ADVERTISEMENT

ಧಾರಾಕಾರ ಮಳೆ; ಧರೆಗುರುಳಿದ ವಿದ್ಯುತ್ ಕಂಬಗಳು

₹ 25ರಿಂದ ₹ 30 ಲಕ್ಷದಷ್ಟು ನಷ್ಟ ಸಂಭವ

​ಪ್ರಜಾವಾಣಿ ವಾರ್ತೆ
Published 5 ಮೇ 2017, 8:49 IST
Last Updated 5 ಮೇ 2017, 8:49 IST

ಸುಂಟಿಕೊಪ್ಪ:  ಸುಂಟಿಕೊಪ್ಪ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆ, ಗಾಳಿಯಿಂದ ನೂರಕ್ಕೂ ಹೆಚ್ಚಿನ ವಿದ್ಯುತ್ ಕಂಬಗಳು ಧರೆಗುರುಳಿವೆ. ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಕುಸಿದಿದೆ.

ಸುಂಟಿಕೊಪ್ಪ, ನಾಕೂರು, ಕಾನ್ ಬೈಲ್, ಕೆದಕಲ್, ಮತ್ತಿಕಾಡು, ಏಳನೇ ಹೊಸಕೋಟೆ ವ್ಯಾಪ್ತಿಯಲ್ಲಿ ಸುಮಾರು 100ಕ್ಕೂ ಕೆಚ್ಚು ವಿದ್ಯುತ್ ಕಂಬಗಳು ಹಾನಿಯಾಗಿವೆ.

ಹೆಚ್ಚಿನ ಕಂಬಗಳಲ್ಲಿನ ತಂತಿಗಳು ತುಂಡರಿಸಿ ನಷ್ಟ ಸಂಭವಿಸಿದೆ. ನಾಕೂರು ಸುತ್ತಮತ್ತಲಿನ ಗ್ರಾಮಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ, ಗಾಳಿಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ಈ ಭಾಗಗಳಲ್ಲಿ ವಿದ್ಯುತ್ ಇಲ್ಲದೇ ಕತ್ತಲೆಯಲ್ಲಿ ಕಾಲ ಕಳೆಯುವಂತ ಪರಿಸ್ಥಿತಿ ಎದುರಾಗಿದೆ. ಜತೆಗೆ, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸೆಸ್ಕಾಂ ಕಿರಿಯ ಎಂಜಿನಿಯರ್ ರಮೇಶ್, ‘ಸುಂಟಿಕೊಪ್ಪ ಸುತ್ತಮತ್ತಲಿನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಗಾಳಿ, ಮಳೆಗೆ ನೂರಾರು ಕಂಬಗಳಿಗೆ ಹಾನಿ ಉಂಟಾದರಿಂದ ಅಂದಾಜು ಸುಮಾರು ₹ 25ರಿಂದ ₹ 30 ಲಕ್ಷದಷ್ಟು ನಷ್ಟ ಸಂಭವಿಸಿದೆ. ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಬಗೆಹರಿಸುವುದು ಕಷ್ಟಕರವಾಗಿದೆ. ಆದಷ್ಟು ಬೇಗನೇ ಎಲ್ಲ ಗ್ರಾಮಗಳಲ್ಲಿ ಬಿದ್ದಿರುವ ಕಂಬಗಳನ್ನು ಸರಿಪಡಿಸಲಾಗುವುದು’ ಎಂದು ತಿಳಿಸಿದರು.

ಧಾರಾಕಾರ ಮಳೆ: ಸುಂಟಿಕೊಪ್ಪ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ರಾತ್ರಿ ಆರಂಭವಾದ ಗಾಳಿ, ಸಿಡಿಲಿನಿಂದ ಕೂಡಿದ ಮಳೆಯು ಸುಮಾರು ಒಂದೂವರೆ ತಾಸುಗಳ ಕಾಲ ಎಡೆಬಿಡದೇ ಸುರಿಯಿತು. ಇದರಿಂದ ರಸ್ತೆಯಲ್ಲಿ ನೀರು ತುಂಬಿ ಕೆರೆಯಂತಾಯಿತು. 30 ನಿಮಿಷಗಳ ಕಾಲ ವಾಹನ ಚಾಲಕರು ತಮ್ಮ ವಾಹನಗಳನ್ನು ಚಲಾಯಿಸುವುದಕ್ಕೆ ಸಾಧ್ಯವಾಗದೇ ಪರದಾಡಿದರು.

ಹಾರಿದ ಹೆಂಚುಗಳು:  ಗಾಳಿಯ ರಭಸಕ್ಕೆ ಇಲ್ಲಿನ ಗ್ರಾಮ ಪಂಚಾಯಿತಿಯ 50ಕ್ಕೂ ಹೆಚ್ಚು ಹೆಂಚುಗಳು ಹಾರಿ ಹೋಗಿವೆ. ಅಪ್ಪಾರಂಡ ಬಡಾವಣೆಯ ಬಿ.ಕೆ.ಪ್ರಶಾಂತ್ ಎಂಬುವವರಿಗೆ ಸೇರಿದ ಮನೆಗೆ ಹಾನಿಯಾಗಿದೆ. ಕಬ್ಬು, ಬಾಳೆ ಗಿಡಗಳು ನೆಲಕಚ್ಚಿ ಅಪಾರ ನಷ್ಟ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.