಡು ಸಂಭ್ರಮಿಸಲು ಕ್ರೀಡಾಕೂಟ ವೇದಿಕೆಯಾಯಿತು.

ಈದ್‌ ಮೀಟ್‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಡಂಗ ಸಿಟಿ ಬಾಯ್ಸ್ ತಂಡ ಚಾಂಪಿಯನ್‌ ಹಾಗೂ ಚಾಮಿ ಯಾಲದ ಎಸ್‌ವೈಸಿ ತಂಡ ರನ್ನರ್ಸ್ ಪ್ರಶಸ್ತಿ ಪಡೆಯಿತು.

ಫುಟ್‌ಬಾಲ್ ಪಂದ್ಯದಲ್ಲಿ ಕುಂಜಿಲದ ಪಯನರಿ ಫ್ರೆಂಡ್ಸ್ ತಂಡ ಪ್ರಶಸ್ತಿ ಪಡೆದರೆ, ಚೆರಿಯ ಪರಂಬು ಫ್ರೆಂಡ್ಸ್ ತಂಡ 2ನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು. ವಾಲಿಬಾಲ್‌ನಲ್ಲಿ ಗುಂಡಿಗೆರೆ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆದರೆ, ಚೆರಿಯಪರಂಬು ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

100 ಮೀ. ಓಟದ ಸ್ಪರ್ಧೆಯಲ್ಲಿ ಕಡಂಗದ ನಿವಾಸಿ ಜಲೀಲ್ ಮೊದಲ ಸ್ಥಾನ, ಗುಂಡಿಗೆರೆಯ ಸೂಫಿಯಾನ್ ದ್ವಿತೀಯ ಹಾಗೂ ವಿರಾಜಪೇಟೆಯ ನೂರುದ್ದೀನ್ ತೃತೀಯ ಸ್ಥಾನ ಪಡೆದರು. 400 ಮೀ. ಓಟದ ಸ್ಪರ್ಧೆಯಲ್ಲಿ ಕಡಂಗದ ಜಲೀಲ್ ಪ್ರಥಮ, ಗುಂಡಿಗೆರೆಯ ಸುಫಿಯಾನ್ ದ್ವಿತೀಯ ಹಾಗೂ ಗುಂಡಿಗೆರೆಯ ಮಹಮ್ಮದ್ ಆಲಿ ತೃತೀಯ ಸ್ಥಾನ ಪಡೆದುಕೊಂಡರು.

ಬಹುಮಾನ ವಿತರಣಾ ಸಮಾರಂಭ ದಲ್ಲಿ ಮಾತನಾಡಿದ ದುಬೈ ಕೂರ್ಗ್ ಸ್ಪೋರ್ಟ್ಸ್ ಕ್ಲಬ್‌ ಪದಾಧಿಕಾರಿ ಕುಂಜಿಲದ ಕುಡಂಡ ರಫೀಕ್ ಅಲಿ, ಉದ್ಯೋಗ ಅರಸಿ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ತಾಯ್ನಾಡಿನ ಸತ್ವ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಅನಿವಾಸಿ ಭಾರತೀಯನ ಆದ್ಯತೆ ಯಾಗಲಿ ಎಂದರು.

ಯುಎಇ ಕೊಡಗು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೋಮವಾರಪೇಟೆಯ ಹುಸೇನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ಖಾಲಿದ್ ಬಿನ್ ಮೊಹಮ್ಮದ್ ಅಲ್ ಮರ್ರಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಕೊಡಗು ಪ್ರತಿನಿಧಿ ಕುಶಾಲನಗರದ ಗಣೇಶ್ ರೈ, ದುಬೈ ಕೊಡಗು– ದಕ್ಷಣಿ ಕನ್ನಡ ಗೌಡ ಸಮಾಜದ ಅಧ್ಯಕ್ಷ ಹರೀಶ್ ಕೋಡಿ, ‘ಕನ್ನಡಿಗರು ದುಬೈ’ ಸಂಘದ ಅಧ್ಯಕ್ಷ ವೀರೇಂದ್ರ ಬಾಬು, ಮಾಜಿ ಅಧ್ಯಕ್ಷ ಮಂಡ್ಯದ ಡಾ.ಮಲ್ಲಿಕಾರ್ಜುನ ಗೌಡ, ಯುಎಇ ನ ‘ಟೀಮ್‌ ಹಾಕಿ ಕೂರ್ಗ್’ನ ವ್ಯವಸ್ಥಾಪಕ ಪೊನ್ನಿಮಾಡ ಲೋಕೇಶ್ ಕಾರ್ಯಪ್ಪ, ಉದ್ಯಮಿ ವಿರಾಜಪೇಟೆಯ ಶಕೀಲ್, ಮಡಿಕೇರಿಯ ಆರೀಫ್, ಗೋಣಿಕೊಪ್ಪಲಿನ ಇಬ್ರಾಹಿಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.